ADVERTISEMENT

ಜಂತು ಹುಳ ಮಾತ್ರೆ ಸೇವನೆಯಿಂದ ರೋಗ ನಿರೋಧಕತೆ ವೃದ್ಧಿ: ಡಿಎಚ್‌ಒ

ರಾಷ್ಟ್ರೀಯ ಜಂತುಹುಳ ನಿವಾರಣಾ ದಿನಾಚರಣೆ ನಾಳೆ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2022, 13:38 IST
Last Updated 8 ಆಗಸ್ಟ್ 2022, 13:38 IST
ಡಾ.ಕಿಶೋರ್‌ ಕುಮಾರ್‌ ಎಂ.
ಡಾ.ಕಿಶೋರ್‌ ಕುಮಾರ್‌ ಎಂ.   

ಮಂಗಳೂರು: ‘ಇದೇ 10 ರಂದು ರಾಷ್ಟ್ರೀಯ ಜಂತುಹುಳ ನಿವಾರಣಾ ದಿನವನ್ನು ಆಚರಿಸಲಾಗುತ್ತಿ‌ದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಂಗನವಾಡಿ, ಶಾಲಾ–ಕಾಲೇಜುಗಳಲ್ಲಿ 1 ರಿಂದ 19 ವರ್ಷದೊಳಗಿನ 5,24,508 ಮಂದಿಗೆ ಅಂದು ಜಂತು ಹುಳ ನಿವಾರಣೆಗಾಗಿ ವಿಶ್ವ ಆರೋಗ್ಯ ಸಂಸ್ಥೆ ಪ್ರಮಾಣೀಕರಿಸಿದ ಅಲ್ಬೆಂಡಝೋಲ್ 400 ಮಿ.ಗ್ರಾಂ. ಮಾತ್ರೆಯನ್ನು ವಿತರಿಸಲಾಗುತ್ತದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಿಶೋರ್ ಕುಮಾರ್ ಎಂ. ತಿಳಿಸಿದರು.

ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದ ಅವರು, ‘ಆ. 10ರಂದು ಮಾತ್ರೆ ಪಡೆಯಲಾಗದವರಿಗೆ ಆ.17ರಂದು ವಿತರಿಸಲಾಗುವುದು. ಶಾಲೆ ಅಥವಾ ಅಂಗನವಾಡಿಗಳಿಂದ ಹೊರಗುಳಿದ ಮಕ್ಕಳಿಗೆ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಕಿರಿಯ ಆರೋಗ್ಯ ಸಹಾಯಕಿಯರು ಮನೆಗಳಿಗೆ ತೆರಳಿ ಮಾತ್ರೆ ವಿತರಿಸಲಿದ್ದಾರೆ’ ಎಂದರು.

‘ಜಂತುಹುಳು ಮನುಷ್ಯನ ಕರುಳಿನಲ್ಲಿ ಜೀವಿಸುವ ಪರಾವಲಂಬಿ ಜೀವಿ. ಎಲ್ಲವಯಸ್ಸಿನವರಲ್ಲೂ ಜಂತು ಹುಳುವಿನ ಸಮಸ್ಯೆ ಸರ್ವೇಸಾಮಾನ್ಯ. ಮಕ್ಕಳ ಹಾಜರಾತಿ ಕೊರತೆಗೆ ಇದು ಕಾರಣವಾಗುತ್ತದೆ. ಇದರಿಂದ ಅವರ ವಿದ್ಯಾಭ್ಯಾಸವೂ ಕುಂಠಿತವಾಗುವ ‌ಸಂಭವವಿದೆ’ ಎಂದರು.

ADVERTISEMENT

‘ಜಂತುಹುಳ ಮಾತ್ರೆಯನ್ನು ಮಕ್ಕಳು ಚೀಪಿ ಸೇವಿಸಬಹುದು. 1 ರಿಂದ 2 ವರ್ಷದೊಳಗಿನ ಮಕ್ಕಳಿಗೆ ಅರ್ಧ ಮಾತ್ರೆಯನ್ನು ಎದೆಹಾಲಿನಲ್ಲಿ ಬೆರೆಸಿ ನೀಡಬಹುದು. 2ರಿಂದ 19 ವರ್ಷದೊಳಗಿನ ಮಕ್ಕಳಿಗೆ 1 ಮಾತ್ರೆ ನೀಡಲಾಗುತ್ತದೆ. ಮಕ್ಕಳು ಆರು ತಿಂಗಳಿಗೊಮ್ಮೆ ಈ ಮಾತ್ರೆ ಸೇವಿಸಬಹುದು. ಇದರ ಸೇವನೆಯಿಂದ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಪೌಷ್ಟಿಕತೆ ಸುಧಾರಿಸುತ್ತದೆ. ಏಕಾಗ್ರತೆ ಮತ್ತು ಕಲಿಕಾ ಸಾಮರ್ಥ್ಯ ವೃದ್ಧಿಯಾಗುತ್ತದೆ. ಜಂತುಹುಳು ಬಾಧೆ ಪರಸ್ಪರ ಹರಡುವುದನ್ನು ತಪ್ಪಿಸಬಹುದು’ ಎಂದು ತಿಳಿಸಿದರು.

ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಬದ್ರುದ್ದೀನ್, ಪ್ರಜನನ ಮತ್ತು ಮಕ್ಕಳ ಆರೋಗ್ಯ ಅಧಿಕಾರಿ ಡಾ.ರಾಜೇಶ್, ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಡಾ. ಸುದರ್ಶನ್, ಮಂಗಳೂರು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸುಜಯ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಕೆ., ಜಿಲ್ಲಾ ಶುಶ್ರೂಣಾಧಿಕಾರಿ ಲಿಸ್ಸಿ ಇದ್ದರು.

ಜಂತು ಹುಳು ಬಾಧೆಗೆ ಕಾರಣಗಳು

ಬಯಲಿನಲ್ಲಿ ಬರಿಗಾಲಿನಲ್ಲಿ ನಡೆಯುವುದು

ಆಹಾರ ಸೇವನೆಗೆ ಮುನ್ನ ಕೈ ತೊಳೆಯದಿರುವುದು

ಬಯಲಿನಲ್ಲಿ ಮಲ ವಿಸರ್ಜನೆ

ಶೌಚದ ನಂತರ ಕೈ ತೊಳೆಯದಿರುವುದು,

ಹಣ್ಣು, ಹಂಪಲುಲನ್ನು ತೊಳೆಯದೇ ಸೇವಿಸುವುದು

ಜಂತುಹುಳು ಬಾಧೆ– ಲಕ್ಷಣಗಳು

ಹೊಟ್ಟೆ ನೋವು, ಭೇದಿ,

ಹಸಿವಿಲ್ಲದಿರುವುದು, ಆಯಾಸ

ಅಪೌಷ್ಟಿಕತೆ ಹಾಗೂ ರಕ್ತಹೀನತೆ

ಜಂತು ಹುಳು ನಿವಾರಕ ಮಾತ್ರೆ ವಿತರಣೆ (ತಾಲ್ಲೂಕುವಾರು ವಿವರ)

ತಾಲ್ಲೂಕು;ಗುರಿ

ಬಂಟ್ವಾಳ;90,850

ಬೆಳ್ತಂಗಡಿ;66,187

ಮೂಲ್ಕಿ;15,983

ಮೂಡುಬಿದಿರೆ;35,806

ಉಳ್ಳಾಲ;54,014

ಮಂಗಳೂರು (ಗ್ರಾ.);35,496

ಮಂಗಳೂರು (ನಗರ);1,10,780

ಕಡಬ;32,197

ಪುತ್ತೂರು;52,394‌

ಸುಳ್ಯ;30,801

ಮಂಕಿ ಪಾಕ್ಸ್‌: ವಿಮಾನನಿಲ್ದಾಣದಲ್ಲಿ ವಿಶೇಷ ನಿಗಾ

‘ಮಂಗಳೂರು ವಿಮಾನನಿಲ್ದಾಣದ ಮೂಲಕ ಪ್ರಯಾಣ ಬೆಳೆಸಿದ್ದ ಮಂಕಿಪಾಕ್ಸ್‌ ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬಂದ ಎಲ್ಲರೂ 21 ದಿನಗಳ ಪ್ರತ್ಯೇಕವಾಸ ಪೂರ್ಣಗೊಳಿಸಿದ್ದಾರೆ. ಅವರಲ್ಲಿ ಯಾರಿಗೂ ರೋಗ ಲಕ್ಷಣಗಳು ಕಂಡುಬಂದಿಲ್ಲ’ಎಂದು ಡಾ.ಕಿಶೋರ್‌ ಕುಮಾರ್‌ ತಿಳಿಸಿದರು.

‘ಮಂಕಿ ಪಾಕ್ಸ್‌ ಹರಡುವಿಕೆ ತಡೆಯಲುವಿದೇಶಗಳಿಂದ ಮಂಗಳೂರು ಅಂತರರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಬಂದಿಳಿವ ಎಲ್ಲ ಪ್ರಯಾಣಿಕರನ್ನು ಆರೋಗ್ಯ ಸಿಬ್ಬಂದಿ ಪಿಪಿಇ ಕಿಟ್‌ ಧರಿಸಿ ಆರೋಗ್ಯ ತಪಾಸಣೆಗೆ ಒಳಪಡಿಸುತ್ತಿದ್ದಾರೆ. ಪ್ರಯಾಣಿಕರಲ್ಲಿ ರೋಗ ಲಕ್ಷಣ ಕಂಡು ಬಂದರೆ ಅವರ ಗಂಟಲ ದ್ರವ ಹಾಗೂ ಮೈಯಲ್ಲಿ ಗುಳ್ಳೆಗಳಿದ್ದರೆ, ಅದರ ದ್ರವದ ಮಾದರಿ ಸಂಗ್ರಹಿಸಿ ಪರೀಕ್ಷೆಗಾಗಿ ಬೆಂಗಳೂರಿಗೆ ಕಳುಹಿಸಿಕೊಡುತ್ತೇವೆ. ಮಂಕಿ ಪಾಕ್ಸ್‌ ಸೊಂಕಿತರ ಚಿಕಿತ್ಸೆಗೆ ವೆನ್ಲಾಕ್‌ ಆಸ್ಪತ್ರೆಯಲ್ಲಿ 19 ಹಾಸಿಗೆಗಳ ಸಾಮರ್ಥ್ಯದ ವಾರ್ಡ್‌ ಒಂದನ್ನು ಕಾಯ್ದರಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.