ADVERTISEMENT

ಇಂದಿನಿಂದ ನವಕೇರಳ ವೇದಿಕೆ: ಬಿಗಿ ಭದ್ರತೆ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2023, 0:34 IST
Last Updated 18 ನವೆಂಬರ್ 2023, 0:34 IST
ನವಕೇರಳ ವೇದಿಕೆ ಸರಣಿ ಅಂಗವಾಗಿ ಜಿಲ್ಲೆಯ ಸಿದ್ಧತೆಯನ್ನು ಜಿಲ್ಲಾಧಿಕಾರಿ ಕೆ.ಇನ್ಬಶೇಖರನ್, ಅಧಿಕಾರಿಗಳು ಪರಿಶೀಲಿಸಿದರು
ನವಕೇರಳ ವೇದಿಕೆ ಸರಣಿ ಅಂಗವಾಗಿ ಜಿಲ್ಲೆಯ ಸಿದ್ಧತೆಯನ್ನು ಜಿಲ್ಲಾಧಿಕಾರಿ ಕೆ.ಇನ್ಬಶೇಖರನ್, ಅಧಿಕಾರಿಗಳು ಪರಿಶೀಲಿಸಿದರು   

ಕಾಸರಗೋಡು: ರಾಜ್ಯ ಸರ್ಕಾರದ ನೇತೃತ್ವದಲ್ಲಿ ನವಕೇರಳ ವೇದಿಕೆ ಹೆಸರಿನಲ್ಲಿ ಸಮಗ್ರ ಅಭಿವೃದ್ಧಿಯ ಘೋಷಣೆಯೊಂದಿಗೆ ನಡೆಯುವ ರಾಜ್ಯ ಮಟ್ಟದ ಸರಣಿ ನ.18ರಂದು ಜಿಲ್ಲೆಯಲ್ಲಿ ಆರಂಭಗೊಳ್ಳಲಿದೆ. ಸಚಿವ ಸಂಪುಟದ ಜತೆಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ 2 ದಿನ ಜಿಲ್ಲೆಯಲ್ಲಿದ್ದು, ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸುವರು.

ಶನಿವಾರ ಮಧ್ಯಾಹ್ನ 3.30ಕ್ಕೆ ಮಂಜೇಶ್ವರ ವಿಧಾನಸಭೆ ಕ್ಷೇತ್ರದ ಪೈವಳಿಕೆ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನವಕೇರಳ ವೇದಿಕೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ.

ನ.19ರಂದು ಬೆಳಿಗ್ಗೆ 9 ಗಂಟೆಗೆ ಪಿಲಿಕುಂಜೆ ನಗರಸಭೆ ಸಭಾಂಗಣದಲ್ಲಿ ಪ್ರಭಾತ ಸಭೆ ನಡೆಯಲಿದೆ. 11 ಗಂಟೆಗೆ ನಾಯನ್ಮಾರು ಮೂಲೆಯ ಚೆಂಗಳ ಪಂಚಾಯಿತಿ ಕಿರು ಕ್ರೀಡಾಂಗಣದಲ್ಲಿ ಕಾಸರಗೋಡು ವಿಧಾನಸಭೆ ಕ್ಷೇತ್ರ ಮಟ್ಟದ ನವಕೇರಳ ವೇದಿಕೆ ಕಾರ್ಯಕ್ರಮ ನಡೆಯಲಿದೆ.

ADVERTISEMENT

ಮಧ್ಯಾಹ್ನ 3 ಗಂಟೆಗೆ ಉದುಮಾ ವಿಧಾನಸಭೆ ಕ್ಷೇತ್ರದ ನವಕೇರಳ ವೇದಿಕೆ ಕಾರ್ಯಕ್ರಮ ಚಟ್ಟಂಚಾಲ್ ಶಾಲಾ ಮೈದಾನದಲ್ಲಿ ನಡೆಯಲಿದೆ. ಸಂಜೆ 4.30ಕ್ಕೆ ಕಾಞಂಗಾಡು ವಿಧಾನಸಭೆ ಕ್ಷೇತ್ರ ಮಟ್ಟದ ಕಾರ್ಯಕ್ರಮ ದುರ್ಗಾ ಶಾಲೆ ಮೈದಾನದಲ್ಲಿ, 6.30ಕ್ಕೆ ತ್ರಿಕರಿಪುರ ವಿಧಾನಸಭೆ ಕ್ಷೇತ್ರ ಮಟ್ಟದ ಕಾರ್ಯಕ್ರಮ ಕಾಲಿಕಡವಿನಲ್ಲಿ ನಡೆಯಲಿದೆ.

ಜಿಲ್ಲೆಯ ಉಸ್ತುವಾರಿ ಹೊಂದಿರುವ ಬಂದರು ಸಚಿವ ಅಹಮ್ಮದ್ ದೇವರ್ ಕೋವಿಲ್ ಶುಕ್ರವಾರ ಸಿದ್ಧತೆ ಪರಿಶೀಲನೆ ನಡೆಸಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಜಿಲ್ಲಾಧಿಕಾರಿ ಕೆ.ಇನ್ಬಶೇಖರನ್ ಇದ್ದರು.

ಭಾನುವಾರ ಕರ್ತವ್ಯದ ದಿನ: ರಾಜ್ಯ ಸರಕಾರದ ನೇತೃತ್ವದಲ್ಲಿ ನಡೆಯಲಿರುವ ನವಕೇರಳ ವೇದಿಕೆಯ ಆರಂಭ ಜಿಲ್ಲೆಯಲ್ಲಿ ನಡೆಯಲಿರುವುದರಿಂದ ಭಾನುವಾರ (ನ.19) ರಾಜ್ಯ ಸರ್ಕಾರಿ ನೌಕರರಿಗೆ ಕರ್ತವ್ಯದ ದಿನವಾಗಿದೆ ಎಂದು ಸರ್ಕಾರದ ಆದೇಶ ತಿಳಿಸಿದೆ.

ಐಕ್ಯರಂಗ ಪ್ರತಿನಿಧಿಗಳು ಹಾಜರಾಗಲ್ಲ: ವಿರೋಧ ಪಕ್ಷವಾಗಿರುವ ಐಕ್ಯರಂಗದ ಪ್ರತಿನಿಧಿಗಳು ನವಕೇರಳ ಸರಣಿ ಕಾರ್ಯಕ್ರಮದಲ್ಲಿ ಹಾಜರಾಗುವುದಿಲ್ಲ. ಒಕ್ಕೂಟ್ ರಾಜ್ಯ ಸಮಿತಿ ಆದೇಶ ಪ್ರಕಾರ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.