ADVERTISEMENT

ರ‍್ಯಾಪಿಡ್ ಆರ್‌ಟಿಪಿಸಿಆರ್‌ ಇಲ್ಲದೇ ಪರದಾಟ

ಯುಎಇಗೆ ತೆರಳಲು ಅವಕಾಶ: ಸೌಲಭ್ಯ ಕಲ್ಪಿಸದ ಮಂಗಳೂರು ವಿಮಾನ ನಿಲ್ದಾಣ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2021, 3:48 IST
Last Updated 6 ಆಗಸ್ಟ್ 2021, 3:48 IST
ಮಂಗಳೂರು ವಿಮಾನ ನಿಲ್ದಾಣ
ಮಂಗಳೂರು ವಿಮಾನ ನಿಲ್ದಾಣ   

ಮಂಗಳೂರು: ದುಬೈಗೆ ಪ್ರಯಾಣಿಸಲು ಅಗತ್ಯವಾಗಿರುವ ರ‍್ಯಾಪಿಡ್‌ ಆರ್‌ಟಿಪಿಸಿಆರ್‌ ಪರೀಕ್ಷೆ ಸೌಲಭ್ಯ ಇಲ್ಲಿನ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇನ್ನೂ ಆರಂಭ ವಾಗಿಲ್ಲ. ಇದರಿಂದಾಗಿ ಮಂಗಳೂರಿನಿಂದ ನೇರವಾಗಿ ದುಬೈ ಪ್ರಯಾಣಿಸುವ ಜನರು ಸಂಕಷ್ಟ ಎದುರಿಸುವಂತಾಗಿದೆ.

ಮಂಗಳೂರು ವಿಮಾನ ಪ್ರಮುಖವಾಗಿ ಗಲ್ಫ್‌ ರಾಷ್ಟ್ರಗಳಿಗೆ ವಿಮಾನಯಾನ ಸೌಲಭ್ಯವಿದ್ದು, ಇದೀಗ ರ‍್ಯಾಪಿಡ್ ಆರ್‌ಟಿಪಿಸಿಆರ್‌ ಸೌಲಭ್ಯ ಇಲ್ಲದೇ ಇರುವುದರಿಂದ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಇಲ್ಲವೇ ಕೊಚ್ಚಿನ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಅವಲಂಬಿಸುವುದು ಅನಿವಾರ್ಯವಾಗಿದೆ.

ಗುರುವಾರದಿಂದ ಕೆಲವು ಪ್ರಯಾಣಿ ಕರಿಗೆ ಬರಲು ಯುಎಇ ಅನುಮತಿ ನೀಡಿದೆ. ಯುಎಇ ವಸತಿ ವೀಸಾ ಹೊಂದಿರುವವರು, ಯುಎಇಯಲ್ಲಿ ಎರಡು ಡೋಸ್ ಲಸಿಕೆ ಪಡೆದವರು, ಎರಡನೇ ಡೋಸ್ ಲಸಿಕೆ ಪಡೆದು 14 ದಿನ ಪೂರೈಸಿದವರು ಯುಎಇಗೆ ಪ್ರಯಾಣಿಸಬಹುದು. ವಿದ್ಯಾರ್ಥಿಗಳು ಹಾಗೂ ಆರೋಗ್ಯ ವಲಯದವರಿಗೆ ಲಸಿಕೆಯನ್ನು ಕಡ್ಡಾಯ ಮಾಡಿಲ್ಲ.

ADVERTISEMENT

ಆದರೆ, ದುಬೈಗೆ ಪ್ರಯಾಣಿಸುವವರು 48 ಗಂಟೆಯೊಳಗಿನ ಆರ್‌ಟಿಪಿಸಿಆರ್‌ ನೆಗೆಟಿವ್ ವರದಿ ಹೊಂದಿರುವುದು ಕಡ್ಡಾಯ. ಅಲ್ಲದೇ ವಿಮಾನದಲ್ಲಿ ಪ್ರಯಾಣಿಸುವ ಮೊದಲು ಮಾಡಿಸಿದ ರ‍್ಯಾಪಿಡ್‌ ಆರ್‌ಟಿಪಿಸಿಆರ್‌ ವರದಿ ಹೊಂದಿರಬೇಕು.

ಯಾವುದೇ ದೇಶಕ್ಕೆ ವಿಮಾನವನ್ನು ಬಿಡುವ ಮೊದಲು ಅಲ್ಲಿನ ನಿಯಮ ಗಳನ್ನು ಪೂರೈಸುವುದು ಅಗತ್ಯವಾಗಿದೆ. ಈ ನಿಯಮಗಳನ್ನು ಪೂರೈಸಿದಲ್ಲಿ ಮಾತ್ರ ಆ ದೇಶಗಳಿಗೆ ವಿಮಾನಯಾನ ಆರಂಭಿಸುವಂತೆ ನಾಗರಿಕ ವಿಮಾನ ಯಾನ ನಿರ್ದೇಶನಾಲಯವು ವಿಮಾನ ಯಾನ ಸಂಸ್ಥೆಗಳಿಗೆ ಸೂಚನೆ ನೀಡಿದೆ.

ಆದರೆ, ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾತ್ರ ಈ ಸೌಲಭ್ಯ ಇಲ್ಲದಾಗಿದೆ. ಕೆಲ ದಿನಗಳ ಹಿಂದೆ ಯುಎಇಗೆ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು, ವಿಮಾನ ನಿಲ್ದಾಣದ ಅಧಿಕಾರಿಗಳನ್ನು ಸಂಪರ್ಕಿಸಿದ್ದು, ರ‍್ಯಾಪಿಡ್‌ ಆರ್‌ಟಿಪಿಸಿಆರ್ ಸೌಲಭ್ಯದ ಬಗ್ಗೆ ಮಾಹಿತಿ ಕೇಳಿದ್ದರು. ಆದರೆ, ಈ ವ್ಯವಸ್ಥೆ ಮಾಡಲು ಇನ್ನೂ ಒಂದು ವಾರ ಬೇಕಾಬಹುದು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

ಇದೀಗ ಮಂಗಳೂರಿನಿಂದ ದುಬೈಗೆ ತೆರಳುವ ಪ್ರಯಾಣಿಕರು ತಮ್ಮ ಲಗೇಜ್‌ಗಳೊಂದಿಗೆ ಆರ್‌ಟಿಪಿಸಿಆರ್‌ ನೆಗೆಟಿವ್‌ ವರದಿಯೊಂದಿಗೆ ಬೆಂಗಳೂರು ಇಲ್ಲವೇ ಕೊಚ್ಚಿನ್ ವಿಮಾನ ನಿಲ್ದಾಣಕ್ಕೆ ಹೋಗಬೇಕು. ಅಲ್ಲಿ ಮತ್ತೆ ರ‍್ಯಾಪಿಡ್‌ ಆರ್‌ಟಿಪಿಸಿಆರ್‌ ಪರೀಕ್ಷೆಗೆ ಒಳಪಟ್ಟು, ದುಬೈಗೆ ಪ್ರಯಾಣಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.