ಮೂಡುಬಿದಿರೆ:ಇಲ್ಲಿನ ಪುರಸಭೆ ಮಾರುಕಟ್ಟೆ ಕಾಮಗಾರಿಗೆ ಪುರಾತತ್ವ ಇಲಾಖೆ ನಿರಾಕ್ಷೇಪಣೆ ಪತ್ರ ನೀಡಿದ್ದು, ಕಾನೂನಿನ ತೊಡಕಿನಿಂದಾಗಿ ಹಲವು ವರ್ಷಗಳಿಂದ ಸ್ಥಗಿತಗೊಂಡಿದ್ದ ಕಾಮಗಾರಿಯನ್ನು ಪುನರಾರಂಭಿಸಲಾಗಿದೆ ಎಂದು ಮುಖ್ಯಾಧಿಕಾರಿ ಇಂದು ಎಂ ತಿಳಿಸಿದರು.
ಬುಧವಾರ ನಡೆದ ಪುರಸಭೆ ಮಾಸಿಕ ಸಭೆಯಲ್ಲಿ ಮಾತನಾಡಿದ ಅವರು, ಪ್ರಕರಣ ಸುಮಾರು ಏಳು ವರ್ಷ ಕೋರ್ಟ್‌ನಲ್ಲಿ ಇದ್ದ ಕಾರಣ ಈ ಅವಧಿಯ ನಷ್ಟವನ್ನು ನೀಡುವಂತೆ ಗುತ್ತಿಗೆದಾರರು ಪುರಸಭೆಗೆ ಬೇಡಿಕೆ ಇಟ್ಟಿದ್ದಾರೆ ಎಂದು ಸಭೆಗೆ ತಿಳಿಸಿದರು. ಈ ಬಗ್ಗೆ ವಕೀಲರಿಂದ ಕಾನೂನು ಸಲಹೆ ಪಡೆದು ನಿರ್ಧರಿಸುವಂತೆ ಸದಸ್ಯರು ಸಲಹೆ ನೀಡಿದರು.
ಕೋರ್ಟ್ ಮೆಟ್ಟಲೇರಿದ್ದರಿಂದ ಮಾರುಕಟ್ಟೆ ಕಾಮಗಾರಿಗೆ ಹಲವು ವರ್ಷ ತಡೆಯಾಗಿದ್ದು ಇದರಿಂದ ಮೂಡುಬಿದಿರೆ ಅಭಿವೃದ್ಧಿಗೆ ತೊಂದರೆಯಾಗಿದೆ. ಇದಕ್ಕೆ ಯಾರು ಹೊಣೆ ಎಂದು ಕಾಂಗ್ರೆಸ್‌ನ ಸುರೇಶ್ ಕೋಟ್ಯಾನ್ ಮತ್ತು ಕೊರಗಪ್ಪ ಆಡಳಿತ ಬಿಜೆಪಿ ಸದಸ್ಯರನ್ನು ಪ್ರಶ್ನಿಸಿದರು. ಮಾರುಕಟ್ಟೆಗೆ ನಮ್ಮ ವಿರೋಧ ಇರಲಿಲ್ಲ. ಆದರೆ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಬೇಡ, ಸರ್ಕಾರ ಮತ್ತು ಪುರಸಭೆ ಅನುದಾನ ಬಳಸಿ ಕಟ್ಟಡ ನಿರ್ಮಿಸೋಣ ಎಂದು ಹೇಳಿರುವುದಾಗಿ ಉಪಾಧ್ಯಕ್ಷ ನಾಗರಾಜ ಪೂಜಾರಿ ಸ್ಪಷ್ಟಪಡಿಸಿದರು.
ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕುವವರನನ್ನು ಪತ್ತೆ ಹಚ್ಚುವಲ್ಲಿ ಪುರಸಭೆ ಅಧಿಕಾರಿಗಳು ವಿಫಲರಾಗಿದ್ದಾರೆ. ಇದರಿಂದ ಪುರಸಭೆ ವ್ಯಾಪ್ತಿಯಲ್ಲಿ ಕಸದ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ವಿಶಾಲ ನಗರದಲ್ಲಿ ಕಸದ ರಾಶಿ ತುಂಬಿದ್ದರು ವಿಲೇವಾರಿ ಮಾಡಿಲ್ಲ. ಸಿಸಿಟಿವಿ ಕ್ಯಾಮೆರಾಗಳ ಬುಡದಲ್ಲೆ ಕಸ ಹಾಕಿದರೂ ಅಂತವರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳುವುದಕ್ಕೆ ಪರಿಸರ ಎಂಜಿನಿಯರ್ ಹಾಗೂ ಆರೋಗ್ಯ ನಿರೀಕ್ಷಕರು ಆಸಕ್ತಿ ವಹಿಸುತ್ತಿಲ್ಲ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಮುಖ್ಯಾಧಿಕಾರಿ ಮತ್ತು ಕೌನ್ಸಿಲ್ ಮೇಲೆ ಜವಾಬ್ದಾರಿ ಹಾಕಿ ತಾವು ನುಣುಚಿಕೊಳ್ಳುತ್ತಿದ್ದಾರೆ. ಪುರಸಭೆ ಅಧ್ಯಕ್ಷರು ಮೃದು ಸ್ವಭಾವದವರಾದ್ದರಿಂದ ಹೀಗಾಗುತ್ತಿದೆ ಎಂದು ಸುರೇಶ್ ಪ್ರಭು, ರಾಜೇಶ್ ನಾಯಕ್, ಪ್ರಸಾದ್ ಕುಮಾರ್ ಆರೋಪಿಸಿದರು.
ಮಾರುಕಟ್ಟೆಯಲ್ಲಿ ಚರಂಡಿ ಬ್ಲಾಕ್ ಆಗಿ ದುರ್ನಾತ ಬೀರುವ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಪುರಸಭೆಗೆ ಕೆಟ್ಟ ಹೆಸರು ಬರುವಂತಾಗಿದೆ ಎಂದು ಕೊರಗಪ್ಪ ಆರೋಪಿಸಿದರು. ತ್ಯಾಜ್ಯ ವಿಲೇವಾರಿಯಲ್ಲಿ ಪುರಸಭೆ ಸಮರ್ಪಕ ಕೆಲಸ ಮಾಡುತ್ತಿಲ್ಲ ಎಂದು ಹೆಚ್ಚಿನ ಸದಸ್ಯರು ಆರೋಪಿಸಿದರು. ಮನೆ ಮನೆ ಕಸ ಸಂಗ್ರಹದ ವಾಹನದಲ್ಲಿ ಕಡ್ಡಾಯವಾಗಿ ಧ್ವನಿವರ್ಧಕದ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಎಂದು ಸದಸ್ಯರು ಸಲಹೆ ನೀಡಿದರು. ಈ ಬಗ್ಗೆ ಪ್ರತಿ ತಿಂಗಳು ಪೌರ ಕಾರ್ಮಿಕರ ಸಭೆ ನಡೆಸಬೇಕು ಎಂದು ಸದಸ್ಯರು ತಿಳಿಸಿದರು.
ಪೇಟೆಯ ಹೃದಯ ಭಾಗದಲ್ಲಿರುವ ಹಳೆ ಪುರಸಭೆ ಕಟ್ಟಡದ ಜಾಗದಲ್ಲಿ ವಾಣಿಜ್ಯ ಸಂಕೀರ್ಣದ ಕಾಮಗಾರಿ ಅವೈಜ್ಞಾನಿಕ ರೀತಿಯಲ್ಲಿ ನಡೆಯುತ್ತಿದೆ ಎಂದು ಸುರೇಶ್ ಕೋಟ್ಯಾನ್ ಮತ್ತು ಕೊರಗಪ್ಪ ಆರೋಪಿಸಿದರು. ಕಾಮಗಾರಿಯ ಎಂಜಿನಿಯರನ್ನು ಕರೆಸಿ ವಿಷಯ ತಿಳಿಸಿ. ಅಲ್ಲಿಯವರೆಗೆ ಕಾಮಗಾರಿ ನಡೆಸುವುದು ಬೇಡ. ಜಿಲ್ಲಾಧಿಕಾರಿಯ ಗಮನಕ್ಕೂ ತನ್ನಿ ಎಂದು ಹಿರಿಯ ಸದಸ್ಯ ಪಿ.ಕೆ ಥೋಮಸ್ ತಿಳಿಸಿದರು.
ಕರಿಂಜೆ ಗ್ರಾಮದಲ್ಲಿ ಕುಮ್ಕಿ ಸ್ಥಳದಲ್ಲಿ ಉದ್ಯಾನ ನಿರ್ಮಾಣಕ್ಕೆ ಮುಂದಾಗಿರುವುದಕ್ಕೆ ವಿರೋಧ ವ್ಯಕ್ತ ಪಡಿಸಿದ ಪುರಸಭೆ ಮಾಜಿ ಉಪಾಧ್ಯಕ್ಷೆ ಸುಜಾತ ಶಶಿಕಿರಣ್ ಇದರ ಹಿಂದೆ ಸ್ವಹಿತಾಸಕ್ತಿ ಇದೆ ಎಂದು ಆರೋಪಿಸಿದರು. ಸಾರ್ವಜನಿಕ ಉದ್ದೇಶಕ್ಕೆ ಉದ್ಯಾನ ನಿರ್ಮಿಸಲಾಗುತ್ತದೆ. ಇದು ನನ್ನ ಕ್ಷೇತ್ರ, ನೀವು ಅಡ್ಡಿಪಡಿಸುವುದು ಸರಿ ಅಲ್ಲ ಎಂದು ಅಧ್ಯಕ್ಷೆ ಜಯಶ್ರೀ ಕೇಶವ ಉತ್ತರಿಸಿದರು. ಸುದೀರ್ಘ ಚರ್ಚೆಯ ಬಳಿಕ ಪ್ರದೇಶ ಕುಮ್ಕಿ ಸ್ಥಳದಲ್ಲಿದೆಯೆ ಎಂಬುದನ್ನು ಖಚಿತಪಡಿಸಲು ಪುರಸಭೆ ಮತ್ತು ಕಂದಾಯ ಇಲಾಖೆ ಜಂಟಿ ಸರ್ವೆ ನಡೆಸಲು ನಿರ್ಧರಿಸಲಾಯಿತು.
ಅಧ್ಯಕ್ಷೆ ಜಯಶ್ರೀ ಕೇಶವ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸ್ಥಾಯಿ ಸಮಿತಿ ಅಧ್ಯಕ್ಷೆ ಸ್ವಾತಿ ಎಸ್.ಪ್ರಭು ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.