ADVERTISEMENT

ಮಂಗಳೂರು: ತ್ಯಾಜ್ಯ ತಡೆಗೆ ನಿವಾಸಿಗಳದೇ ಕ್ಯಾಮೆರಾ

ಅಶೋಕ ನಗರ ದಂಬೆಲ್ ಪ್ರದೇಶದ ಫಲ್ಗುಣಿ ನಗರ ಅಭಿವೃದ್ಧಿ ಸಮಿತಿಯ ಸ್ವಚ್ಛತಾ ಕಾಳಜಿ

ವಿಕ್ರಂ ಕಾಂತಿಕೆರೆ
Published 23 ಏಪ್ರಿಲ್ 2025, 5:12 IST
Last Updated 23 ಏಪ್ರಿಲ್ 2025, 5:12 IST
ಫಲ್ಗುಣಿ ನಗರದಲ್ಲಿ ತ್ಯಾಜ್ಯ ಎಸೆಯುವುದನ್ನು ತಡೆಯಲು ನಾಗರಿಕರೇ ಅಳವಡಿಸಿರುವ ಫಲಕ
ಫಲ್ಗುಣಿ ನಗರದಲ್ಲಿ ತ್ಯಾಜ್ಯ ಎಸೆಯುವುದನ್ನು ತಡೆಯಲು ನಾಗರಿಕರೇ ಅಳವಡಿಸಿರುವ ಫಲಕ   

ಮಂಗಳೂರು: ‘ಬಂಗ್ರಕೂಳೂರಿನ ದಂಬೆಲ್ ಫಲ್ಗುಣಿ ನಗರ ಮುಖ್ಯರಸ್ತೆಯ ಬದಿಯಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ತ್ಯಾಜ್ಯ ಎಸೆದು ಮಲಿನಗೊಳಿಸುತ್ತಿರುವ ಈ ವ್ಯಕ್ತಿಗಳ ಪರಿಚಯವಿದ್ದಲ್ಲಿ ಈ ವಿಡಿಯೊ ತೋರಿಸಿ ರಸ್ತೆ ಬದಿ ತ್ಯಾಜ್ಯ ಸುರಿಯದಂತೆ ಮವನಿ ಮಾಡಿ. ಮುಂದೆಯೂ ಈ ರೀತಿ ಮಾಡಿದ್ದು ಕಂಡುಬಂದಲ್ಲಿ ಅಧಿಕಾರಿಗಳು ದಂಡ ವಿಧಿಸಲಿದ್ದಾರೆ ಎಚ್ಚರಿಕೆ...’

ಮಹಾನಗರ ಪಾಲಿಕೆ ಕೋಡಿಕಲ್ ವಾರ್ಡ್‌ನ ನಿಕಟಪೂರ್ವ ಸದಸ್ಯ ಕಿರಣ್ ಕುಮಾರ್ ಕೋಡಿಕಲ್ ಫಲ್ಗುಣಿ ನಗರ ಅಭಿವೃದ್ಧಿ ಸಮಿತಿ ಮತ್ತು ಫಲ್ಗುಣಿ ನಗರ ನೋಟಿಸ್ ಬೋರ್ಡ್ ಎಂಬ ವಾಟ್ಸ್ ಆ್ಯಪ್‌ ಗ್ರೂಪ್‌ಗಳಲ್ಲಿ ಈಚೆಗೆ ವಿಡಿಯೊ ಸಮೇತ ಹಾಕಿದ ಪೋಸ್ಟ್ ಇದು. ಇದಕ್ಕೆ ಸಂಬಂಧಿಸಿದ ವಿಡಿಯೊ ಸಿಕ್ಕಿದ್ದು ಇಲ್ಲಿನ ನಿವಾಸಿಗಳೇ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾದಲ್ಲಿ. ಬಡಾವಣೆಯಲ್ಲಿ ತ್ಯಾಜ್ಯದ ಸಮಸ್ಯೆ ಪರಿಹಾರಕ್ಕಾಗಿ ಸ್ಥಳೀಯರೇ ಕಂಡುಕೊಂಡ ಮಾರ್ಗ ಇದು. 

2016ರಲ್ಲಿ ಅಭಿವೃದ್ಧಿ ಸಮಿತಿ ರಚನೆಯಾದ ನಂತರ ಸ್ವಚ್ಛಭಾರತ ಯೋಜನೆಯ ಅನುಷ್ಠಾನ, ಹಸಿರೀಕರಣ ಸೇರಿದಂತೆ ಹಲವು ಯೋಜನೆಗಳನ್ನು ಇಲ್ಲಿ ಹಮ್ಮಿಕೊಳ್ಳಲಾಗಿದೆ. ನಾಗರಿಕರು ಜಾಗೃತರಾಗಿದ್ದರೂ ಬಡಾವಣೆಗೆ ಪ್ರವೇಶಿಸುವ ನಿರ್ಜನ ಪ್ರದೇಶದಲ್ಲಿ ಕೆಲವರು ತ್ಯಾಜ್ಯ ಎಸೆಯುತ್ತಿದ್ದರು. ಇದನ್ನು ನಿಯಂತ್ರಿಸಲು ಸಿಸಿಟಿವಿ ಕ್ಯಾಮೆರಾ ಅಳವಡಿಸುವುದು ಅನಿವಾರ್ಯ ಆಯಿತು. ಅದಕ್ಕಾಗಿ ನಗರಾಡಳಿತದ ‘ಕೃಪೆ’ಗೆ ಕಾಯದೆ ತಾವೇ ಹಣ ಹೂಡಿದರು.

ADVERTISEMENT

‘ಬಡಾವಣೆಯಲ್ಲಿ 52 ಮನೆಗಳಿವೆ. ಸಿಸಿಟಿವಿ ವಿಷಯ ಪ್ರಸ್ತಾಪಿಸಿದಾಗ ಹಣ ಕೊಡಲು ನಿವಾಸಿಗಳು ಮುಂದೆ ಬಂದರು. 30 ಮಂದಿಯಿಂದ ಸಂಗ್ರಹ ಮಾಡಿ ಸೌರ ವಿದ್ಯುತ್‌ ತಂತ್ರಜ್ಞಾನದ ಕ್ಯಾಮೆರಾ ಅಳವಡಿಸಲಾಯಿತು. ಮಾನಿಟರ್ ಮತ್ತಿತರ ಉಪಕರಣಗಳ ನಿರ್ವಹಣೆಯನ್ನು ಸಮಿತಿಯೇ ಮಾಡುತ್ತದೆ. ಎಲ್ಲ ಸದಸ್ಯರ ಮೊಬೈಲ್‌ ಫೋನ್‌ಗಳಲ್ಲಿ ದೃಶ್ಯಾವಳಿಗಳನ್ನು ನೋಡಬಹುದಾಗಿದೆ’ ಎಂದು ಸಮಿತಿ ಕಾರ್ಯದರ್ಶಿ ಸುನಿಲ್ ಕುಲಕರ್ಣಿ ‘ಪ್ರಜಾವಾಣಿ’ಗೆ ತಿಳಿಸಿದರು. 

‘ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ಕಸ ಎಸೆಯುವವರು ಸಿಕ್ಕಿದರೆ ನಯವಾಗಿ ‘ಪಾಠ’ ಮಾಡಲಾಗುತ್ತದೆ. ಮುಂದೆಂದೂ ಇಂಥ ಕೃತ್ಯ ಮಾಡಬಾರದು ಎಂಬುದು ಅವರ ಅರಿವಿಗೆ ಬರುವಂತೆ ಮಾಡಲಾಗುತ್ತದೆ’ ಎಂದು ಅವರು ಹೇಳಿದರು. 

ಹಲವು ಯಶಸ್ವಿ ಕಾರ್ಯಗಳು

ದಂಬೆಲ್ ಪ್ರದೇಶಕ್ಕೆ ಒಳಪಡುವ ಫಲ್ಗುಣಿ ನಗರದಲ್ಲಿ ಸಮಿತಿ ಹಲವು ಯಶಸ್ವಿ ಯೋಜನೆಗಳನ್ನು ಜಾರಿಗೆ ತಂದಿದೆ. ರಸ್ತೆ ಅಭಿವೃದ್ಧಿಯನ್ನು ಮಹಾನಗರ ಪಾಲಿಕೆಯಿಂದ ಮಾಡಿಸಿದ್ದು ಬಿಟ್ಟರೆ ಉಳಿದ ಹಲವು ಅಭಿವೃದ್ಧಿ ಕೆಲಸಗಳನ್ನು ಸ್ವತಃ ಮಾಡಿಕೊಂಡಿದೆ. ಇಲ್ಲಿನ ಏಳು ಅಡ್ಡರಸ್ತೆಗಳಿಗೆ ಗುರುತಿನ ಫಲಕ ಅಳವಡಿಸಲಾಗಿದೆ. ರಾತ್ರಿ ವೇಳೆ ಗೋಚರವಾಗುವಂತೆ ಅದಕ್ಕೆ ರೇಡಿಯಂನ ಹೊಳಪು ಇದೆ. 

ಸ್ವಚ್ಛ ಭಾರತ ಅಭಿಯಾನದಲ್ಲಿ ಮಕ್ಕಳನ್ನು ಒಳಗೊಳ್ಳಿಸಿ ಅರಿವು ಮೂಡಿಸಲಾಗಿತ್ತು. ಗಿಡಗಳನ್ನು ನೆಟ್ಟ ಮಕ್ಕಳು ‘ನಿನ್ನ ರಕ್ಷಣೆ ನನ್ನದು’ ಎಂಬ ಪ್ರತಿಜ್ಞೆ ತೊಟ್ಟಿದ್ದಾರೆ. ಸಸಿಗಳಿಗೆ ತಮ್ಮ ಇಷ್ಟದ ಹೆಸರು ಇರಿಸಿದ್ದಾರೆ. ಹಾಗೆ ನೆಟ್ಟ 25 ಸಸಿಗಳು ಈಗ ಮರವಾಗುವ ಹಂತದಲ್ಲಿವೆ. ಪ್ರತಿ ತಿಂಗಳ ಒಂದು ದಿನ ಎಲ್ಲರೂ ಸೇರಿ ಬಡಾವಣೆಯನ್ನೇ ಸ್ವಚ್ಛಗೊಳಿಸುತ್ತಾರೆ.      

ನಾಗರಿಕರೇ ಅಳವಡಿಸಿದ ಸಿಸಿಟಿವಿ ಕ್ಯಾಮೆರಾ
ಹೊರಗಿನ ಕೆಲವರು ಇಲ್ಲಿ ತ್ಯಾಜ್ಯ ಸುರಿಯುತ್ತಿದ್ದರು. ಒಂದು ಬಾರಿ ಒಂದು ಟನ್‌ನಷ್ಟು ತ್ಯಾಜ್ಯ ತೆಗೆದು ಸ್ವಚ್ಛಗೊಳಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಈಗ ಸಮಸ್ಯೆ ಕಡಿಮೆಯಾಗಿದೆ. ಪ್ರ
ಸನ್ನ ಭಕ್ತ ಫಲ್ಗುಣಿ ನಗರ ಅಭಿವೃದ್ಧಿ ಸಮಿತಿ ಅಧ್ಯಕ್ಷ
ಸಿಸಿಟಿವಿ ಕ್ಯಾಮೆರಾ ಅಳವಡಿಸಿದ ನಂತರ ತ್ಯಾಜ್ಯ ಸುರಿದ ಎರಡು ಪ್ರಕರಣಗಳು ದಾಖಲಾಗಿವೆ. ತ್ಯಾಜ್ಯ ಸುರಿದವರನ್ನು ಪತ್ತೆಹಚ್ಚಲಾಗುವುದು. ಸಿಕ್ಕಿದರೆ ಬುದ್ದಿಮಾತು ಹೇಳುವೆವು
ಸುನಿಲ್ ಕುಲಕರ್ಣಿ ಫಲ್ಗುಣಿ ನಗರ ಅಭಿವೃದ್ಧಿ ಸಮಿತಿ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.