ಮಂಗಳೂರು: ಇಬ್ಬರು ಸಹಾಯಕ ನಗರ ಯೋಜನಾಧಿಕಾರಿಗಳು, ಒಬ್ಬರು ನಗರ ಯೋಜನಾಧಿಕಾರಿ ಮತ್ತು ಒಬ್ಬರು ನಗರ ಯೋಜನಾ ಸದಸ್ಯ ಹುದ್ದೆಗಳನ್ನು ನಿರ್ವಹಿಸುತ್ತಿರುವುದು ಒಬ್ಬರು ಸಹಾಯಕ ನಗರ ಯೋಜನಾಧಿಕಾರಿ ಮಾತ್ರ. ಆಯುಕ್ತರು ಸೇರಿದಂತೆ ಪ್ರಮುಖ ಹುದ್ದೆಯಲ್ಲಿರುವವರೆಲ್ಲರೂ ಹಗಲು–ರಾತ್ರಿ ಕಡತ ಯಜ್ಞದಲ್ಲಿ ತೊಡಗಿಸಿಕೊಳ್ಳಬೇಕಾದ ಅನಿವಾರ್ಯ ಸ್ಥಿತಿ. ಕೆಲಸದಲ್ಲಿ ಉಳಿಯದ ಭದ್ರತಾ ಸಿಬ್ಬಂದಿ...
ದಲ್ಲಾಳಿಗಳ ಕಾಟ, ವಾಟ್ಸ್ ಆ್ಯಪ್ ಗ್ರೂಪ್‌ನಲ್ಲಿ ಆಯುಕ್ತರಿಗೆ ಅವಮಾನ ಮತ್ತು ದೂರವಾಣಿ ಕರೆ ಮೂಲಕ ಜೀವ ಬೆದರಿಕೆ ಒಡ್ಡಲಾಗಿದೆ ಎಂಬ ವಿಷಯ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಈಗಿನಿ ಸ್ಥಿತಿ ಇದು.
ಸಿಂಗಲ್ ಸೈಟ್, ಕಟ್ಟಡ ಪರವಾನಗಿ ಮುಂತಾದ ಕೆಲಸಗಳಿಗೆ ಸಂಬಂಧಿಸಿ ತಿಂಗಳಿಗೆ 1200ರಷ್ಟು ಅರ್ಜಿಗಳು ಸಲ್ಲಿಕೆಯಾಗುತ್ತಿವೆ. ಮುಡಾದಲ್ಲಿ ದಲ್ಲಾಳಿಗಳ ಮೇಲೆ ನಿಯಂತ್ರಣ ಹೇರಲಾಗಿದೆ. ಜನವರಿಯಿಂದ ‘ಇ–ಆಫೀಸ್’ ಮೂಲಕ ಕಡತಗಳ ವಿಲೇವಾರಿ ಆಗುತ್ತಿದೆ. ಆದರೂ ಸಮಸ್ಯೆಗಳು ಬೆಟ್ಟದಷ್ಟು ಉಳಿದುಕೊಂಡಿವೆ ಎನ್ನುತ್ತಾರೆ ಅಧಿಕಾರಿಗಳು.
‘ನಾಲ್ಕು ಮಂದಿಯ ಕೆಲಸವನ್ನು ಒಬ್ಬನೇ ನಿರ್ವಹಿಸುತ್ತಿದ್ದೇನೆ. ಪ್ರತಿದಿನ 50ರಿಂದ 60ರಷ್ಟು ಕಡತಗಳು ಬರುತ್ತವೆ. ಅವುಗಳನ್ನು ಪರಿಶೀಲಿಸಿ ಮಾಹಿತಿ ಸಮರ್ಪಕವಾಗಿಲ್ಲ ಎಂದಾದರೆ ಅಥವಾ ಪೂರಕ ದಾಖಲೆಗಳು ಇಲ್ಲವಾದರೆ ವಾಪಸ್ ಕಳುಹಿಸಬೇಕು. ವಲಯ, ಸೆರ್ವೆ ಸ್ಕೆಚ್, ಆರ್‌ಟಿಸಿ, ಮಾಲೀಕತ್ವ ಪರಿಶೀಲಿಸಬೇಕು. ಸರಿಯಾಗಿ ಬಂದ ನಂತರ ಮತ್ತೊಮ್ಮೆ ಕಣ್ಣಾಡಿಸಬೇಕು. ಒಂದು ಕಡತದ ಮೇಲೆ ಕನಿಷ್ಠ 10 ನಿಮಿಷವಾದರೂ ವಿನಿಯೋಗಿಸಬೇಕು. ಇದೆಲ್ಲ ಸಾಧ್ಯವಾಗುವುದಾದರೂ ಹೇಗೆ’ ಎಂದು ಸಹಾಯಕ ನಗರ ಯೋಜನಾಧಿಕಾರಿ ರಘು ಕೇಳಿದರು.
‘ಸಿಬ್ಬಂದಿ ಕೊರತೆ ತೀವ್ರವಾಗಿ ಕಾಡುತ್ತಿದೆ. ಇರುವವರ ಪೈಕಿ ಬಹುತೇಕರು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವವರು. ಸಮರ್ಪಕ ಸಿಬ್ಬಂದಿ ಇಲ್ಲದ್ದರಿಂದ ಸಾರ್ವಜನಿಕರ ಕೆಲಸಗಳು ಕಾಲಕ್ಕೆ ಆಗುತ್ತಿಲ್ಲ. ಇದರ ನಡುವೆ ದಲ್ಲಾಳಿಗಳ ಕಾಟವೂ ಇತ್ತು. ಅದಕ್ಕೆ ಸ್ವಲ್ಪ ಮಟ್ಟಿಗೆ ಪರಿಹಾರ ಕಂಡುಕೊಳ್ಳಲಾಗಿದೆ. ಆದರೆ ಜನರ ಕೆಲಸಗಳನ್ನು ಮಾಡಿಕೊಡುವುದಕ್ಕಾಗಿ ಮಧ್ಯರಾತ್ರಿ ಒಂದು ಗಂಟೆಯ ವರೆಗೆ ಮತ್ತು ಮುಂಜಾನೆ 4 ಗಂಟೆಗೆ ಎದ್ದು ಕಡತಗಳ ಪರಿಶೀಲನೆ ಮಾಡಿದ್ದೇವೆ. ಇ–ಆಫೀಸ್ ಸಾಫ್ಟ್‌ವೇರ್‌ನಲ್ಲಿ ಈ ಕೆಲಸಗಳೆಲ್ಲವೂ ದಾಖಲಾಗಿವೆ’ ಎಂದು ಆಯುಕ್ತೆ ನೂರ್ ಜಹರಾ ಖಾನಂ ಹೇಳಿದರು.
‘ಮಂಗಳೂರಿನಲ್ಲಿ ಯಾರೂ ದೊಡ್ಡ ಪ್ರಮಾಣದ ಜಮೀನು ಇರಿಸಿಕೊಂಡಿಲ್ಲ. ಎಲ್ಲವನ್ನು ಸಣ್ಣಸಣ್ಣ ಪ್ಲಾಟ್‌ಗಳನ್ನಾಗಿಸಿದ್ದಾರೆ. ಹೀಗಾಗಿ ಸಿಂಗಲ್ ಸೈಟ್ ಪರವಾನಗಿಗಾಗಿ ಬರುವ ಅರ್ಜಿಗಳೇ ಹೆಚ್ಚು. ದಲ್ಲಾಳಿಗಳು ಒಳಗೆ ಬಂದು ಅರ್ಜಿಗಳು ಯಾವ ಹಂತದಲ್ಲಿವೆ ಎಂದು ವಿಚಾರಿಸುವುದು, ಕಡತಗಳಿಗೆ ಕೈ ಹಾಕುವುದು ಇತ್ಯಾದಿ ಮಾಡುತ್ತಿದ್ದರು. ಅಂಥ ಚಟುವಟಿಕೆ ತಡೆಯಲು ಸಾಧ್ಯವಾಗಿದೆ ಎಂಬುದು ಸಮಾಧಾನದ ವಿಷಯ’ ಎಂದು ಅವರು ಹೇಳಿದರು.
ಭಾರಿ ಒತ್ತಡವಿದೆ. ಕಚೇರಿ ಅವಧಿಯಲ್ಲೇ ಎಲ್ಲವನ್ನೂ ಮಾಡಿಮುಗಿಸಲು ಸಾಧ್ಯವಿಲ್ಲ. ಆದ್ದರಿಂದ ಕೆಲವು ದಿನ ಬೆಳಿಗ್ಗೆ ಬೇಗ ಕಚೇರಿಗೆ ಬಂದು ಕಡತ ವಿಲೇವಾರಿ ಮಾಡಿದ್ದೆ. ಅದಕ್ಕೂ ಆಕ್ಷೇಪ ಬಂದ ಕಾರಣ ನಿಲ್ಲಿಸಿದೆ. ರಾತ್ರಿ 9 ಗಂಟೆಯ ವರೆಗೆ ಕಚೇರಿಯಲ್ಲೇ ಇದ್ದದ್ದೂ ಇದೆ.ರಘು ಸಹಾಯಕ ನಗರ ಯೋಜನಾಧಿಕಾರಿ
ಯಾರಿಗೂ ಸಂಪೂರ್ಣ ನಿಷೇಧ ಹೇರಲಿಲ್ಲ. ಮಧ್ಯವರ್ತಿ ಸಹಾಯ ಬೇಕೇ ಬೇಕೆಂದಿದ್ದರೆ ಅಧಿಕೃತ ಎಂಜಿನಿಯರ್ ಮತ್ತು ವಕೀಲರ ಜೊತೆ ಬರುವಂತೆ ಸೂಚಿಸಲಾಗಿದೆ. ಬಹುತೇಕರು ಸ್ವತಃ ತಮ್ಮ ಕೆಲಸ ಮಾಡಿಸಿಕೊಳ್ಳಲು ಸಾಧ್ಯವಾಗುವಂತಹ ವಾತಾವರಣ ಸೃಷ್ಟಿಯಾಗಿದೆ.ನೂರ್ ಜಹರಾ ಖಾನಂ. ಮುಡಾ ಆಯುಕ್ತೆ
ಸುಮ್ಮಸುಮ್ಮನೇ ಯಾರನ್ನೂ ಒಳಗೆ ಬಿಡುತ್ತಿಲ್ಲ. ಅರ್ಜಿ ಕೊಡಲು ಬರುವವರು ಅಥವಾ ಕೊಟ್ಟ ಅರ್ಜಿಯ ಕುರಿತು ವಿಚಾರಿಸಲು ಬರುವವರು ಅಧಿಕಾರಿಗಳ ಭೇಟಿಗೆ ಬರುವವರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಬರುವವರೆಲ್ಲರ ಮಾಹಿತಿ ದಾಖಲಿಸಲಾಗುತ್ತದೆ.ಇಸ್ಮಾಯಿಲ್ ಸುರತ್ಕಲ್ ಭದ್ರತಾ ಸಿಬ್ಬಂದಿ
ಮುಡಾದಲ್ಲಿ ತುಂಬ ಸುಧಾರಣೆ ಆಗಿದೆ. ಹಿಂದೆಲ್ಲ ಯಾವುದಾದರೂ ಕೆಲಸಕ್ಕೆ ಬಂದರೆ ಮಾತನಾಡಿಸುವವರೇ ಇರಲಿಲ್ಲ. ಈಗ ಎಲ್ಲದಕ್ಕೂ ಉತ್ತರಿಸುತ್ತಾರೆ. ಕೆಲಸಗಳು ಕೂಡ ನಿಗದಿ ಅವಧಿಯಲ್ಲಿ ಆಗುತ್ತವೆ. ಇಂಥ ಬೆಳಗಣಿಗೆಗಳಿಂದಾಗಿ ಸಾರ್ವಜನಿಕರಲ್ಲಿ ಭರವಸೆ ಮೂಡಿದೆ.ಜಯಪ್ರಕಾಶ್ ಕೊಡಿಯಾಲ್ ಬೈಲ್ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.