ADVERTISEMENT

ಸರ್ಕಾರದಿಂದ ತಾರತಮ್ಯ: ಬೇಸರ

ಹತ್ಯೆಗೀಡಾದವರ ಕುಟುಂಬಕ್ಕೆ ಆರ್ಥಿಕ ನೆರವಿನ ಚೆಕ್ ವಿತರಣೆ; ದುಃಖತಪ್ತರಿಗೆ ಸಾಂತ್ವನದ ನುಡಿ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2022, 14:25 IST
Last Updated 11 ಆಗಸ್ಟ್ 2022, 14:25 IST
ಮಹಮ್ಮದ್ ಫಾಝಿಲ್ ಅವರ ತಂದೆ ಉಮರ್‌ ಫಾರೂಕ್ ಅವರಿಗೆ ಸೆಂಟ್ರಲ್ ಮುಸ್ಲಿಂ ಕಮಿಟಿಯ ಅಧ್ಯಕ್ಷ ಮಸೂದ್ ಹಾಜಿ ನೆರವಿನ ಚೆಕ್ ಹಸ್ತಾಂತರಿಸಿದರು. ಬಿ.ಎಂ.ಮಮ್ತಾಜ್ ಅಲಿ ಮತ್ತಿತರರು ಇದ್ದಾರೆ
ಮಹಮ್ಮದ್ ಫಾಝಿಲ್ ಅವರ ತಂದೆ ಉಮರ್‌ ಫಾರೂಕ್ ಅವರಿಗೆ ಸೆಂಟ್ರಲ್ ಮುಸ್ಲಿಂ ಕಮಿಟಿಯ ಅಧ್ಯಕ್ಷ ಮಸೂದ್ ಹಾಜಿ ನೆರವಿನ ಚೆಕ್ ಹಸ್ತಾಂತರಿಸಿದರು. ಬಿ.ಎಂ.ಮಮ್ತಾಜ್ ಅಲಿ ಮತ್ತಿತರರು ಇದ್ದಾರೆ   

ಮಂಗಳೂರು: ಕೊಲೆಯಾದ ಸುರತ್ಕಲ್‌ ಸಮೀಪದ ಕಾಟಿಪಳ್ಳ ಮಂಗಳಪೇಟೆಯ ಮಹಮ್ಮದ್ ಫಾಝಿಲ್ ಮತ್ತು ಸುಳ್ಯದ ಬೆಳ್ಳಾರೆಯ ಮಸೂದ್‌ ಅವರ ಕುಟುಂಬಗಳಿಗೆ ಆರ್ಥಿಕ ನೆರವಿನ ಚೆಕ್ ವಿತರಿಸಿದ ಮುಸ್ಲಿಂ ಸೆಂಟ್ರಲ್ ಕಮಿಟಿಯವರು ಸರ್ಕಾರದ ತಾರತಮ್ಯ ನೀತಿಯನ್ನು ಕಟುವಾಗಿ ಖಂಡಿಸಿದರು.

ಬೆಳಿಗ್ಗೆ ಮಸೂದ್ ಮನೆಗೆ ಹೋದ ಕಮಿಟಿ ಪದಾಧಿಕಾರಿಗಳು ಸಂಜೆ ಫಾಝಿಲ್ ಮನೆಗೆ ತೆರಳಿದರು. ಎರಡೂ ಕುಟುಂಬಗಳಿಗೆ ತಲಾ ₹ 30 ಲಕ್ಷ ಮೊತ್ತದ ಚೆಕ್ ವಿತರಿಸಿದರು. ಫಾಝಿಲ್‌ ತಂದೆ ಉಮರ್ ಫಾರೂಕ್ ಅವರಿಗೆ ಚೆಕ್ ಹಸ್ತಾಂತರಿಸಿದ ಕಮಿಟಿಯ ಅಧ್ಯಕ್ಷ ಮಸೂದ್ ಹಾಜಿ ಅವರು ‘ಸರ್ಕಾರ ನೆರವಿನ ಹಸ್ತ ಚಾಚುತ್ತದೆ ಎಂಬ ಭರವಸೆ ಹುಸಿಯಾಗಿದೆ. ಆದ್ದರಿಂದ ಕಮಿಟಿಯೇ ಸಹಾಯಕ್ಕೆ ಮುಂದಾಗಿದೆ. ಸರ್ಕಾರದ ಹಣ ಎಂದರೆ ಜನರ ಹಣ. ಅದನ್ನು ವಿನಿಯೋಗಿಸುವಾಗ ಭೇದ ಮಾಡುವುದು ಸರಿಯಲ್ಲ’ ಎಂದು ಹೇಳಿದರು.

‘ಮನುಷ್ಯರೆಲ್ಲರೂ ದೇವರ ಮಕ್ಕಳು. ಅವರಲ್ಲಿ ತಾರತಮ್ಯ ಮಾಡುವುದು ಸರಿಯಲ್ಲ. ಆರಾಧನೆ ಬೇರೆ ಬೇರೆಯಾಗಿದ್ದರೂ ಎಲ್ಲ ಧರ್ಮಗಳ ದೇವರು ಒಂದೇ’ ಎಂದು ಅವರು ಮಾರ್ಮಿಕವಾಗಿ ನುಡಿದರು.

ADVERTISEMENT

ಕೃಷ್ಣಾಪುರ ಏಳನೇ ಬ್ಲಾಕ್‌ ಕೇಂದ್ರ ಜುಮಾ ಮಸೀದಿಯ ಖತೀಬ್‌ ಫಾರೂಕ್ ಸಕಾಫಿ ಅವರು, ‘ಹತ್ಯೆಗೀಡಾದವರ ಕುಟುಂಬಗಳಿಗೆ ಸರ್ಕಾರ ನೆರವು ನೀಡಬೇಕಾಗಿತ್ತು. ಆದರೆ ಅಭಯಹಸ್ತ ನೀಡಲು ಅದು ಮುಂದಾಗಲಿಲ್ಲ. ಸರ್ಕಾರದ ಪ್ರತಿನಿಧಿಗಳು ಈ ಕುಟುಂಬಗಳ ಜನರನ್ನು ಭೇಟಿ ಕೂಡ ಮಾಡಲಿಲ್ಲ. ಆ ಮೂಲಕ ತಾರತಮ್ಯ ನೀತಿಯನ್ನು ಸ್ಪಷ್ಟವಾಗಿ ತೋರಿದೆ’ ಎಂದು ದೂರಿದರು.

‘ಯುವಕರನ್ನು ಕಳೆದುಕೊಂಡ ಮನೆಮಂದಿಯ ದುಃಖ ಎಷ್ಟೆಂದು ಹೇಳತೀರದು. ಬೇಸರಕ್ಕೆ ಜಾತಿ–ಧರ್ಮದ ಭೇದವಿಲ್ಲ. ಅದು ಎಲ್ಲರನ್ನು ಒಂದೇ ರೀತಿಯಲ್ಲಿ ಕಾಡುತ್ತದೆ. ಆದ್ದರಿಂದ ತಾರತಮ್ಯ ಬಿಟ್ಟು ಕೊಂದವರಿಗೂ ಅವರನ್ನು ಬೆಳೆಸಿದವರಿಗೂ ಕೊಲೆಗೆ ಪ್ರಚೋದನೆ ನೀಡಿದವರಿಗೂ ತಕ್ಕ ಶಿಕ್ಷೆಯಾಗಲಿ’ ಎಂದು ಅವರು ಆಗ್ರಹಿಸಿದರು.

‘ಪ್ರವೀಣ್ ನೆಟ್ಟಾರು ಅವರ ಕುಟಂಬಕ್ಕೂ ನೆರವು ನೀಡಲು ಸೆಂಟ್ರಲ್ ಕಮಿಟಿ ಬಯಸಿದೆ. ಕುಟುಂಬದವರು ಅನುವು ಮಾಡಿಕೊಟ್ಟರೆ ಅಲ್ಲಿಗೂ ಕಮಿಟಿ ಪ್ರತಿನಿಧಿಗಳು ತೆರಳಲಿದ್ದಾರೆ. ಜಿಲ್ಲೆಯಲ್ಲಿ ಇನ್ನೆಂದಿಗೂ ಇಂಥ ಘಟನೆಗಳು ಮರುಕಳಿಸಬಾರದು. ಎಲ್ಲರೂ ಪ್ರೀತಿ–ಸ್ನೇಹದಿಂದ ಬಾಳಬೇಕು, ಸೌಹಾರ್ದ ಬೆಳೆಯಲು ನೆರವಾಗಬೇಕು’ ಎಂದು ಅವರು ಆಶಿಸಿದರು.

ಮನೆ ಕಳೆದುಕೊಂಡವರಿಗೂ ನೆರವು

ಪ್ರಕೃತಿ ವಿಕೋಪದಿಂದ ಮನೆ ಬಿದ್ದುಹೋದವರಿಗೂ ಮಕ್ಕಳನ್ನು ಕಳೆದುಕೊಂಡವರಿಗೂ ಸೆಂಟ್ರಲ್ ಮುಸ್ಲಿಂ ಕಮಿಟಿ ನೆರವು ನೀಡಲಿದೆ ಎಂದು ಮಸೂದ್ ಹಾಜಿ ತಿಳಿಸಿದರು. ಫಾಝಿಲ್ ಮತ್ತು ಮಸೂದ್ ಕುಟುಂಬಗಳಿಗೆ ನೆರವು ನೀಡುವುದಕ್ಕಾಗಿ ಸಂಗ್ರಹಿಸಿದ ಮೊತ್ತ ₹ 62 ಲಕ್ಷ ಮೀರಿದೆ. ಎರಡೂ ಕುಟುಂಬಗಳಿಗೆ ಹಣ ನೀಡಿದ ನಂತರ ಉಳಿದಿರುವ ಮೊತ್ತಕ್ಕೆ ಇನ್ನಷ್ಟು ಸೇರಿಸಿ ಪ್ರಕೃತಿ ವಿಕೋಪದಿಂದ ನೊಂದವರಿಗೆ ವಿತರಿಸಲಾಗುವುದು ಎಂದು ಅವರು ತಿಳಿಸಿದರು.

ಅಲ್‌ ಹುದಾ ಮಸೀದಿ ಅಧ್ಯಕ್ಷ ಅಬ್ದುಲ್ ಲತೀಫ್‌, ಮುಖಂಡರಾದ ಬಿ.ಎಂ.ಮಮ್ತಾಜ್ ಅಲಿ, ಅಶ್ರಫ್‌, ಇಬ್ರಾಹಿಂ ಕೋಡಿಬೈಲ್‌, ಶಮೀರ್ ಕಾಟಿಪಳ್ಳ, ಬಿ.ಕೆ.ಇದಾಯತ್ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.