ADVERTISEMENT

ನಾವೂರು: ಗರ್ಭಿಣಿ ಪತ್ನಿಯ ಕೊಂದು ವ್ಯಕ್ತಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2025, 8:26 IST
Last Updated 19 ಜೂನ್ 2025, 8:26 IST
   

ಬಂಟ್ವಾಳ (ದಕ್ಷಿಣ ಕನ್ನಡ): ತಾಲ್ಲೂಕಿನ ನಾವೂರು ಗ್ರಾಮದಲ್ಲಿ ವ್ಯಕ್ತಿಯೊಬ್ಬ ಬುಧವಾರ ರಾತ್ರಿ ಕತ್ತು ಹಿಚುಕಿ ಪತ್ನಿಯ ಹತ್ಯೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ನಾವೂರು ಗ್ರಾಮದ ಬಡಗುಂಡಿಯ ತಿಮ್ಮಪ್ಪ ರಾಮ ಮೂಲ್ಯ ( 52ವರ್ಷ) ಪತ್ನಿಯ ಹತ್ಯೆ ಮಾಡಿದ ಆರೋಪಿ. ಜಯಂತಿ (45) ಕೊಲೆಯಾದ ಮಹಿಳೆ.

ಮಣಿಹಳ್ಳ – ವಗ್ಗ ರಾಷ್ಟ್ರೀಯ ಹೆದ್ದಾರಿ ನಡುವಿನ ಬಡಗುಂಡಿಯ ಎಂಬಲ್ಲಿರುವ ತಿಮ್ಮಪ್ಪ ಅವರ ಮನೆಯ ಕೋಣೆಯಲ್ಲಿ ಜಯಂತಿ ಅವರ ಮೃತದೇಹ ಮಲಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮನೆಯ ಅಡುಗೆ ಕೋಣೆಯಲ್ಲಿ ತಿಮ್ಮಪ್ಪ ಅವರ ಮೃತದೇಹ ನೇಣು ಬಿಗಿದು ಆತ್ಮಹತ್ಯೆ ‌ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ತಿಮ್ಮಪ್ಪ ಮೂಲ್ಯ ಕ್ಷುಲ್ಲಕ ಕಾರಣಕ್ಕೆ ಪತ್ನಿ ಜಯಂತಿ ಜೊತೆ ಜಗಳವಾಡಿದ್ದ. ಜಗಳ ವಿಕೋಪಕ್ಕೆ ಹೋಗಿ, ಪತ್ನಿಯ ಕತ್ತು ಹಿಚುಕಿ ಕೊಲೆ ಮಾಡಿದ್ದ. ನಂತರ ಆತನೂ ಅಡುಗೆ ಮನೆಯ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ADVERTISEMENT

ಜಯಂತಿ ಅವರು ಗರ್ಭಿಣಿಯಾಗಿದ್ದು, ಜುಲೈ 2 ರಂದು ಸೀಮಂತಕ್ಕೆ ಮುಹೂರ್ತ ನಿಗದಿಯಾಗಿತ್ತು. ಈ ನಡುವೆ ಅವರು ಕೊಲೆಯಾಗಿರುವುದು ಅವರ ಕುಟುಂಬದವರಲ್ಲಿ ದಿಗ್ಭ್ರಮೆ ಮೂಡಿಸಿದೆ. ಬುಧವಾರ ರಾತ್ರಿ 11ರಿಂದ ಗುರುವಾರ ಬೆಳಿಗ್ಗೆ 8 ರ ನಡುವೆ ಈ ಕೊಲೆ ನಡೆದಿದೆ.

ಈ ಘಟನೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ.

ಈ ಬಗ್ಗೆ ಮೃತ ಜಯಂತಿ ಅವರ ತಂಗಿ ಫರಂಗಿಪೇಟೆಯ ಸುಜಾತಾ ದೂರು ನೀಡಿದ್ದು ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ತಿಮ್ಮಪ್ಪ ಅವರ ಆತ್ಮಹತ್ಯೆ ಬಗ್ಗೆ ಅವರ ಅಣ್ಣ ಸಜೀಪ ಮೂಡ ವಿಶ್ವನಾಥ ದೂರು ನೀಡಿದ್ದು ಅಸಹಜ ಸಾವು ಪ್ರಕರಣ ದಾಖಲಾಗಿರುತ್ತದೆ. ಬಂಟ್ವಾಳ ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್ ಶಿವಕುಮಾರ್ ನೇತೃತ್ವದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಪ್ರಕರಣದ ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.