ADVERTISEMENT

ಭಾವಪೂರ್ಣವಾಗಿ ಮೂಡಿ ಬಂದ ನಳ ದಮಯಂತಿ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2020, 20:00 IST
Last Updated 5 ಫೆಬ್ರುವರಿ 2020, 20:00 IST
ನಳ ದಮಯಂತಿ
ನಳ ದಮಯಂತಿ   

ಬದುಕಲ್ಲಿ ಕಷ್ಟ ಕಾರ್ಪಣ್ಯಗಳು ಯಾರನ್ನೂ ಬಿಟ್ಟಿಲ್ಲ. ಸಿರಿವಂತನಾಗಲಿ - ಬಡವನಾಗಲಿ, ವಿಧಿಯಾಟದ ಎದುರು ಎಲ್ಲರೂ ಸಮಾನರು. ಅದನ್ನು ಧೈರ್ಯದಿಂದ ಎದುರಿಸುವುದೊಂದೇ ನಮಗುಳಿದ ದಾರಿ. ಇಂತಹ ಒಂದು ಸಂದರ್ಭ ಚಕ್ರವರ್ತಿ ನಳ ಮಹಾರಾಜನ ಬದುಕಲ್ಲಿಯೂ ಘಟಿಸಿತು. ಜೀವನದಲ್ಲಿ ಒಂದೇ ಒಂದು ತಪ್ಪನ್ನು ಎಸಗದೆ, ತನ್ನ ಪ್ರಜೆಗಳ ಹಿತವನ್ನು ಸದಾ ಬಯಸುತ್ತಾ ನಾಡನ್ನಾಳುತ್ತಿದ್ದ ನಳ ಮಹರಾಜನಿಗೆ ಸಹಧರ್ಮಿಣಿಯಾಗಿದ್ದವಳು ಕುಂಡಿನಾಪುರದ ಅರಸ ಭೀಮಕನ ಮಗಳು ದಮಯಂತಿ.

ಇವರೀರ್ವರ ಬದುಕಿನಲ್ಲಿ ಶನಿಯು ಆಡುವ ಅಟವೇ ನಳ ದಮಯಂತಿ ಕಥಾ ಪ್ರಸಂಗ. ಇದನ್ನು ಗುಂಡ್ಮಿ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಸೊಗಸಾಗಿ ಪ್ರಸ್ತುತ ಪಡಿಸಿದವರು ಕಲಾಪೀಠ ಕೋಟ ಇವರು. ನಳನಲ್ಲಿ ಏನಾದರೊಂದು ತಪ್ಪನ್ನು ಕಂಡು ಹಿಡಿದು ಕಾಡಬೇಕು ಎನ್ನುವ ದೃಷ್ಟಿಯಿಂದ ಶನಿಯು, ಒಂದು ದಿನ ನಿತ್ಯಾಹ್ನಿಕವನ್ನು ಪೂರೈಸಿದ ನಳನು ಕಾಲ ಹಿಮ್ಮಡಿಗೆ ನೀರು ಹಾಕಿಕೊಳ್ಳದೇ ಅಶುಚಿತ್ವನಾಗಿ ಗೃಹ ಪ್ರವೇಶಿಸಿರುವುದನ್ನು ಗಮನಿಸಿದ ಶನಿ ಆತನನ್ನು ಬಹಳಷ್ಟು ವರ್ಷಗಳ ಕಾಲ ಕಾಡುತ್ತಿರುತ್ತಾನೆ.

ಈ ಸಂದರ್ಭದಲ್ಲಿ ನಳನು ದಾಯಾದಿ ಪುಷ್ಕರನೊಡನೆ ಜೂಜಾಟವಾಡಿ ಸರ್ವಸ್ವವನ್ನೂ ಕಳೆದುಕೊಂಡು ದೇಶ ಭ್ರಷ್ಟನಾಗಿ, ಮಡದಿ ದಮಯಂತಿಯೊಂದಿಗೆ ಕಾಡಲ್ಲಿ ಅಲೆದು ಅಲೆದು ವಿಶ್ರಾಂತಿ ಪಡೆಯುವ ಸಂದರ್ಭದಲ್ಲಿ ನಿದ್ರಾವಸ್ಥೆಗೆ ಜಾರಿದ ಮಡದಿಯನ್ನು ಮೆಲ್ಲನೆ ತೊರೆದು ಬಹು ಮುಂದಕ್ಕೆ ಸಾಗಿದಾಗ, ಕಾರ್ಕೋಟಕ ಎನ್ನುವ ಹೆಸರಿನ ಸರ್ಪ ದಂಶನದಿಂದ ನಳನ ದೇಹವೇ ವಿರೂಪವಾಗುತ್ತದೆ. ಕಾರ್ಕೋಟಕನ ಸೂಚನೆಯಂತೆ ನಳನು ಮಹಾರಾಜ ಋತುಪರ್ಣನ ರಾಜ್ಯ ಪ್ರವೇಶಿಸಿ, ಅರಮನೆಯಲ್ಲಿ ಬಾಹುಕನೆನ್ನುವ ಹೆಸರಿನಿಂದ ಅಶ್ವ ಶಾಲೆಯ ಮೇಲ್ವಿಚಾರಕನಾಗಿ ಸೇರುತ್ತಾನೆ.

ADVERTISEMENT

ಇತ್ತ ದಮಯಂತಿಗೆ ದಟ್ಟಡವಿಯಲ್ಲಿ ಬಂದೊದಗಿದ ಕಷ್ಟಗಳು ಸುಖಾಂತ್ಯಗೊಂಡು, ಮುಂದೆ ದಾರಿ ಹೋಕ ವ್ಯಾಪಾರಿಗಳ ಸಹಾಯದಿಂದ ಛೇದಿ ದೇಶವನ್ನು ಸೇರಿ, ಅಲ್ಲಿನ ಅರಮನೆಯಲ್ಲಿ ವೇಷ ಮರೆಸಿ ಕೆಲಸದಾಳಾಗಿ ಸೇರುತ್ತಾಳೆ. ಮುಂದೊಂದು ದಿನ ವಿಪ್ರೋತ್ತಮರ ಸಹಾಯದಿಂದ ತನ್ನ ತವರೂರಾದ ಕುಂಡಿನಾಪುರಕ್ಕೆ ಬರುತ್ತಾಳೆ. ತಂದೆ ಭೀಮಕನು ದಮಯಂತಿಗೆ ಪುನರ್ ಸ್ವಯಂವರವನ್ನು ಏರ್ಪಡಿಸಿದ ವಿಚಾರ ತಿಳಿದ ಋತುಪರ್ಣ ರಾಜನು ಅದನ್ನು ತಡೆಯಲೋಸುಗ, ನೂರಾರು ಯೋಜನ ದೂರವಿರುವ ಕುಂಡಿನಾಪುರಕ್ಕೆ ಕೂಡಲೇ ತಲುಪಲು ಬಾಹುಕನ ಸಾರಥ್ಯದಲ್ಲಿ ರಥವೇರಿ ಸಾಗುವ ಸಂದರ್ಭದಲ್ಲಿ ನಡೆಯುವ ಚಮತ್ಕಾರದಿಂದ ಬಾಹುಕನೇ ನಳ ಮಹಾರಾಜ ಎಂದು ತಿಳಿದಾಗ ಬಹಳ ದು:ಖಿತನಾಗುತ್ತಾನೆ.

ಈರ್ವರೂ ಒಂದಾಗಿ ವಿವಾಹ ಮುಹೂರ್ತಕ್ಕೆ ಮೊದಲು ತಲುಪಿ ಅಲ್ಲಿನ ಸತ್ಕಾರ ಗೃಹದಲ್ಲಿ ತಂಗಿದ ಸಂದರ್ಭ, ಬಾಹುಕನ ಕೆಲಸ ಕಾರ್ಯಗಳನ್ನು ಸಖಿಯಿಂದ ಅರಿತ ದಮಯಂತಿಗೆ ಈತನೇ ತನ್ನ ಪತಿ ನಳನೆಂದು ದೃಢಪಟ್ಟಾಗ, ನಳನು ನಡೆದ ವೃತ್ತಾಂತವನ್ನು ಹೇಳುತ್ತಾನೆ. ಮುಂದೆ ಒಂದಾಗಿ ಪುನರ್ ವಿವಾಹವಾಗುವಲ್ಲಿಗೆ ಈ ಭಾವಪೂರ್ಣ ಪ್ರಸಂಗ ಕೊನೆಗೊಳ್ಳುತ್ತದೆ.

ಈ ಪ್ರಸಂಗದ ಕೇಂದ್ರ ಬಿಂದುವಾದ ಬಾಹುಕನಾಗಿ ಅಭಿನವ ತುಂಗ ಬಹಳ ತನ್ಮಯತೆಯಿಂದ ಅಭಿನಯಿಸಿ ಭೇಷ್ ಅನಿಸಿಕೊಂಡನು. ದಮಯಂತಿ ಬದುಕಿನಲ್ಲಿನ ನೋವಿನ ಕ್ಷಣಗಳನ್ನು ಶಶಿಧರ್ ಭಟ್ ಅಭಿವ್ಯಕ್ತಿಗೊಳಿಸಿರುವುದು ಮಾರ್ಮಿಕವಾಗಿತ್ತು. ನಳನಾಗಿ ಯಶಸ್, ಋತುಪರ್ಣನಾಗಿ ರಾಘವೇಂದ್ರ ಐತಾಳ್‍ರ ಪಾತ್ರೋಚಿತ ಅಭಿನಯ ಮೆಚ್ಚುಗೆ ಗಳಿಸಿದರೆ, ದೇವೇಂದ್ರ, ಭೀಮಕ ಮತ್ತು ಶನಿಯಾಗಿ ಅನಂತಕೃಷ್ಣ ನಾವುಡ ಮೂರೂ ಪಾತ್ರಗಳನ್ನು ಬಹಳ ಸೊಗಸಾಗಿ ನಿಭಾಯಿಸಿದರು.

ಚೇದಿರಾಣಿಯಾಗಿ ನಿಶಾಂತ್ ಹಂದೆ, ಸುದೇವ ಬ್ರಾಹ್ಮಣನಾಗಿ ಸಾತ್ವಿಕ, ಕಾರ್ಕೋಟಕನಾಗಿ ಋಗ್ವಿಲಾಸ ಪಾತ್ರಕ್ಕೆ ನ್ಯಾಯ ಒದಗಿಸಿದರು. ಪೂರ್ವರಂಗದ ಬಾಲಗೋಪಾಲರಾಗಿ ಶ್ರೀವಿಲಾಸ ಮತ್ತು ಋಗ್ವಿಲಾಸ ಮಿಂಚಿದರೆ, ಕಣ್ಮನ ಸೆಳೆದ ಒಡ್ಡೋಲಗದಲ್ಲಿ ಶ್ರೀವಿಲಾಸ, ಋಗ್ವಿಲಾಸ, ರಾಘವೇಂದ್ರ, ಸಾತ್ವಿಕ, ಮತ್ತು ಯಶಸ್ ಸೊಗಸಾದ ಹೆಜ್ಜೆ ಹಾಕಿದರು.

ಸೂತ್ರದಾರರಾಗಿ ಸೃಜನ್, ವಿಭವನ್, ಶ್ರೀವಿಲಾಸ ಮತ್ತು ಸಾತ್ವಿಕ ಇವರುಗಳು ಪಾತ್ರ ನಿರ್ವಹಿಸಿದರೆ, ಹಿಮ್ಮೇಳದಲ್ಲಿ ಭಾಗವತರಾಗಿ ಕೆ.ಪಿ.ಹೆಗಡೆ, ಮದ್ದಳೆಯಲ್ಲಿ ದೇವದಾಸ್ ರಾವ್ ಕೂಡ್ಲಿ, ಚಂಡೆಯಲ್ಲಿ ಗಣೇಶ್ ಶೆಣೈ ಮತ್ತು ವಾಗ್ವಿಲಾಸ್ ಸಹಕರಿಸಿದ್ದರು. ಪ್ರಸಾಧನ ಕಲೆ ಹಂದಾಡಿ ಬಾಲಕೃಷ್ಣ ನಾಯಕ್ ಅವರದ್ದಾಗಿತ್ತು. ಕೆ. ನರಸಿಂಹ ತುಂಗರ ನಿರ್ದೇಶನದಲ್ಲಿ ಮೂಡಿಬಂದ ಈ ಪ್ರಸಂಗ ಪ್ರೇಕ್ಷಕರ ಪ್ರಶಂಸೆಗೆ ಪಾತ್ರವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.