ADVERTISEMENT

ಪೊಲೀಸರ ಮೇಲಿನ ದಾಳಿ ಸಹಿಸಲ್ಲ

ನಗರ ಪೊಲೀಸ್‌ ಕಮಿಷನರ್ ಶಶಿಕುಮಾರ್ ಅಧಿಕಾರ ಸ್ವೀಕಾರ

​ಪ್ರಜಾವಾಣಿ ವಾರ್ತೆ
Published 2 ಜನವರಿ 2021, 4:12 IST
Last Updated 2 ಜನವರಿ 2021, 4:12 IST
ಮಂಗಳೂರು ನಗರದ ನೂತನ ಪೊಲೀಸ್ ಕಮಿಷನರ್ ಆಗಿ ಎನ್. ಶಶಿಕುಮಾರ್ ಶುಕ್ರವಾರ ವಿಕಾಸ್‌ಕುಮಾರ್ ಅವರಿಂದ ಅಧಿಕಾರ ಸ್ವೀಕರಿಸಿದರು.
ಮಂಗಳೂರು ನಗರದ ನೂತನ ಪೊಲೀಸ್ ಕಮಿಷನರ್ ಆಗಿ ಎನ್. ಶಶಿಕುಮಾರ್ ಶುಕ್ರವಾರ ವಿಕಾಸ್‌ಕುಮಾರ್ ಅವರಿಂದ ಅಧಿಕಾರ ಸ್ವೀಕರಿಸಿದರು.   

ಮಂಗಳೂರು: ಪೊಲೀಸರ ಮೇಲೆ ದಾಳಿಯಂತಹ ಕೃತ್ಯವನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಪೊಲೀಸರು ಸಾರ್ವಜನಿಕರ ಹಿತದೃಷ್ಟಿಯಿಂದ ಕೆಲಸ ಮಾಡುವಾಗ ಯಾವುದೇ ರೀತಿಯ ಭಯ ಪಡುವ ಅಗತ್ಯವಿಲ್ಲ ಎಂದು ನಗರದ ನೂತನ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ತಿಳಿಸಿದರು.

ಶುಕ್ರವಾರ ವಿಕಾಸ್‌ಕುಮಾರ್ ಅವರಿಂದ ಅಧಿಕಾರ ಸ್ವೀಕರಿಸಿದ ಬಳಿಕ ಅವರು ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಕಲಬುರ್ಗಿ ಎಸ್ಪಿಯಾಗಿದ್ದ ಸಂದರ್ಭದಲ್ಲಿ ಹೊಸ ಪೊಲೀಸ್ ಬೀಟ್ ವ್ಯವಸ್ಥೆ ಜಾರಿಗೆ ತಂದಿದ್ದೆ. ಮಂಗಳೂರಿನಲ್ಲಿ ಪ್ರಸ್ತುತ ಇರುವ ಬೀಟ್ ಬಗ್ಗೆ ಪರಿಶೀಲನೆ ನಡೆಸಿದ ಬಳಿಕ ಬಲವರ್ಧನೆ ಮಾಡಲಾಗುವುದು. ಕೊರೊನಾ ನಿಯಂತ್ರಣ ಕಾರ್ಯದಲ್ಲಿ ಪೊಲೀಸರು ಹೆಚ್ಚಾಗಿ ತೊಡಗಿಸಿಕೊಂಡಿದ್ದು, ಬೀಟ್ ವ್ಯವಸ್ಥೆ ಅಷ್ಟು ಪರಿಣಾಮಕಾರಿ ಅನುಷ್ಠಾನ ಆಗದಿರಬಹುದು. ಬೀಟ್ ವ್ಯವಸ್ಥೆಯನ್ನು ಮತ್ತೆ ಬಲಗೊಳಿಸಲು ಕ್ರಮ ತೆಗೆದುಕೊಳ್ಳುತ್ತೇನೆ’ ಎಂದು ತಿಳಿಸಿದರು.

ADVERTISEMENT

ಮಂಗಳೂರು ಸುಶಿಕ್ಷಿತ, ಪ್ರಜ್ಞಾವಂತ ನಾಗರಿಕರನ್ನು ಹೊಂದಿರುವ ನಗರ. ಸಾರ್ವಜನಿಕರು ಸಮವಸ್ತ್ರ ಇಲ್ಲದ ಪೊಲೀಸರಂತೆ ಕೆಲಸ ಮಾಡಿ ಪೊಲೀಸರಿಗೆ ಸಹಕಾರ ನೀಡಿದಾಗ ಉತ್ತಮ ಪೊಲೀಸ್ ವ್ಯವಸ್ಥೆ, ಶಾಂತಿ, ಸುವ್ಯವಸ್ಥೆ, ಅಪರಾಧ ರಹಿತ ಸಮಾಜ ನಿರ್ಮಾಣ ಮಾಡಲು ಸಾಧ್ಯವಿದೆ ಎಂದು ಹೇಳಿದರು.

‘ಕಮಿಷನರೆಟ್ ವ್ಯಾಪ್ತಿಯಲ್ಲಿ ಸಂಚಾರ ಪೊಲೀಸ್ ಠಾಣೆಗಳ ಸೇರಿದಂತೆ 22 ಪೊಲೀಸ್ ಠಾಣೆಗಳಿದ್ದು, 1ಸಾವಿರ ಸಿಬ್ಬಂದಿ ಇದ್ದಾರೆ. ಎಲ್ಲ ಅಧಿಕಾರಿ, ಸಿಬ್ಬಂದಿಯನ್ನು ಜತೆಯಲ್ಲಿ ಸೇರಿಸಿ, ತಂಡವಾಗಿ ಕೆಲಸ ಮಾಡುವ ಮೂಲಕ ಸಾರ್ವಜನಿಕರ ಸುರಕ್ಷತೆಗೆ ಒತ್ತು ನೀಡುತ್ತೇವೆ. ಸಾರ್ವಜನಿಕರ ಸಹಭಾಗಿತ್ವದೊಂದಿಗೆ ಉತ್ತಮ ಸೇವೆ ನೀಡಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು’ ಎಂದು ಹೇಳಿದರು.

112 ತುರ್ತು ಸಹಾಯವಾಣಿಗೆ ರಾಜ್ಯಮಟ್ಟದಲ್ಲಿ ದಿನಕ್ಕೆ 7 ಲಕ್ಷ ಕರೆಗಳು ಬರುತ್ತಿವೆ. ಕಮಿಷನರೆಟ್ ವ್ಯಾಪ್ತಿಯಲ್ಲಿ ಇದನ್ನು ಇನ್ನಷ್ಟು ಪರಿಣಾಮಕಾರಿ ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಡಿಸಿಪಿಗಳಾದ ಹರಿರಾಮ್ ಶಂಕರ್, ವಿನಯ ಗಾಂವ್ಕರ್, ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.