ADVERTISEMENT

ಜಿಲ್ಲೆಯಲ್ಲಿ ಮತ್ತೆ ಏರುಗತಿಯಲ್ಲಿ ಸೋಂಕು

ಲಕ್ಷದ ಗಡಿ ದಾಟಿದ ಕೋವಿಡ್‌–19 ಪ್ರಕರಣ; ಗಡಿಯಲ್ಲಿ ತಪಾಸಣೆ ಇನ್ನಷ್ಟು ಕಠಿಣ

​ಪ್ರಜಾವಾಣಿ ವಾರ್ತೆ
Published 31 ಜುಲೈ 2021, 7:37 IST
Last Updated 31 ಜುಲೈ 2021, 7:37 IST
.
.   

ಮಂಗಳೂರು: ನೆರೆಯ ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್–19 ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಕಳೆದ ಒಂದು ವಾರದಿಂದ ಪ್ರಕರಣಗಳು ಏರುಗತಿಯಲ್ಲಿ ಸಾಗಿವೆ. ಇದರಿಂದಾಗಿ ಜಿಲ್ಲೆಯಲ್ಲಿ ಮತ್ತೆ ಲಾಕ್‌ಡೌನ್‌ ಆತಂಕ ಕಾಡುತ್ತಿದೆ.

ಈಗಾಗಲೇ ಗಡಿ ಭಾಗದಲ್ಲಿ ಚೆಕ್‌ಪೋಸ್ಟ್‌ ಹಾಕಲಾಗಿದ್ದು, ಕೇರಳದಿಂದ ಜಿಲ್ಲೆಗೆ ಬರುವವರ ತಪಾಸಣೆ ನಡೆಸಲಾಗುತ್ತಿದೆ. ಇದೀಗ ಕಾಲೇಜುಗಳೂ ಆರಂಭವಾಗಿದ್ದು, ಬಸ್‌ ಸಂಚಾರವೂ ಪುನರಾರಂಭವಾಗಿದೆ. ಹೀಗಾಗಿ ಕಾಸರಗೋಡಿನಿಂದ ಗಡಿ ದಾಟಿ ಬರುವವರ ಸಂಖ್ಯೆಯೂ ಹೆಚ್ಚಾಗಿದೆ.

‘ಪ್ರಮುಖವಾಗಿ ಜಿಲ್ಲೆಯ ಹಲವು ನರ್ಸಿಂಗ್ ಹಾಗೂ ಪ್ಯಾರಾಮೆಡಿಕಲ್‌ ಕಾಲೇಜುಗಳಲ್ಲಿ ಕೇರಳದ ವಿದ್ಯಾರ್ಥಿಗಳೇ ಅಧಿಕ ಸಂಖ್ಯೆಯಲ್ಲಿದ್ದಾರೆ. ಇದೀಗ ಈ ವಿದ್ಯಾರ್ಥಿಗಳು ಜಿಲ್ಲೆಗೆ ಮರಳಿದ್ದು, ಹಾಸ್ಟೆಲ್‌ಗಳಲ್ಲಿ ಉಳಿದಿದ್ದಾರೆ. ಈ ವಿದ್ಯಾರ್ಥಿಗಳ ಆರ್‌ಟಿಪಿಸಿಆರ್‌ ಪರೀಕ್ಷೆ ಮಾಡಲಾಗುತ್ತಿದ್ದು, ಸೂಕ್ಷ್ಮ ನಿಗಾ ವಹಿಸಲಾಗಿದೆ’ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಇನ್ನು ವಾಣಿಜ್ಯ ವಹಿವಾಟು, ಉದ್ಯೋಗ, ವೈದ್ಯಕೀಯ ಸೇವೆಗಾಗಿ ಕಾಸರಗೋಡು ಜಿಲ್ಲೆಯ ಜನರು ಮಂಗಳೂರನ್ನೇ ಅವಲಂಬಿಸಿದ್ದು, ನಿತ್ಯವೂ ಸಾವಿರಾರು ಜನರು ನಗರಕ್ಕೆ ಬಂದು ಹೋಗುತ್ತಿದ್ದಾರೆ. ಗಡಿಭಾಗದ ಚೆಕ್‌ಪೋಸ್ಟ್‌ನಲ್ಲಿ ಆರ್‌ಟಿಪಿಸಿಆರ್‌ ನೆಗೆಟಿವ್‌ ವರದಿ ಇಲ್ಲವೇ ಒಂದು ಡೋಸ್‌ ಲಸಿಕೆ ಪಡೆದ ಪ್ರಮಾಣಪತ್ರವನ್ನು ಹಾಜರುಪಡಿಸಬೇಕು. ಇಲ್ಲದೇ ಇದ್ದರೆ, ಚೆಕ್‌ಪೋಸ್ಟ್‌ನಲ್ಲಿ ಗಂಟಲು ದ್ರವ ಸಂಗ್ರಹಿಸುವ ವ್ಯವಸ್ಥೆ ಮಾಡಲಾಗಿದೆ.

ಚೆಕ್‌ಪೋಸ್ಟ್‌ಗಳನ್ನು ಈ ಹಿಂದೆಯೇ ನಿರ್ಮಿಸಲಾಗಿದೆ. ಅದಾಗ್ಯೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾರದಿಂದ ಈಚೆಗೆ ಕೋವಿಡ್ ಪ್ರಕರಣಗಳು ನಿತ್ಯ 300 ರ ಆಸುಪಾಸಿನಲ್ಲಿವೆ. ಹೀಗಾಗಿ ಗಡಿಯಲ್ಲಿ ತಪಾಸಣೆ ಇನ್ನಷ್ಟು ಬಿಗಿ ಮಾಡಲು ಜಿಲ್ಲಾಡಳಿತ ಮುಂದಾಗಿದೆ.

ಲಸಿಕೆ ಕೊರತೆ: ಒಂದೆಡೆ ಕೋವಿಡ್–19 ಪ್ರಕರಣಗಳು ಏರುತ್ತಿದ್ದರೆ, ಇನ್ನೊಂದೆಡೆ ಜಿಲ್ಲೆಯಲ್ಲಿ ಲಸಿಕೆಯ ಕೊರತೆ ಎದುರಾಗುತ್ತಿದೆ.

‘ಶನಿವಾರ ಜಿಲ್ಲೆಗೆ 15,400 ಡೋಸ್‌ ಕೋವಿಶೀಲ್ಡ್‌ ಲಸಿಕೆ ಬರುವ ನಿರೀಕ್ಷೆ ಇದೆ. ಕೋವ್ಯಾಕ್ಸಿನ್‌ ಕೂಡ 2–3 ದಿನದಲ್ಲಿ ಜಿಲ್ಲೆಗೆ ಲಭ್ಯವಾಗಲಿದೆ’ ಎಂದು ಲಸಿಕೆ ನೋಡಲ್‌ ಅಧಿಕಾರಿ ಡಾ.ಬಿ.ವಿ. ರಾಜೇಶ್‌ ತಿಳಿಸಿದ್ದಾರೆ.

‘ಮಂಗಳೂರು ತಾಲ್ಲೂಕಿನಲ್ಲಿ ವಾರಕ್ಕೆ 80 ಸಾವಿರ ಡೋಸ್‌ ಲಸಿಕೆ ದೊರೆಯುತ್ತಿತ್ತು. ಈ ವಾರ 40 ಸಾವಿರ ಡೋಸ್‌ ಲಸಿಕೆ ಬಂದಿದ್ದು, ಈಗಾಗಲೇ ಎಲ್ಲ ಲಸಿಕೆಯನ್ನು ಹಾಕಲಾಗಿದೆ’ ಎಂದು ಮಂಗಳೂರು ತಾಲ್ಲೂಕು ವೈದ್ಯಾಧಿಕಾರಿ ಡಾ.ಸುಜಯ್‌ ಭಂಡಾರಿ ತಿಳಿಸಿದ್ದಾರೆ.

₹ 1 ಕೋಟಿ ದಾಟಿದ ದಂಡ ವಸೂಲಿ

ಜಿಲ್ಲೆಯಲ್ಲಿ ಮೊದಲ ಅಲೆಯ ಸಂದರ್ಭದಲ್ಲಿ ಮಾಸ್ಕ್‌ ನಿಯಮ ಉಲ್ಲಂಘನೆಗೆ ವಿಧಿಸಲಾಗುತ್ತಿದ್ದ ದಂಡದ ಪ್ರಮಾಣ ಇದೀಗ ₹1 ಕೋಟಿ ದಾಟಿದೆ.

2020 ರಿಂದ ಆರಂಭವಾದ ದಂಡ ಪ್ರಕ್ರಿಯೆ ಎರಡು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದೆ. ನಗರ ಪ್ರದೇಶದಲ್ಲಿ ಸ್ಥಳೀಯಾಡಳಿತಗಳು ಹಾಗೂ ಪಂಚಾಯಿತಿ ಮಟ್ಟದಲ್ಲಿ ಅಲ್ಲಿನ ಅಧಿಕಾರಿಗಳು ದಂಡ ವಿಧಿಸುತ್ತಿದ್ದಾರೆ. ಇದುವರೆಗೆ ಜಿಲ್ಲೆಯಲ್ಲಿ ಮಾಸ್ಕ್‌ ನಿಯಮ ಉಲ್ಲಂಘನೆಯ 82,384 ಪ್ರಕರಣಗಳನ್ನು ದಾಖಲಿಸಲಾಗಿದ್ದು, ಒಟ್ಟು ₹1,00,16,717 ದಂಡ ವಸೂಲಿ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.