ಮುಡಿಪು: ಹರೇಕಳ ಕಡವಿನ ಬಳಿ ಸಮೀಪದ ನೇತ್ರಾವತಿ ನದಿಯಲ್ಲಿ ತಾಯಿ ಹಾಗೂ ಒಂದು ವರ್ಷದ ಮಗುವಿನ ಮೃತದೇಹ ಶುಕ್ರವಾರ ರಾತ್ರಿ ಪತ್ತೆಯಾಗಿದೆ. ತಾಯಿಯು ಮಗುವಿನೊಂದಿಗೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಮೃತ ಮಹಿಳೆಯನ್ನು ಚೈತ್ರಾ (30) ಎಂದು ಗುರುತಿಸಲಾಗಿದೆ. ಅಡ್ಯಾರ್ ನಿವಾಸಿಯಾಗಿರುವ ಅವರು ತಮ್ಮ ಒಂದು ವರ್ಷದ ಮಗುವಿನೊಂದಿಗೆ ಮಧ್ಯಾಹ್ನ ಸೇತುವೆಯ ಮೂಲಕ ನಡೆದುಕೊಂಡು ಬಂದು ಹರೇಕಳ ಕಡವಿನಬಳಿ ಹೋಗಿರುವುದನ್ನು ಕೆಲವರು ನೋಡಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.
ನದಿಯ ಸಮೀಪ ನಡೆದುಕೊಂಡು ಹೋಗುವುದನ್ನು ಸ್ಥಳೀಯರು ನೋಡಿದ್ದರು. ಆದರೆ, ಮಧ್ಯಾಹ್ನದ ಬಳಿಕ ಆಕೆಯ ಮನೆಯವರು ಹರೇಕಳಕ್ಕೆ ಬಂದು ಸ್ಥಳೀಯರಲ್ಲಿ ಆ ಮಹಿಳೆ ಮತ್ತು ಮಗುವಿನ ಬಗ್ಗೆ ವಿಚಾರಿಸಿದ್ದರು. ಆ ಬಳಿಕವಷ್ಟೇ ಸ್ಥಳೀಯರಿಗೆ ಮಹಿಳೆ ನಾಪತ್ತೆಯಾಗಿರುವ ಬಗ್ಗೆ ತಿಳಿದಿತ್ತು. ರಾತ್ರಿ 8.30ರ ವೇಳೆಗೆ ಹರೇಕಳ ನೇತ್ರಾವತಿ ನದಿಯಲ್ಲಿ ತಾಯಿ ಮಗುವಿನ ಮೃತದೇಹಗಳು ಜೊತೆಯಲ್ಲೇ ಪತ್ತೆಯಾಗಿದೆ. ಕೊಣಾಜೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.