ADVERTISEMENT

ಪ್ರಕೃತಿ ವಿಕೋಪ ಪರಿಹಾರ ವಿಳಂಬ ಆರೋಪ

​ಪ್ರಜಾವಾಣಿ ವಾರ್ತೆ
Published 5 ಜೂನ್ 2025, 4:26 IST
Last Updated 5 ಜೂನ್ 2025, 4:26 IST
ಉಪ್ಪಿನಂಗಡಿ ಸಮೀಪ ನೀರಕಟ್ಟೆಯಲ್ಲಿ ಕಿಶೋರ್ ಎಂಬವರ ಮನೆ ಮೇಲೆ ಧರೆ ಕುಸಿದು ಬಿದ್ದಿರುವುದು
ಉಪ್ಪಿನಂಗಡಿ ಸಮೀಪ ನೀರಕಟ್ಟೆಯಲ್ಲಿ ಕಿಶೋರ್ ಎಂಬವರ ಮನೆ ಮೇಲೆ ಧರೆ ಕುಸಿದು ಬಿದ್ದಿರುವುದು   

ಉಪ್ಪಿನಂಗಡಿ: ಪ್ರಕೃತಿ ವಿಕೋಪದ ಪರಿಹಾರ ಧನವನ್ನು ಮಳೆಹಾನಿಗೂ ಅನ್ವಯಿಸಬೇಕು, ತಕ್ಷಣ ₹10 ಸಾವಿರ ನೀಡಬೇಕು ಎಂದು ಶಾಸಕರು ನೀಡಿರುವ ಆದೇಶವನ್ನು ಅಧಿಕಾರಿಗಳು ಪಾಲಿಸುತ್ತಿಲ್ಲ ಎಂಬ ಸ್ಥಳೀಯರು ದೂರಿದ್ದಾರೆ.

ಉಪ್ಪಿನಂಗಡಿಯಲ್ಲಿ ಕಳೆದ ವರ್ಷದ ನಡೆದ ಮುಂಜಾಗ್ರತಾ ಸಭೆಯಲ್ಲಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಪರಿಹಾರ ವಿತರಣೆಯಲ್ಲಿ ವಿಳಂಬ ಮಾಡಬಾರದು ಎಂದು ಹೇಳಿದ್ದರು. ಅದನ್ನು ಅಧಿಕಾರಿಗಳು ಪಾಲಿಸಿದ್ದರು. ಆದರೆ ಈ ಬಾರಿ ಅದು ಪಾಲನೆಯಾಗಿಲ್ಲ ಎಂದು ದೂರಲಾಗಿದೆ. ಮನೆಗಳಿಗೆ ಅಪ್ಪಳಿಸಿದ ಗುಡ್ಡಗಳ ಮಣ್ಣಿನ ರಾಶಿ ತೆರವುಗೊಳೀಸುವುದು ತ್ರಾಸದಾಯಕವಾಗಿದೆ ಎಂದು ಸಂತ್ರಸ್ತರು ಹೇಳಿದ್ದಾರೆ.

ಜೀವ ಉಳಿಸಿದ ನಾಯಿ: ಮೇ 30ರಂದು ರಾತ್ರಿ ಸುರಿದ ಭಾರಿ ಮಳೆಗೆ ಬಜತ್ತೂರು ಗ್ರಾಮದ ನೀರಕಟ್ಟೆಯಲ್ಲಿ ಮನೆ ಮೇಲೆ ಗುಡ್ಡ ಜರಿದು ಅಪಾಯಕ್ಕೆ ಸಿಲುಕಿದ್ದ ವ್ಯಕ್ತಿ ಸಾಕು ನಾಯಿಯಿಂದಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಹೇಳಲಾಗಿದೆ.

ADVERTISEMENT

ಆಂಬುಲೆನ್ಸ್‌ ಚಾಲಕ ನೀರಕಟ್ಟೆಯ ಕಿಶೋರ್ ರಾತ್ರಿ 11 ಗಂಟೆ ಸುಮಾರಿಗೆ ಮನೆ ತಲುಪಿದ್ದು, ಮಳೆಯಿಂದ ಹಾನಿಯಾಗಿದೆಯೇ ಎಂದು ಟಾರ್ಚ್‌ ಬೆಳಕಿನಲ್ಲಿ ಪರಿಶೀಲಿಸುತ್ತಿದ್ದರು. ‘ನಾಯಿ, ಕಿಶೋರ್ ಅವರ ಪ್ಯಾಂಟ್‌ ಕಚ್ಚಿ ಎಳೆದಿದೆ. ನಂತರ ವಿಚಿತ್ರವಾಗಿ ಬೊಗಳಿದೆ. ಆಗ ಕಿಶೋರ್ ನಾಯಿಯ ಬಳಿ ಹೋಗಿದ್ದಾರೆ. ಈ ಸಂದರ್ಭದಲ್ಲಿ ಮತ್ತೆ ಮಣ್ಣು ಜರಿದಿದೆ. ಅವರ ದೇಹದ ಅರ್ಧಭಾಗ ಮಣ್ಣಿನಡಿ ಸಿಲುಕಿದೆ. ಕೈಯಲ್ಲಿದ್ದ ಮೊಬೈಲ್ ಫೋನ್‌ನಿಂದ ಪತ್ನಿಗೆ ಫೋನ್ ಮಾಡಿದ್ದಾರೆ. ತವರಿನಲ್ಲಿದ್ದ ಪತ್ನಿ ಗಂಡನ ಗೆಳೆಯರನ್ನು ಫೋನ್‌ನಲ್ಲಿ ಸಂಪರ್ಕಿಸಿದ್ದಾರೆ. ತಕ್ಷಣ ದೌಡಾಯಿಸಿದ ಗೆಳೆಯರು ಕಿಶೋರ್ ಅವರನ್ನು ಮಣ್ಣಿನ ರಾಶಿಯಿಂದ ಹೊರ ತೆಗೆದಿದ್ದಾರೆ’ ಎಂದು ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.