ADVERTISEMENT

ದೇವಳಗಳ ಜೀರ್ಣೋದ್ಧಾರದ ಮೂಲಕ ಆತ್ಮೋದ್ಧಾರ: ಒಡಿಯೂರು ಸ್ವಾಮೀಜಿ ಅಭಿಮತ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2024, 14:21 IST
Last Updated 27 ಏಪ್ರಿಲ್ 2024, 14:21 IST
ಪುತ್ತೂರು ತಾಲ್ಲೂಕಿನ ಆರ್ಯಾಪು ಕಾರ್ಪಾಡಿ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಒಡಿಯೂರು ಗುರುದೇವಾನಂದ ಸ್ವಾಮೀಜಿ ಆಶೀವರ್ಚನ ನೀಡಿದರು. ಮಾಣಿಲದ ಮೋಹನದಾಸ ಪರಮಹಂಸ ಸ್ವಾಮೀಜಿ, ಸವಣೂರು ಸೀತಾರಾಮ ರೈ, ಮೋಹನ್ ಗೌಡ ಇಡ್ಯಡ್ಕ ಭಾಗವಹಿಸಿದ್ದರು
ಪುತ್ತೂರು ತಾಲ್ಲೂಕಿನ ಆರ್ಯಾಪು ಕಾರ್ಪಾಡಿ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಒಡಿಯೂರು ಗುರುದೇವಾನಂದ ಸ್ವಾಮೀಜಿ ಆಶೀವರ್ಚನ ನೀಡಿದರು. ಮಾಣಿಲದ ಮೋಹನದಾಸ ಪರಮಹಂಸ ಸ್ವಾಮೀಜಿ, ಸವಣೂರು ಸೀತಾರಾಮ ರೈ, ಮೋಹನ್ ಗೌಡ ಇಡ್ಯಡ್ಕ ಭಾಗವಹಿಸಿದ್ದರು   

ಪುತ್ತೂರು: ದೇವಸ್ಥಾನದ ಜೀರ್ಣೋದ್ಧಾರದ ಮೂಲಕ ನಮ್ಮ ಆತ್ಮೋದ್ಧಾರದ ಕಾರ್ಯವಾಗುತ್ತಿದೆ. ಧಾರ್ಮಿಕ ಕೇಂದ್ರಗಳು ಶಿಕ್ಷಣ ನೀಡುವ ಕೇಂದ್ರವಾಗಬೇಕು. ಜನರಿಗೆ ಧರ್ಮ ಶಿಕ್ಷಣವನ್ನು ಧಾರ್ಮಿಕ ಕೇಂದ್ರಗಳಲ್ಲಿ ನೀಡಬೇಕಾದ ಆವಶ್ಯಕತೆ ಇದೆ ಎಂದು ಒಡಿಯೂರು ಕ್ಷೇತ್ರದ ಗುರುದೇವಾನಂದ ಸ್ವಾಮಿಜಿ ಹೇಳಿದರು.

ಪುತ್ತೂರು ತಾಲ್ಲೂಕಿನ ಆರ್ಯಾಪು ಗ್ರಾಮದ ಕಾರ್ಪಾಡಿ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀವರ್ಚನ ನೀಡಿದರು.

‘ವಿಜ್ಞಾನದಲ್ಲಿ ಆವಿಷ್ಕಾರವಿದ್ದು, ಪರಿವರ್ತನೆಯೇ ವಿಜ್ಞಾನ. ಆದರೆ, ಆಧ್ಯಾತ್ಮದಲ್ಲಿ ಅವಿಷ್ಕಾರ ಇಲ್ಲ. ಯುವಕರ ಶಕ್ತಿಯಿಂದ ಜಗತ್ತನ್ನು ಬದಲಾಯಿಸಲು ಸಾಧ್ಯ’ ಎಂದು ಅವರು ಹೇಳಿದರು.

ADVERTISEMENT

ಶ್ರೀಧಾಮ ಮಾಣಿಲದ ಮೋಹನದಾಸ ಪರಮಹಂಸ ಸ್ವಾಮಿಜಿ ಮಾತನಾಡಿ, ದೇವಸ್ಥಾನ, ಮಠ ಮಂದಿರಗಳ ಬ್ರಹ್ಮಕಲಶೋತ್ಸವಗಳು ನಡೆಯುತ್ತಿದೆ. ಕೋಟ್ಯಂತರ ಹಣ ಬಳಕೆಯಾಗುತ್ತಿದ್ದು, ಅದರ ಸದ್ಬಳಕೆಯ ಬಗ್ಗೆ ಯೋಚಿಸಬೇಕು. ದೇವಸ್ಥಾನ ಪೂಜೆಗೆ ಸೀಮಿತವಾಗಿರಬಾರದು, ಆಡಂಬರದಿಂದ ಭಕ್ತಿ ಪ್ರದರ್ಶನದ ಕೇಂದ್ರವಾಗಬಾರದು ಎಂದರು.

ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಸೀತಾರಾಮ ರೈ ಮಾತನಾಡಿದರು.

ಉಪನ್ಯಾಸಕ, ದೈವನರ್ತಕ ರವೀಶ್ ಪಡುಮಲೆ ಅವರು ಧಾರ್ಮಿಕ ಉಪನ್ಯಾಸ ನೀಡಿದರು. ವಕೀಲ ಮೋಹನ್ ಗೌಡ ಇಡ್ಯಡ್ಕ ಕಾರ್ಯಕ್ರಮ ಉದ್ಘಾಟಿಸಿದರು.

ಸಂಜೀವ ಪೂಜಾರಿ ಕೂರೇಲು ಅಧ್ಯಕ್ಷತೆ ವಹಿಸಿದ್ದರು. ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ, ಉದ್ಯಮಿ ಮೂಡಂಬೈಲು ರವಿ ಶೆಟ್ಟಿ ನೇಸರ ಕಂಪ, ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ, ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್ ಮಾತನಾಡಿದರು.

ವಕೀಲ ಬೆಟ್ಟ ಈಶ್ವರ ಭಟ್, ಉದ್ಯಮಿ ಸೀತಾರಾಮ ರೈ ಕೆದಂಬಾಡಿ ಗುತ್ತು, ಪರಮೇಶ್ವರ ಭಟ್, ಮಣಿಯಾನ ಪುರುಷೋತ್ತಮ ವಳಲಂಬೆ, ಜಯರಾಮ ರೈ ನುಳಿಯಾಲು, ರವಿಪ್ರಕಾಶ್, ಎ.ಕೆ.ಜಯರಾಮ ರೈ ಕೆಯ್ಯೂರು, ಉದ್ಯಮಿ ನಿತಿನ್ ಪಕ್ಕಳ, ರಾಧಾಕೃಷ್ಣ ಬೋರ್ಕರ್ ಭಾಗವಹಿಸಿದ್ದರು.

ಬೂಡಿಯಾರ್ ರಾಧಾಕೃಷ್ಣ ರೈ ಸ್ವಾಗತಿಸಿದರು. ಸೀತಾರಾಮ ರೈ ಕೈಕಾರ ವಂದಿಸಿದರು. ಉಮೇಶ್ ಎಸ್.ಕೆ, ಹರಿಣಿ ಪುತ್ತೂರಾಯ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.