ADVERTISEMENT

ಬಹುಕೋಟಿ ವಂಚನೆ ಪ್ರಕರಣ | ₹ 50 ಕೋಟಿಗೂ ಹೆಚ್ಚು ವಹಿವಾಟಿನ ದಾಖಲೆ ಪತ್ತೆ

​ಪ್ರಜಾವಾಣಿ ವಾರ್ತೆ
Published 21 ಜುಲೈ 2025, 23:30 IST
Last Updated 21 ಜುಲೈ 2025, 23:30 IST
   

ಮಂಗಳೂರು: ಬಹುಕೋಟಿ ವಂಚನೆ ಪ್ರಕರಣದಲ್ಲಿ ಬಂಧನದಲ್ಲಿರುವ ಆರೋಪಿ ಕಂಕನಾಡಿ ಬೊಲ್ಲಗುಡ್ಡದ ರೋಷನ್ ಸಲ್ಡಾನ, ₹ 50 ಕೋಟಿಗೂ ಹೆಚ್ಚು ವಹಿವಾಟು ನಡೆಸಿದ್ದಕ್ಕೆ ಸಂಬಂಧಿಸಿದ ಮತ್ತಷ್ಟು ದಾಖಲೆಗಳು ಲಭ್ಯವಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಸಲ್ಡಾನ ₹10 ಕೋಟಿ ವಂಚಿಸಿರುವುದಾಗಿ ಒಬ್ಬರು ಹಾಗೂ ಆತನಿಂದ ₹1 ಕೋಟಿ ವಂಚನೆಯಾಗಿದೆ ಎಂದು ಇನ್ನೊಬ್ಬರು ದೂರು ನೀಡಿದ್ದರು. ಈ ದೂರುಗಳ ಆಧಾರದಲ್ಲಿ, ಸೆನ್ ಠಾಣೆಯ ಎಸಿಪಿ ರವೀಶ್ ನಾಯಕ್‌ ನೇತೃತ್ವದ ಪೊಲೀಸ್ ಅಧಿಕಾರಿಗಳ ತಂಡವು ನಗರದ ಕಂಕನಾಡಿಯ ಬೊಲ್ಲಗುಡ್ಡದಲ್ಲಿರುವ ಮನೆಯಲ್ಲಿ ಆತನನ್ನು ಗುರುವಾರ ಬಂಧಿಸಿತ್ತು. ಮನೆಯ ಕಟ್ಟಡದಲ್ಲೇ ಆತನ ಅಡಗುತಾಣವೂ ಪತ್ತೆಯಾಗಿದ್ದು, ಆರೋಪಿ ಸಂಗ್ರಹಿಸಿಟ್ಟಿದ್ದ 667 ಗ್ರಾಂ ಚಿನ್ನಾಭರಣಗಳು, ₹ 2.75 ಕೋಟಿ ಮೌಲ್ಯದ ವಜ್ರದುಂಗುರಗಳು,  ದೇಶಿ ಮತ್ತು ವಿದೇಶಿ ಮದ್ಯವನ್ನು (₹ 6.72 ಲಕ್ಷ ಮೌಲ್ಯ) ಪೊಲೀಸರು ವಶಪಡಿಸಿಕೊಂಡಿದ್ದರು. ವಿವಿಧ ರಾಜ್ಯಗಳ ಉದ್ಯಮಿಗಳಿಗೆ ಸಾಲ ನೀಡುವುದಾಗಿ ನಂಬಿಸಿ ಆರೋಪಿ ಮತ್ತು ಆತನ ಸಹಚರರು ₹ 32 ಕೋಟಿಗೂ ಹೆಚ್ಚು ಹಣವನ್ನು ಮೂರು ತಿಂಗಳಿನಿಂದ ಈಚೆಗೆ ಪಡೆದಿದ್ದಕ್ಕೆ ಸಂಬಂಧಿಸಿದ ದಾಖಲೆಗಳು ಈ ವೇಳೆ ಪತ್ತೆಯಾಗಿದ್ದು, ಅವುಗಳನ್ನೂ ಪೊಲೀಸರು ವಶಪಡಿಸಿಕೊಂಡಿದ್ದರು.

’ಆರೋಪಿ ವಹಿವಾಟು ನಡೆಸಿದ್ದ ಇನ್ನಷ್ಟು ಬ್ಯಾಂಕ್‌ ಖಾತೆಗಳು ಪತ್ತೆಯಾಗಿವೆ. ಆತ  ಅವುಗಳ ಮೂಲಕ  ₹ 50 ಕೋಟಿಗೂ ಹೆಚ್ಚು ಮೊತ್ತದ ವಹಿವಾಟು ನಡೆಸಿದ ಮಾಹಿತಿ ಲಭ್ಯವಾಗಿದ್ದು, ಅವುಗಳನ್ನು ಪರಿಶೀಲಿಸಲಾಗುತ್ತಿದೆ’ ಎಂದು ನಗರ ಪೊಲೀಸ್ ಕಮಿಷನರ್‌ ಸುಧೀರ್‌ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

ADVERTISEMENT

‘ಬಿಹಾರದ ವ್ಯಕ್ತಿಗೆ ಆರೋಪಿಯು ₹ 10 ಕೋಟಿಗೂ ಹೆಚ್ಚು ವಂಚನೆ ನಡೆಸಿದ ಕುರಿತು ದಾಖಲಾದ ದೂರನ್ನು ಸಿಐಡಿಗೆ ಹಸ್ತಾಂತರಿಸಲಾಗಿದೆ’ ಎಂದೂ ಅವರು ಮಾಹಿತಿ ನೀಡಿದರು.

‘ಹೆಚ್ಚಿನ ವಿಚಾರಣೆ ಸಲುವಾಗಿ  ಆರೋಪಿಯನ್ನು ಪೊಲೀಸ್‌ ಕಸ್ಟಡಿಗೆ ಒಪ್ಪಿಸುವಂತೆ ತನಿಖಾಧಿಕಾರಿಯವರು ನ್ಯಾಯಾಲಯವನ್ನು ಕೋರಿದ್ದಾರೆ. ನ್ಯಾಯಾಲಯವು ಇದೇ 23ರಂದು ಆರೋಪಿಯನ್ನು ಪೊಲೀಸ್‌ ಕಸ್ಟಡಿಗೆ ನೀಡುವ ನಿರೀಕ್ಷೆ ಇದೆ’ ಎಂದು ಅವರು ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.