ಗಿಡಿಗೆರೆ ರಾಮಕ್ಕ
ಮೂಲ್ಕಿ (ದಕ್ಷಿಣ ಕನ್ನಡ): ಸಿರಿ ಪಾಡ್ದನದ ಮೂಲಕ ಖ್ಯಾತರಾಗಿದ್ದ ಪಾಡ್ದನ ಕಲಾವಿದೆ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗಿಡಿಗೆರೆ ರಾಮಕ್ಕ ಮೊಗೇರ (102) ಅವರು ಕಟೀಲು ಸಮೀಪದ ಗಿಡಿಗೆರೆಯ ಮನೆಯಲ್ಲಿ ಸೋಮವಾರ ನಿಧನರಾದರು.
ರಾಮಕ್ಕ ಅವರು ಮಂಗಳೂರು ತಾಲ್ಲೂಕಿನ ವಾಮಂಜೂರಿನ ಕೂಕ್ರ ಮುಗ್ಗೇರ– ದುಗ್ಗಮ್ಮ ದಂಪತಿಯ ಪುತ್ರಿ. 17ನೇ ವಯಸ್ಸಿನಲ್ಲಿ ಕಟೀಲಿನ ಸಮೀಪದ ಗಿಡಿಗೆರೆಯ ಕಾಪೀರ ಮುಗ್ಗೇರ ಅವರನ್ನು ವಿವಾಹವಾಗಿದ್ದರು. ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಪಾಡ್ದನ ಕಟ್ಟುವ, ಅದನ್ನು ನಾಟಿಗದ್ದೆಗಳಲ್ಲಿ ಹಾಡುತ್ತಿದ್ದರು. ತುಳು ಕವಿತೆ, ಪಾಡ್ದನ ಮತ್ತು ಸಂಧಿಗಳು ಅವರ ಅಜ್ಜಿಯಿಂದ ಬಳುವಳಿಯಾಗಿ ಬಂದಿದ್ದವು.
ಅಕ್ಷರ ಜ್ಞಾನವಿಲ್ಲದ ರಾಮಕ್ಕ ಕಬಿತೆಗಳನ್ನು ರಚಿಸಿದ್ದರು. ಓ ಬೇಲೆ, ನಲ್ಲೊರಿ ಮಾಮ, ಮಂಜೊಟ್ಟಿ ಗೋಣ, ಗೋವಿಂದ ಬದನೆ, ಕಾನಡ, ಮಾಲ್ಂಡ್ ಮರ, ಕುಮಾರ, ಸಿರಿ, ಬಂಟರು, ಅಬ್ಬಗ-ದಾರಗೆ ಮೊದಲಾದ ಸಂಧಿ- ಪಾಡ್ದನಗಳು ಅವರಿಗೆ ಕಂಠಪಾಠವಾಗಿದ್ದವು. ಅವರು ದೀರ್ಘವಾಗಿ ಹಾಡಿರುವ ‘ಸಿರಿ ಪಾಡ್ದನ’ವನ್ನು ಸಾಹಿತಿ, ಸಂಶೋಧಕ ಎ.ವಿ.ನಾವಡ ಅವರ ಸಂಪಾದಿಸಿದ್ದಾರೆ. ‘ರಾಮಕ್ಕ ಮುಗ್ಗೇರ್ತಿ ಕಟ್ಟಿದ ಸಿರಿಪಾಡ್ದನ’ ಎಂಬ ಈ ಗ್ರಂಥವನ್ನುಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗವು ಪ್ರಕಟಿಸಿದೆ.
2015ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, 2000ದಲ್ಲಿ ವೀರರಾಣಿ ಅಬ್ಬಕ್ಕ ಪ್ರಶಸ್ತಿ, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪ್ರಶಸ್ತಿ, ಕಟೀಲು ದೇವಳದ ‘ಪಾಡ್ದನ ಕೋಗಿಲೆ’ ಬಿರುದು, 2001ರಲ್ಲಿ ಜಿಲ್ಲಾ ಮಟ್ಟದ ಗಣರಾಜ್ಯೋತ್ಸವ ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದಾರೆ. 2004-05ನೇ ಸಾಲಿನಲ್ಲಿ ಕರ್ನಾಟಕ ತುಳುಸಾಹಿತ್ಯ ಅಕಾಡೆಮಿಯ ಸದಸ್ಯತ್ವ, ಗೌರವ ಸನ್ಮಾನಗಳಿಗೂ ಅವರು ಪಾತ್ರರಾಗಿದ್ದರು. ಅವರಿಗೆ ಆರು ಮಂದಿ ಪುತ್ರರು ಹಾಗೂ ಪುತ್ರಿ ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.