ADVERTISEMENT

ಮದುವೆ ನಿಶ್ಚಯವಾಗಿದ್ದ ಯುವಕನ ಕೊಲೆ: ಆರೋಪಿಗಳಿಗೆ ಜೀವಾವಧಿ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 29 ಜುಲೈ 2021, 4:16 IST
Last Updated 29 ಜುಲೈ 2021, 4:16 IST

ಮಂಗಳೂರು: ಮದುವೆ ನಿಶ್ಚಯವಾಗಿದ್ದ ಬೆಳ್ತಂಗಡಿ ತಾಲ್ಲೂಕಿನ ದಿಡುಪೆ ನಿವಾಸಿ ಸುರೇಶ್ ನಾಯ್ಕ ಕೊಲೆ ಪ್ರಕರಣದ ಆರೋಪಿಗಳಿಗೆ ಇಲ್ಲಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ ತಲಾ ₹ 15 ಸಾವಿರ ದಂಡ ವಿಧಿಸಿದೆ.

ಬೆಳ್ತಂಗಡಿ ನಾವರ ನಿವಾಸಿ ಆನಂದ ನಾಯ್ಕ, ಬೆಳ್ತಂಗಡಿ ಕಸಬಾ ನಿವಾಸಿ ಪ್ರವೀಣ್ ನಾಯ್ಕ, ಚಾರ್ಮಾಡಿ ನಿವಾಸಿ ವಿನಯ ಕುಮಾರ್, ಮೂಡುಕೋಡಿ ನಿವಾಸಿ ಪ್ರಕಾಶ್, ಬಂಟ್ವಾಳ ಪುದು ನಿವಾಸಿ ಲೋಕೇಶ್, ಮೇಲಂತಬೆಟ್ಟು ನಿವಾಸಿ ನಾಗರಾಜ ಅಪರಾಧಿಗಳು.

2017 ಏಪ್ರಿಲ್ 29 ರಂದು ಸುರೇಶ್‌ ನಾಯ್ಕ್‌ನನ್ನು ಉಜಿರೆಗೆ ಕರೆದು, ಆರೋಪಿಗಳಾದ ಪ್ರವೀಣ ನಾಯ್ಕ, ವಿನಯ್, ಪ್ರಕಾಶ್, ಲೋಕೇಶ್, ನಾಗರಾಜ್ ಸೇರಿ ಕುತ್ತಿಗೆಗೆ ಬಿಗಿದು ಕೊಲೆ ಮಾಡಿದ್ದಾರೆ. ಬಳಿಕ ಮೃತದೇಹವನ್ನು ಧರ್ಮಸ್ಥಳದ ಅವೆಕ್ಕಿ ಎಂಬಲ್ಲಿ ಗೋಣಿ ಚೀಲಹಾಕಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಗುರುತು ಸಿಗದಂತೆ ಸುಟ್ಟು ಹಾಕಿದ್ದರು.

ADVERTISEMENT

ಬೆಳ್ತಂಗಡಿ ಸರ್ಕಲ್‌ ಇನ್‌ಸ್ಪೆಕ್ಟರ್ ನಾಗೇಶ್ ಕದ್ರಿ ಮತ್ತು ಅಂದಿನ ಧರ್ಮಸ್ಥಳ ಸಬ್‌ ಇನ್‌ಸ್ಪೆಕ್ಟರ್‌ ಕೊರಗಪ್ಪ ನಾಯ್ಕ ಅವರ ತಂಡ ತನಿಖೆ ನಡೆಸಿ, ದೋಷಾರೋಪಣೆ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಈ ಪ್ರಕರಣದ ವಿಚಾರಣೆ ನಡೆಸಿದ 1 ನೇ ಹೆಚ್ಚವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಟಿ.ಪಿ. ರಾಮಲಿಂಗೇಗೌಡ ಅವರು, ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ ₹ 15 ಸಾವಿರ ದಂಡ ವಿಧಿಸಿದ್ದಾರೆ. ಮೃತನ ಕುಟುಂಬಕ್ಕೆ ₹ 1ಲಕ್ಷ ರೂ ಪರಿಹಾರ ನೀಡುವಂತೆ ಆದೇಶ ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಶೇಖರ್ ಶೆಟ್ಟಿ ಹಾಗೂ ರಾಜು ಪೂಜಾರಿ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.