ADVERTISEMENT

ರಸ್ತೆ ಗುಂಡಿ ಮುಚ್ಚಿದ ಕಾನ್‌ಸ್ಟೆಬಲ್‌

ಸಾಮಾಜಿಕ ಮಾಧ್ಯಮಗಳಲ್ಲಿ ಮೆಚ್ಚುಗೆಯ ಮಹಾಪೂರ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2019, 15:54 IST
Last Updated 2 ನವೆಂಬರ್ 2019, 15:54 IST
ಪುಟ್ಟರಾಮ
ಪುಟ್ಟರಾಮ   

ಮಂಗಳೂರು: ನಗರದ ಬಂಟ್ಸ್‌ ಹಾಸ್ಟೆಲ್‌ ವೃತ್ತದ ಸಮೀಪ ರಸ್ತೆಯ ನಡುವೆ ಬಿದ್ದಿದ್ದ ಬೃಹತ್‌ ಗುಂಡಿಯೊಂದನ್ನು ಮಂಗಳೂರು ಪೂರ್ವ (ಕದ್ರಿ) ಸಂಚಾರ ಪೊಲೀಸ್‌ ಠಾಣೆಯ ಕಾನ್‌ಸ್ಟೆಬಲ್‌ ಒಬ್ಬರು ತಾವೇ ಕಲ್ಲು, ಮಣ್ಣು ತಂದು ಮುಚ್ಚಿದ್ದಾರೆ. ಗುಂಡಿ ಮುಚ್ಚುತ್ತಿರುವ ವಿಡಿಯೊ ತುಣುಕು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಕಾನ್‌ಸ್ಟೆಬಲ್‌ ಕೆಲಸಕ್ಕೆ ಮೆಚ್ಚುಗೆಯ ಮಹಾಪೂರವೇ ಬರುತ್ತಿದೆ.

ಕದ್ರಿ ಸಂಚಾರ ಪೊಲೀಸ್‌ ಠಾಣೆಯ ಕಾನ್‌ಸ್ಟೆಬಲ್‌ ಪುಟ್ಟರಾಮ ಹೀಗೆ ಮೆಚ್ಚುಗೆಗೆ ಪಾತ್ರವಾಗಿರುವ ಪೊಲೀಸ್‌ ಸಿಬ್ಬಂದಿ. ಅವರ ಕೆಲಸವನ್ನು ಶ್ಲಾಘಿಸಿರುವ ನಗರ ಪೊಲೀಸ್‌ ಕಮಿಷನರ್‌ ಡಾ.‍ಪಿ.ಎಸ್‌.ಹರ್ಷ, ‘ಪುಟ್ಟರಾಮ ನನ್ನ ಈ ದಿನದ ಹೀರೊ’ ಎಂದು ಕೊಂಡಾಡಿದ್ದಾರೆ. ಸೋಮವಾರ ಬೆಳಿಗ್ಗೆ ತಮ್ಮ ಕಚೇರಿಗೆ ಕರೆಸಿ ಗೌರವಿಸುವುದಾಗಿಯೂ ತಿಳಿಸಿದ್ದಾರೆ.

ಬಂಟ್ಸ್‌ ಹಾಸ್ಟೆಲ್‌ ವೃತ್ತದ ಸಮೀಪ ರಸ್ತೆಯ ನಡುವೆ ಬೃಹತ್‌ ಗುಂಡಿಯೊಂದು ಬಿದ್ದಿತ್ತು. ಆಟೊ ರಿಕ್ಷಾ ಮತ್ತು ದ್ವಿಚಕ್ರ ವಾಹನ ಸವಾರರಿಗೆ ಇದರಿಂದ ತೀವ್ರ ತೊಂದರೆಯಾಗುತ್ತಿತ್ತು. ಆಗಾಗ ಇಲ್ಲಿ ದ್ವಿಚಕ್ರ ವಾಹನ ಸವಾರರು ನಿಯಂತ್ರಣ ಕಳೆದುಕೊಂಡು, ಅಪಘಾತಗಳು ಸಂಭವಿಸುತ್ತಿದ್ದವು.

ADVERTISEMENT

ಗುಂಡಿಯಿಂದ ಆಗುತ್ತಿರುವ ತೊಂದರೆ ಕುರಿತು ಮೊಬೈಲ್‌ನಲ್ಲಿ ವಿಡಿಯೊ ಚಿತ್ರೀಕರಿಸಿದ್ದ ಪುಟ್ಟರಾಮ ಅವರು ಅದನ್ನು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಕಳುಹಿಸಿದ್ದರು. ಗುಂಡಿ ಮುಚ್ಚಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು. ಆದರೆ, ಪಾಲಿಕೆ ಅಧಿಕಾರಿಗಳು ಸ್ಪಂದಿಸಿರಲಿಲ್ಲ. ಬಳಿಕ ತಾವೇ ಗುಂಡಿ ಮುಚ್ಚಲು ಮುಂದಾಗಿದ್ದರು.

ಶನಿವಾರ ಮಧ್ಯಾಹ್ನ 12.30ರ ಸುಮಾರಿಗೆ ಪುಟ್ಟರಾಮ ಅವರು ಬಂಟ್ಸ್‌ ಹಾಸ್ಟೆಲ್‌ ವೃತ್ತದಲ್ಲಿ ಕರ್ತವ್ಯದಲ್ಲಿದ್ದರು. ಆ ಸಮಯದಲ್ಲಿ ಅಲ್ಲಿಗೆ ಬಂದ ಖಾಲಿ ಪಿಕಪ್‌ ವಾಹನವೊಂದರ ಚಾಲಕನ ಮನವೊಲಿಸಿ ಕರಂಗಲ್ಪಾಡಿಯಲ್ಲಿ ಕಟ್ಟಡ ಕಾಮಗಾರಿ ನಡೆಯುತ್ತಿದ್ದ ಸ್ಥಳಕ್ಕೆ ಕರೆದುಕೊಂಡು ಹೋದರು. ಅಲ್ಲಿಂದ ಕಲ್ಲು ಮಿಶ್ರಿತ ಮಣ್ಣು ಹಾಗೂ ಜಲ್ಲಿ ಕಲ್ಲನ್ನು ತಂದರು. ನಂತರ ತಾವೇ ಗುದ್ದಲಿ ಹಿಡಿದು ಕಲ್ಲು, ಮಣ್ಣು ತುಂಬಿ ಗುಂಡಿ ಮುಚ್ಚಿದರು.

ಸ್ಥಳದಲ್ಲಿದ್ದ ಸಾರ್ವಜನಿಕರು ಪೊಲೀಸ್‌ ಕಾನ್‌ಸ್ಟೆಬಲ್‌ ರಸ್ತೆ ಗುಂಡಿ ಮುಚ್ಚುತ್ತಿರುವುದನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದರು. ಆ ವಿಡಿಯೊ ತುಣುಕು ಈಗ ಫೇಸ್‌ ಬುಕ್‌, ವಾಟ್ಸ್‌ ಆ್ಯಪ್‌ ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.