ADVERTISEMENT

ವೇತನ ಪಾವತಿಗೆ ವಿಶೇಷಾನುದಾನ ನೀಡಿ

ಆಂಗ್ಲ ಮಾಧ್ಯಮ ಶಾಲಾ ಒಕ್ಕೂಟದ ಆಗ್ರಹ

​ಪ್ರಜಾವಾಣಿ ವಾರ್ತೆ
Published 13 ಜೂನ್ 2020, 16:37 IST
Last Updated 13 ಜೂನ್ 2020, 16:37 IST

ಮಂಗಳೂರು: ಮಾರ್ಚ್‌ನಲ್ಲಿ ಪರೀಕ್ಷೆ ನಡೆಸದೇ ಇರುವುದರಿಂದ ವಿದ್ಯಾರ್ಥಿಗಳ ಪೋಷಕರಿಂದ ಬಾಕಿ ಶುಲ್ಕ ಪಾವತಿಯಾಗಿಲ್ಲ. ಇದರಿಂದ ಶಿಕ್ಷಕರಿಗೆ, ಸಿಬ್ಬಂದಿಗೆ ವೇತನ ನೀಡಲು ಸಾಧ್ಯವಾಗದೇ ತೊಂದರೆ ಅನುಭವಿಸುವಂತಾಗಿದೆ ಎಂದು ದಕ್ಷಿಣ ಮತ್ತು ಉಡುಪಿ ಜಿಲ್ಲಾ ಆಂಗ್ಲ ಮಾಧ್ಯಮ ಶಾಲಾ ಒಕ್ಕೂಟ ಹೇಳಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ವೈ.ಮುಹಮ್ಮದ್ ಬ್ಯಾರಿ, ‘ಆಂಗ್ಲ ಮಾಧ್ಯಮ ಶಾಲೆಗಳ ಬಗ್ಗೆ ಟೀಕೆ ಮಾಡುವವರು ಅಲ್ಲಿ ದುಡಿಯುವ ಶಿಕ್ಷಕರು ಹಾಗೂ ಸಿಬ್ಬಂದಿ ಬಗ್ಗೆಯೂ ಗಮನಹರಿಸಬೇಕು’ ಎಂದರು.

ಹಲವು ಶಾಲೆಗಳಿಗೆ ಎರಡು ವರ್ಷಗಳಿಂದ ಆರ್‌ಟಿಇ ಅನುದಾನ ಪಾವತಿಯಾಗಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಆರ್‌ಟಿಇ ಅಡಿ ವಿವಿಧ ಶಾಲೆಗಳಿಗೆ ₹8 ಕೋಟಿ ಪಾವತಿಯಾಗಬೇಕಿದೆ ಎಂದ ಅವರು, ಆರನೇ ವೇತನ ಆಯೋಗದ ಪ್ರಕಾರ ಶಿಕ್ಷಕರು ಹಾಗೂ ಸಿಬ್ಬಂದಿಗೆ ವೇತನ ನೀಡಬೇಕಾದಲ್ಲಿ ಕನಿಷ್ಠ ಪ್ರತಿಯೊಬ್ಬ ವಿದ್ಯಾರ್ಥಿಯಿಂದ ₹60ಸಾವಿರದಿಂದ ₹70ಸಾವಿರದವರೆಗೆ ಶುಲ್ಕ ಪಡೆಯಬೇಕು. ಈ ಬಗ್ಗೆ ಸರ್ಕಾರ ವಿಮರ್ಶೆ ಮಾಡಬೇಕು ಎಂದು ಹೇಳಿದರು.

ADVERTISEMENT

ಲಾಕ್‌ಡೌನ್‌ನಿಂದ ವೇತನ ಪಾವತಿಗೆ ಸರ್ಕಾರ ವಿಶೇಷಾನುದಾನ ಒದಗಿಸಬೇಕು. ಬಜೆಟ್ ಶಾಲೆಗಳಿಗೂ ಹೈಫೈ ಶಾಲೆಗಳಿಗೂ ಇರುವ ವ್ಯತ್ಯಾಸ ಗಮನಿಸಬೇಕು. ಅನಗತ್ಯ ಟೀಕೆ ಮಾಡುವುದು ಸರಿಯಲ್ಲ. ಈ ಬೇಡಿಕೆಗಳ ಕುರಿತಂತೆ ಈಗಾಗಲೇ ಮುಖ್ಯಮಂತ್ರಿ, ಶಿಕ್ಷಣ ಸಚಿವರನ್ನು ಭೇಟಿಯಾಗಿ ಮನವರಿಕೆ ಮಾಡಲಾಗಿದೆ ಎಂದು ತಿಳಿಸಿದರು.

ಸರ್ಕಾರ ಅಥವಾ ಪೋಷಕರ ಬೇಡಿಕೆಗಳನ್ನು ಈಡೇರಿಸಲು ಆಂಗ್ಲ ಮಾಧ್ಯಮ ಶಾಲೆಗಳು ಸಿದ್ಧವಿವೆ. ಆದರೆ ಸಾವಿರಾರು ಸಂಖ್ಯೆಯಲ್ಲಿರುವ ಶಿಕ್ಷಕರು ಹಾಗೂ ಸಿಬ್ಬಂದಿಗೆ ವೇತನ ನೀಡುವ ಮೂಲಕ ಅವರ ಜೀವನಕ್ಕೆ ದಾರಿ ತೋರಿಸಬೇಕಾಗಿದೆ. ಸರ್ಕಾರ ಆಂಗ್ಲ ಮಾಧ್ಯಮ ಶಾಲೆಗಳಿಗೆ ವಿಶೇಷ ಅನುದಾನ ನೀಡಬೇಕು. ಇಲ್ಲವಾದಲ್ಲಿ ಬಡ್ಡಿರಹಿತ ಸಾಲವನ್ನು ಒದಗಿಸಿದರೆ, 10 ವರ್ಷಗಳಲ್ಲಿ ಅದನ್ನು ಮರು ಪಾವತಿ ಮಾಡುತ್ತೇವೆ ಎಂದು ಒಕ್ಕೂಟದ ಕೋಶಾಧಿಕಾರಿ ಸವಣೂರು ಸೀತಾರಾಮ ರೈ ಹೇಳಿದರು.

ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ. ರವೀಂದ್ರ ಶೆಟ್ಟಿ, ಸದಸ್ಯರಾದ ಬಿ.ಎ. ನಝೀರ್, ಮೂಸಬ್ಬ ಪಿ. ಬ್ಯಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.