ADVERTISEMENT

ಪರೀಕ್ಷಾ ಪೆ ಚರ್ಚಾ 5ನೇ ಆವೃತ್ತಿ ಏ.1ಕ್ಕೆ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2022, 16:22 IST
Last Updated 29 ಮಾರ್ಚ್ 2022, 16:22 IST

ಮಂಗಳೂರು: ಏಪ್ರಿಲ್ 1ರಂದು ನಡೆಯುವ ಪರೀಕ್ಷಾ ಪೆ ಚರ್ಚಾದ 5ನೇ ಆವೃತ್ತಿಯ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ತಿಳಿಸಿದರು.

ಮಂಗಳವಾರ ಇಲ್ಲಿ ಈ ಬಗ್ಗೆ ಅವರು ಮಾಹಿತಿ ನೀಡಿದರು. ಏಪ್ರಿಲ್ 1ರಂದು ನಡೆಯಲಿರುವ ಪರೀಕ್ಷಾ ಪೆ ಚರ್ಚಾದಲ್ಲಿ ದೇಶ ಹಾಗೂ ವಿದೇಶಗಳಿಂದ ಕೋಟ್ಯಂತರ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ಭಾಗವಹಿಸಲಿದ್ದಾರೆ. ಸೃಜನಾತ್ಮಕ ಬರವಣಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಸುಮಾರು 15.7 ಲಕ್ಷ ಸ್ಪರ್ಧಾಳುಗಳು ಈಗಾಗಲೇ ನೋಂದಾಯಿಸಿಕೊಂಡಿದ್ದಾರೆ ಎಂದರು.

21ನೇ ಶತಮಾನದ ಜ್ಞಾನ ಆಧಾರಿತ ಆರ್ಥಿಕತೆಯನ್ನು ನಿರ್ಮಿಸುವಲ್ಲಿ ಪರೀಕ್ಷಾ ಪೆ ಚರ್ಚಾ ಪ್ರಾಮುಖ್ಯತೆ ಪಡೆದಿದ್ದು, ಪ್ರಧಾನಮಂತ್ರಿ ವಿದ್ಯಾರ್ಥಿಗಳೊಂದಿಗೆ ನೇರವಾಗಿ ಸಂವಹನ ನಡೆಸುತ್ತಾರೆ. ಮೋದಿ ನೇತೃತ್ವದ ‘ಎಕ್ಸಾಮ್ ವಾರಿಯರ್ಸ್’ ಎಂಬ ಬೃಹತ್ ಆಂದೋಲನದ ಭಾಗವಾಗಿ ಪರೀಕ್ಷಾ ಪೆ ಚರ್ಚಾ ನಡೆಯುತ್ತಿದೆ. 5ನೇ ಆವೃತ್ತಿಯು ನವದೆಹಲಿಯಲ್ಲಿ ಸಂವಾದಾತ್ಮಕ ರೂಪದಲ್ಲಿ ತಾಲ್‌ ಕಟೋರಾ ಕ್ರೀಡಾಂಗಣದಲ್ಲಿ ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ ಎಂದು ತಿಳಿಸಿದರು.

ADVERTISEMENT

ದೂರದರ್ಶನ ರೇಡಿಯೊ ಚಾನೆಲ್‍ಗಳು, ಟಿವಿ ಚಾನೆಲ್‍ಗಳು, ಎಡುಮಿನ್‌ ಆಫ್ ಇಂಡಿಯಾದ ಯೂಟ್ಯೂಬ್ ಚಾನೆಲ್‍ಗಳು, ನರೇಂದ್ರ ಮೋದಿ, ಪಿಎಂಒ ಇಂಡಿಯಾ, ಪಿಐಬಿ ಇಂಡಿಯಾ, ದೂರದರ್ಶನ ನ್ಯಾಷನಲ್, ಮೈ ಜಿಒವಿ ಇಂಡಿಯಾ, ಡಿಡಿನ್ಯೂಸ್, ರಾಜ್ಯಸಭಾ ಟಿವಿ, ಸ್ವಯಂ ಸೇರಿದಂತೆ ಡಿಜಿಟಲ್ ಮಾಧ್ಯಮದಲ್ಲಿ ನೇರ ಪ್ರಸಾರವಾಗಲಿದೆ ಎಂದು ವಿವರಿಸಿದರು. ಎಕ್ಕೂರಿನ ಕೇಂದ್ರಿಯ ವಿದ್ಯಾಲಯದ ಪ್ರಾಂಶುಪಾಲ ಎನ್.ಎಸ್. ಯಾದವ್ ಹಾಗೂ ರಾಜಾರಾಂ ಭಟ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.