ADVERTISEMENT

ಲಸಿಕೆ ಇಲ್ಲ: ನೂರಾರು ಮಂದಿ ವಾಪಸ್‌

ಯಾವಾಗ ಲಸಿಕೆ ಕೊಡುತ್ತೀರಿ: ಜನರ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 8 ಮೇ 2021, 4:46 IST
Last Updated 8 ಮೇ 2021, 4:46 IST

ಮಂಗಳೂರು: ವೆನ್ಲಾಕ್ ಕೋವಿಡ್ ಲಸಿಕಾ ಕೇಂದ್ರ ಹಾಗೂ ಜಿಲ್ಲೆಯ ಎಲ್ಲ ಲಸಿಕಾ ಕೇಂದ್ರಗಳಲ್ಲಿ 2 ದಿನ ಕೋವಿಡ್‌ ತಡೆ ಲಸಿಕೆ ಲಭ್ಯವಿಲ್ಲ ಎಂದು ಜಿಲ್ಲಾ ಆರೋಗ್ಯ ಇಲಾಖೆ ಪ್ರಕಟಣೆ ನೀಡಿದ್ದರೂ ಅರಿವಿಲ್ಲದೆ ನೂರಾರು ಮಂದಿ ಶುಕ್ರವಾರ ಲಸಿಕಾ ಕೇಂದ್ರಗಳಲ್ಲಿ ಕಾದು ನಿಂತು ವಾಪಸಾದರು.

ವೆನ್ಲಾಕ್‌ ಸರ್ಕಾರಿ ಜಿಲ್ಲಾಸ್ಪತ್ರೆಯ ಲಸಿಕಾ ಕೇಂದ್ರದಲ್ಲಿ ಬೆಳಿಗ್ಗೆ ಹಿರಿಯ ನಾಗರಿಕರು, ಪೊಲೀಸ್ ಹಾಗೂ ರೈಲ್ವೆ ಸಿಬ್ಬಂದಿ ಸೇರಿದಂತೆ ನೂರಾರು ಮಂದಿ ಲಸಿಕೆ ಹಾಕಿಸಲು ಬಂದಿದ್ದರು. ‘ಬೆಳಿಗ್ಗೆ 7 ಗಂಟೆಗೇ ಬಂದಿದ್ದೇವೆ. ಲಸಿಕೆ ಲಭ್ಯವಿಲ್ಲ ಎಂದು ಬೋರ್ಡ್ ಇದೆ. ಯಾವಾಗ ಬರಲಿದೆ ಎಂಬುದೂ ಗೊತ್ತಾಗಿಲ್ಲ. ಪ್ರಥಮ ಡೋಸ್ ಹಾಕಿಸಿ 8 ವಾರ ಆಗಿದೆ. ಎರಡನೇ ಎರಡನೇ ಡೋಸ್ ಲಸಿಕೆ ಯಾವಾಗ ಕೊಡುತ್ತೀರಿ’ ಎಂದು ವೃದ್ಧರೊಬ್ಬರು ಅಲ್ಲಿದ್ದ ಆರೋಗ್ಯ ಸಿಬ್ಬಂದಿಯಲ್ಲಿ ವಿಚಾರಿಸಿದರು. ಆದರೆ ಸ್ಪಷ್ಟ ಉತ್ತರ ಲಭಿಸಲಿಲ್ಲ.

ವಾಗ್ವಾದ: ‘ನಾನು ಬೆಳಿಗ್ಗೆ 5 ಗಂಟೆಯಿಂದ ಇಲ್ಲಿ ಕಾಯುತ್ತಿದ್ದೇನೆ. ಇಲ್ಲಿ ನೋಡಿದರೆ ಲಸಿಕೆ ಇಲ್ಲ ಎಂದಿದೆ. ನಿನ್ನೆ ಬಂದಾಗ ನಾಳೆ ಬನ್ನಿ ಅಂದಿದ್ದರು. ಹಾಗಾಗಿ ಬಂದಿದ್ದೇವೆ. ಈಗ ಲಸಿಕೆ ಇಲ್ಲ ಎರಡು ದಿನ ಬಿಟ್ಟು ಬನ್ನಿ ಅನ್ನುತ್ತಾರೆ. ನಾವೇನು ಮಾಡಬೇಕು‘ ಎಂದು ಹಿರಿಯ ನಾಗರಿಕರು ಸಿಬ್ಬಂದಿ ಜತೆ ವಾಗ್ವಾದ ನಡೆಸಿದರು. ಲಸಿಕಾ ಕೇಂದ್ರದ ಮುಖ್ಯಸ್ಥೆ ಡಾ.ಶೈಲಜಾ ಎಲ್ಲರನ್ನೂ ಸಮಾಧಾನಪಡಿಸಿ ಕಳುಹಿಸಿದರು.

ADVERTISEMENT

‘ನಮಗೆ ಟೋಕನ್ ನೀಡಿ’ ಎಂದು ಮಹಿಳೆಯೊಬ್ಬರು ಮನವಿ ಮಾಡಿದರು. ಟೋಕನ್ ಯಾರಿಗೂ ನೀಡುವುದಿಲ್ಲ. ಲಸಿಕೆ ಲಭ್ಯವಾಗುವಾಗ ಮಾಧ್ಯಮದ ಮೂಲಕ ಮಾಹಿತಿ ದೊರೆಯಲಿದೆ. ಕೇಂದ್ರಕ್ಕೆ ಬಂದ ಹಾಗೆ ಟೋಕನ್ ನೀಡಿ ಲಸಿಕೆ ನೀಡಲಾಗುತ್ತದೆ. ಎರಡನೇ ಡೋಸ್‌ನವರಿಗೆ ಆದ್ಯತೆಯಲ್ಲಿ ನೀಡ ಲಾಗುತ್ತದೆ. ಪ್ರಥಮ ಡೋಸ್‌ ಪಡೆ ಯಲು ಕಡ್ಡಾಯ ಆನ್‌ಲೈನ್ ನೋಂದಣಿ ಮಾಡಬೇಕು ಎಂದು ತಿಳಿಸಿದರು.

2ನೇ ಡೋಸ್ ಲಸಿಕೆ ಲಭ್ಯ

ದಕ್ಷಿಣ ಕನ್ನಡ ಜಿಲ್ಲೆಯ ಲಸಿಕಾ ಶಿಬಿರಕ್ಕೆ ಸಂಬಂಧಿಸಿದಂತೆ ಮೇ 8ರಂದು ಮಂಗಳೂರಿನ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ 350 ಡೋಸ್, ಸಮುದಾಯ ಆರೋಗ್ಯ ಕೇಂದ್ರ ಮೂಡುಬಿದ್ರೆ 200 ಡೋಸ್, ಸ.ಆ.ಕೇಂದ್ರ ಮೂಲ್ಕಿ 200 ಡೋಸ್, ನಗರ ಸಮುದಾಯ ಆರೋಗ್ಯ ಕೇಂದ್ರ ಉಳ್ಳಾಲ 180 ಡೋಸ್, ನಗರ ಆರೋಗ್ಯ ಕೇಂದ್ರ ಸುರತ್ಕಲ್ 200 ಡೋಸ್ ಕೋವಿಶೀಲ್ಡ್‌ ಲಸಿಕೆ ಲಭ್ಯವಿದ್ದು, ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆವರೆಗೆ ಲಸಿಕಾ ಶಿಬಿರ ನಡೆಯಲಿದೆ. ಬಂಟ್ವಾಳ ಪುತ್ತೂರು, ಬೆಳ್ತಂಗಡಿ ಮತ್ತು ಸುಳ್ಯ ತಾಲ್ಲೂಕು ಆಸ್ಪತ್ರೆಗಳಲ್ಲೂ 2ನೇ ಡೋಸ್ ಲಸಿಕಾ ಶಿಬಿರ ನಡೆಯಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.