ADVERTISEMENT

ನಿಡ್ಡೋಡಿ ಕೃಷಿಭೂಮಿಗೆ ಅಕ್ರಮ ಪ್ರವೇಶ, ಹಾನಿ: ರೈತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2025, 6:26 IST
Last Updated 18 ಜುಲೈ 2025, 6:26 IST
ಮೂಡುಬಿದಿರೆಯ ನಿಡ್ಡೋಡಿಯಲ್ಲಿ ರೈತರೊಬ್ಬರ ಜಮೀನಿಗೆ ಖಾಸಗಿ ಕಂಪನಿ ಸಿಬ್ಬಂದಿ ಅಕ್ರಮವಾಗಿ ಪ್ರವೇಶಿಸಿ ಕೃಷಿ ನಾಶಪಡಿಸಿದ್ದಾರೆ ಎಂದು ಆರೋಪಿಸಿ ರೈತರು ಗುರುವಾರ ಪ್ರತಿಭಟನೆ ನಡೆಸಿದರು
ಮೂಡುಬಿದಿರೆಯ ನಿಡ್ಡೋಡಿಯಲ್ಲಿ ರೈತರೊಬ್ಬರ ಜಮೀನಿಗೆ ಖಾಸಗಿ ಕಂಪನಿ ಸಿಬ್ಬಂದಿ ಅಕ್ರಮವಾಗಿ ಪ್ರವೇಶಿಸಿ ಕೃಷಿ ನಾಶಪಡಿಸಿದ್ದಾರೆ ಎಂದು ಆರೋಪಿಸಿ ರೈತರು ಗುರುವಾರ ಪ್ರತಿಭಟನೆ ನಡೆಸಿದರು   

ಮೂಡುಬಿದಿರೆ: ಉಡುಪಿ- ಕಾಸರಗೋಡು ಮಧ್ಯೆ ಹಾದು ಹೋಗುವ 440 ಕೆ.ವಿ. ವಿದ್ಯುತ್ ಲೈನ್ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡ ಸ್ಟರ್ ಲೈಟ್ ಕಂಪನಿಯವರು ಸೂಚನೆ ನೀಡದೆ ಕೃಷಿಕರೊಬ್ಬರ ಜಾಗಕ್ಕೆ ಅಕ್ರಮ ಪ್ರವೇಶಿಸಿ, ತೆಂಗಿನ ತೋಟವನ್ನು ನಾಶ ಮಾಡಿಸಿದ್ದಾರೆ ಎಂದು ಆರೋಪಿಸಿ, ಘಟನೆ ಖಂಡಿಸಿ ನಿಡ್ಡೋಡಿ ಗ್ರಾಮಸ್ಥರು ಹಾಗೂ ರೈತರು ಗುರುವಾರ ಪ್ರತಿಭಟನೆ ನಡೆಸಿದರು.

ಪೀಟರ್ ಸಿಕ್ವೇರಾ, ಲವೀನಾ ಸಿಕ್ವೇರಾ ಅವರ ಜಾಗಕ್ಕೆ ಬಲತ್ಕಾರವಾಗಿ ಪ್ರವೇಶಿಸಿ ಫಲಭರಿತ ಮರಗಳನ್ನು ಕಡಿಯಲಾಗಿದೆ. ಹಿಟಾಚಿಯನ್ನು ಬಳಸಿ ಟವರ್ ಕಾಮಗಾರಿಯನ್ನು ಪ್ರಾರಂಭಿಸಿದ್ದಾಗ ಗ್ರಾಮಸ್ಥರು ತಡೆಯೊಡ್ಡಿದ್ದಾರೆ.

ಭಾರತೀಯ ಕಿಸಾನ್ ಸಂಘದ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಶಾಂತಿ ಪ್ರಸಾದ್ ಹೆಗ್ಡೆ ಮಾತನಾಡಿ, ಮನೆಯಲ್ಲಿದ್ದ ಅನಾರೋಗ್ಯ ಪೀಡಿತ ಪೀಟರ್ ಸಿಕ್ವೇರಾ ಅವರು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭ ಕಂಪನಿಯವರು ಅವರ ಜಾಗಕ್ಕೆ ಅಕ್ರಮ ಪ್ರವೇಶಿಸಿದ್ದಾರೆ. ಮನೆಗೆ ಹೋಗುವ ದಾರಿಗೆ ಹಾನಿ ಮಾಡಿದ್ದು, ಫಸಲು ನೀಡುತ್ತಿದ್ದ ತೆಂಗಿನ ಮರಗಳನ್ನು ನಾಶ ಮಾಡಿದ್ದಾರೆ. ನಷ್ಟದ ಬಗ್ಗೆ ಪರಿಹಾರ ನೀಡಿಲ್ಲ. ಅವರ ದಬ್ಬಾಳಿಕೆ ವಿರುದ್ಧ ಮೂಡುಬಿದಿರೆಯಿಂದ ನಿಡ್ಡೋಡಿಯವರೆಗೆ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಸಿದರು.

ADVERTISEMENT

ಕಲ್ಲಮುಂಡ್ಕೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಾ ಶೆಟ್ಟಿ, ಸದಸ್ಯರಾದ ಸುಖಾನಂದ ಶೆಟ್ಟಿ, ಜೆಸಿಂತಾ ಡಿಸೋಜ, ಕಿಸಾನ್ ಸಂಘದ ಕಾರ್ಯಕರ್ತರಾದ ಅಲ್ಫೋನ್ಸ್ ಲೋಬೊ, ಜಾನ್ ರೆಬೆಲ್ಲೊ, ಗಂಗಾಧರ ಶೆಟ್ಟಿ, ಅಬ್ರೋಜ್ ರೆಬೆಲ್ಲೊ, ಸದಾನಂದ ಪೂಜಾರಿ, ಜೀವನ್ ಕ್ರಾಸ್ತ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.