ADVERTISEMENT

ಮಂಗಳೂರು: ಅನುಯಾಯಿಗಳ ‘ಸ್ವಾಭಿಮಾನ’ ಪ್ರದರ್ಶನ

ನಾರಾಯಣ ಗುರುವಿನ ಹತ್ತಾರು ಸ್ತಬ್ಧಚಿತ್ರಗಳು ಭಾಗಿ, ಹಲವು ಸಂಘಟನೆಗಳ ಸಾಥ್‌

​ಪ್ರಜಾವಾಣಿ ವಾರ್ತೆ
Published 27 ಜನವರಿ 2022, 5:23 IST
Last Updated 27 ಜನವರಿ 2022, 5:23 IST
ನಾರಾಯಣ ಗುರುವಿನ ಸ್ತಬ್ಧಚಿತ್ರದ ಮೆರವಣಿಗೆ ಮತ್ತು ‘ಸ್ವಾಭಿಮಾನದ ನಡಿಗೆ’ ಮಂಗಳೂರಿನ ಕಂಕನಾಡಿ ಗರಡಿಯಿಂದ ಆರಂಭಗೊಂಡು ನಗರದ ಮುಖ್ಯರಸ್ತೆಯಲ್ಲಿ ಸಂಚರಿಸಿತು.
ನಾರಾಯಣ ಗುರುವಿನ ಸ್ತಬ್ಧಚಿತ್ರದ ಮೆರವಣಿಗೆ ಮತ್ತು ‘ಸ್ವಾಭಿಮಾನದ ನಡಿಗೆ’ ಮಂಗಳೂರಿನ ಕಂಕನಾಡಿ ಗರಡಿಯಿಂದ ಆರಂಭಗೊಂಡು ನಗರದ ಮುಖ್ಯರಸ್ತೆಯಲ್ಲಿ ಸಂಚರಿಸಿತು.   

ಮಂಗಳೂರು: ನವದೆಹಲಿಯ ಗಣರಾಜ್ಯೋತ್ಸವ ಪರೇಡ್‌ಗೆ ಕೇರಳ ಸರ್ಕಾರ ಕಳುಹಿಸಿದ್ದ ಬ್ರಹ್ಮಶ್ರೀ ನಾರಾಯಣಗುರುಗಳ ಸ್ತಬ್ಧಚಿತ್ರ ತಿರಸ್ಕರಿಸುವುದನ್ನು ವಿರೋಧಿಸಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಬಿಲ್ಲವ ಸಂಘಟನೆಗಳು ಹಾಗೂ ಗುರುಗಳ ಅನುಯಾಯಿಗಳ ಮುಂದಾಳತ್ವದಲ್ಲಿ ಸ್ವಾಭಿಮಾನದ ನಡಿಗೆ ಹಮ್ಮಿಕೊಳ್ಳಲಾಗಿತ್ತು.

ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಅವರ ನೇತೃತ್ವದ ಈ ‘ಸ್ವಾಭಿಮಾನದ ನಡಿಗೆ’ ಮಂಗಳೂರಿನ ಕಂಕನಾಡಿ ಗರಡಿಯಿಂದ ಆರಂಭಗೊಂಡು ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಸಂಪನ್ನಗೊಂಡಿತು.

ಗರೋಡಿಯಲ್ಲಿರುವ ನಾರಾಯಣ ಗುರುಗಳ ಪ್ರತಿಮೆಗೆ ಪೂಜೆ ಸಲ್ಲಿಸಿ, ಬ್ರಹ್ಮ ಬೈದರ್ಕಳ ಗುಡಿಯಲ್ಲೂ ಪ್ರಾರ್ಥನೆ ನೆರವೇರಿಸಿ, ಕ್ಷೇತ್ರಕ್ಕೆ ಪ್ರದಕ್ಷಿಣೆ ಮಾಡಿದರು. ಬಳಿಕ ಗರಡಿಯ ಹೊರಾಂಗಣದಲ್ಲಿ ಜನಾರ್ದನ ಪೂಜಾರಿ ಅವರು ಸ್ತಬ್ಧಚಿತ್ರದ ಎದುರು ತೆಂಗಿನಕಾಯಿ ಒಡೆಯುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.

ADVERTISEMENT

ನಾರಾಯಣ ಗುರುಗಳ ಭಾವಚಿತ್ರ ಇರುವ ಹತ್ತಾರು ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಗಮನ ಸೆಳೆದವು. ಗೋಕರ್ಣನಾಥ ಕ್ಷೇತ್ರ ಕುದ್ರೋಳಿ, ಬಿಲ್ಲವ ಸಂಘ ಮಂಗಳಾದೇವಿ, ಬೆಳ್ತಂಗಡಿ ಗುರುನಾರಾಯಣ ಸ್ವಾಮಿ ಸೇವಾ ಸಂಘ, ಬಿಲ್ಲವ ಸಂಘ ಮಂಗಳೂರು, ಪುತ್ತೂರು ಬಿಲ್ಲವ ಸಂಘ, ಬಿಲ್ಲವ ಸಂಘ ಉರ್ವ ಮತ್ತಿತರ ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ಪಿವಿಎಸ್‌ ಸರ್ಕಲ್‌ ಮತ್ತು ಲೇಡಿಹಿಲ್‌ನಲ್ಲಿ ಮೂಲ್ಕಿ ಮತ್ತು ಉಡುಪಿಯ ಸ್ತಬ್ಧಚಿತ್ರಗಳು ಪಾಲ್ಗೊಂಡವು.

ಜನಾರ್ದನ ಪೂಜಾರಿ ತಮ್ಮ ಕಾರಿನಲ್ಲಿ ಕುಳಿತು ಮೆರವಣಿಗೆಯ ಜತೆ ಸಾಗಿದರು. ಗುರುಗಳ ಅನುಯಾಯಿಗಳು ಹಳದಿ ಶಾಲು ಧರಿಸಿ, ಸುಮಾರು 8 ಕಿ.ಮೀ. ಹೆಜ್ಜೆ ಹಾಕಿದರು. ಕಾರು, ದ್ವಿಚಕ್ರ ವಾಹನಗಳಲ್ಲೂ ನೂರಾರು ಮಂದಿ ಸಾಗಿದರು. ಮೆರವಣಿಗೆಯ ದಾರಿಯುದ್ದಕ್ಕೂ ಹಳದಿ ಬಂಟಿಂಗ್ಸ್‌ಗಳು ರಾರಾಜಿಸುತ್ತಿದ್ದವು. ಕುದ್ರೋಳಿ ಕ್ಷೇತ್ರದ ಪ್ರಮುಖರು ಹಳದಿ ಶರ್ಟ್‌ಗಳನ್ನು ಧರಿಸಿ ಮೆರವಣಿಗೆಗೆ ಮೆರುಗು ನೀಡಿದರು. ಚೆಂಡೆವಾದನ, ನಾಸಿಕ್‌ ಬ್ಯಾಂಡ್‌ಗಳು ಗಮನ ಸೆಳೆದವು.

ಸ್ತಬ್ಧಚಿತ್ರಗಳು ಪಂಪ್‌ವೆಲ್‌ಗೆ ಬರುತ್ತಿದ್ದಂತೆ ಎರಡು ಜೆಸಿಬಿಗಳ ಮೇಲೆ ನಾಲ್ವರು ಹತ್ತಿ, ನಾರಾಯಣ ಗುರುವಿನ ಭಾವಚಿತ್ರಕ್ಕೆ ಹೂವಿನ ಸುರಿಮಳೆಗೈದರು. ಮತ್ತೆ ಕೆಲವರು ಮೇಲ್ಸೆತುವೆಯಿಂದ ಪುಷ್ಪವೃಷ್ಟಿ ಮಾಡಿದರು. ನಂತರ ಮೆರವಣಿಗೆಯು ಜ್ಯೋತಿ ಸರ್ಕಲ್‌, ಹಂಪನಕಟ್ಟೆ ಸಿಗ್ನಲ್‌, ಕೆ.ಎಸ್‌.ರಾವ್‌ ರಸ್ತೆ, ನವಭಾರತ್‌ ಸರ್ಕಲ್‌, ಪಿವಿಎಸ್‌, ಎಂ.ಜಿ.ರಸ್ತೆ, ಲೇಡಿಹಿಲ್‌, ಮಣ್ಣಗುಡ್ಡೆ ಮೂಲಕ ಕುದ್ರೋಳಿ ಕ್ಷೇತ್ರಕ್ಕೆ ತಲುಪಿತು.

ಸ್ವಾಭಿಮಾನದ ನಡಿಗೆಗೆ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌, ಆಮ್‌ಆದ್ಮಿ ಪಕ್ಷ, ಎಡಪಕ್ಷಗಳು ಹಾಗೂ ಇತರೆ ಸಂಘಟನೆಗಳು ಬೆಂಬಲ ನೀಡಿದ್ದವು. ಕಂಕನಾಡಿ ಗರೋಡಿಯ ಅಧ್ಯಕ್ಷ ಚಿತ್ತರಂಜನ್, ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಆಡಳಿತ ಸಮಿತಿಯ ಅಧ್ಯಕ್ಷ ದೇವೇಂದ್ರ ಪೂಜಾರಿ, ಆಡಳಿತ ಮಂಡಳಿ ಕೋಶಾಧಿಕಾರಿ ಪದ್ಮರಾಜ್, ಉಪಾಧ್ಯಕ್ಷ ಡಾ.ಬಿ.ಜಿ. ಸುವರ್ಣ, ಸದಸ್ಯರಾದ ಲೀಲಾಕ್ಷ ಕರ್ಕೇರಾ, ಸೂರ್ಯಕಾಂತ್ ಸುವರ್ಣ, ದಾಮೋದರ ನಿಸರ್ಗ, ಶಾಸಕ ಯು.ಟಿ.ಖಾದರ್, ವಿಧಾನ ಪರಿಷತ್‌ ಸದಸ್ಯ ಕೆ.ಹರೀಶ್ ಕುಮಾರ್, ಮಾಜಿ ಸಚಿವರಾದ ರಮಾನಾಥ ರೈ, ಅಭಯಚಂದ್ರ ಜೈನ್, ಮಾಜಿ ಶಾಸಕರಾದ ಕೆ. ವಸಂತ ಬಂಗೇರ, ಶಕುಂತಳಾ ಶೆಟ್ಟಿ, ಐವನ್‌ ಡಿಸೋಜ, ಮೋಯಿದ್ದೀನ್‌ ಬಾವ, ಜೆ.ಆರ್‌. ಲೋಬೊ, ನಾರಾಯಣ ಗುರು ವಿಚಾರವಾದಿ ವೇದಿಕೆ ಅಧ್ಯಕ್ಷ ಸತ್ಯಜಿತ್‌ ಸುರತ್ಕಲ್‌, ವಿಶ್ವ ಹಿಂದೂ ಪರಿಷತ್‌ ಮುಖಂಡರಾದ ಪ್ರೊ.ಎಂ.ಬಿ. ಪುರಾಣಿಕ್, ಶರಣ್ ಪಂಪ್‌ವೆಲ್, ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಪೀತಾಂಬರ ಹೇರಾಜೆ, ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಡಾ.ರಾಜಾರಾಮ್‌, ಪಾಲಿಕೆ ಸದಸ್ಯ ಸಂದೀಪ್ ಗರೋಡಿ, ವಿವಿಧ ಬಿಲ್ಲವ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.