ADVERTISEMENT

ಮಂಗಳೂರು: ಮೋದಿ ರೋಡ್‌ ಶೋಗೆ ಕ್ಷಣಗಣನೆ; ನಗರದೆಲ್ಲೆಡೆ ಪೊಲೀಸ್‌ ಸರ್ಪಗಾವಲು

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2024, 11:37 IST
Last Updated 14 ಏಪ್ರಿಲ್ 2024, 11:37 IST
   

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲಿ ಇಂದು ರಾತ್ರಿ 7.45ರಿಂದ ರೋಡ್ ಶೋ ನಡೆಸುವ ಮೂಲಕ ಬಿಜೆಪಿ ಅಭ್ಯರ್ಥಿಗಳ ಮತ ಯಾಚಿಸಲಿದ್ದಾರೆ. ಪ್ರಧಾನಿ ಭಾಗವಹಿಸುವ ಈ ಕಾರ್ಯಕ್ರಮದ ಸಲುವಾಗಿ ನಗರದೆಲ್ಲೆಡೆ ಬಿಗು ಭದ್ರತೆ ಏರ್ಪಡಿಸಲಾಗಿದೆ.

ಬ್ರಹ್ಮಶ್ರೀ ನಾರಾಯಣಗುರು ವೃತ್ತರಿಂದ ಆರಂಭವಾಗಲಿರುವ ರೋಡ್‌ ಶೋ ಲಾಲ್‌ಬಾಗ್‌, ಪಿವಿಎಸ್‌ ವೃತ್ತದ ಮೂಲಕ ಸಾಗಿ ನವಭಾರತ ವೃತ್ತದಲ್ಲಿ ಸಮಾಪನಗೊಳ್ಳಲಿದೆ.

ನಾರಾಯಣ ಗುರುಗಳ ಮೂರ್ತಿಗೆ ಮಾಲಾರ್ಪಣೆ ಮಾಡುವ ಮೂಲಕ ಪ್ರಧಾನಿ ರೋಡ್‌ ಶೋ ಆರಂಭಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಮೋದಿ ಅವರಿಗೆ ಕಡೆಗೋಲು ಕೃಷ್ಣನ ಮೂರ್ತಿಯನ್ನು ಉಡುಗೊರೆ ನೀಡಲು ಇಲ್ಲಿನ ಬಿಜೆಪಿ ನಾಯಕರು ನಿರ್ಧರಿಸಿದ್ದಾರೆ.

ADVERTISEMENT

ನಾರಾಯಣಗುರು ವೃತ್ತವನ್ನು ಹೂವುಗಳಿಂದ ಸಿಂಗರಿಸಲಾಗಿದೆ. ವೃತ್ತದ ಸುತ್ತಲೂ ಉಕ್ಕಿನ ತಡೆಬೇಲಿಗಳನ್ನು ಅಳವಡಿಸಲಾಗಿದೆ. ರೋಡ್‌ ಶೋ ನಡೆಯುವ ಮಾರ್ಗದ ಇಕ್ಕೆಲಗಳಲ್ಲೂ ಉಕ್ಕಿನ ತಡೆಬೇಲಿಗಳನ್ನು ಜೋಡಿಸಲಾಗಿದೆ. ಸುಮಾರು 2000ಕ್ಕೂ ಹೆಚ್ಚು ಪೊಲೀಸ್‌ ಸಿಬ್ಬಂದಿಯನ್ನು ಈ ರೋಡ್‌ ಶೋ ಭದ್ರತೆಗಾಗಿ ನಿಯೊಜಿಸಲಾಗಿದೆ. ಉನ್ನತ ಪೊಲೀಸ್‌ ಅಧಿಕಾರಿಗಳು ಸ್ಥಳದಲ್ಲಿದ್ದು ಭದ್ರತಾ ವ್ಯವಸ್ಥೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.ನಗರದ ಪ್ರಮುಖ ವೃತ್ತಗಳ ಬಳಿಯೂ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ರೋಡ್‌ ಶೋ ಸಾಗಲಿರುವ ಮಾರ್ಗದಲ್ಲಿ ಮಧ್ಯಾಹ್ನ 2 ಗಂಟೆಯಿಂದಲೇ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ಈ ಮಾರ್ಗವನ್ನು ಸೇರಿಕೊಳ್ಳುವ ಕೆಲವು ರಸ್ತೆಗಳಲ್ಲಿ ಒಂದು ಪಾರ್ಶ್ವದಲ್ಲಿ ಮಾತ್ರ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಇದರಿಂದಾಗಿ ಕೆಲ ಸಾರ್ವಜನಿಕರು ಸುತ್ತುಬಳಸಿ ಸಾಗಬೇಕಾಗಿದೆ.

ನಗರದಲ್ಲಿ ಭಾನುವಾರ ಮಧ್ಯಾಹ್ನದಿಂದಲೇ ಸಿಟಿ ಬಸ್‌ಗಳ ಸಂಚಾರ ವಿರಳವಾಗಿದೆ. ಎಂದಿನಂತೆ ಬಸ್‌ಗಳು ಸಂಚರಿಸದ ಕಾರಣ ಕೆಲವು ಪ್ರಯಾಣಿಕರ ತಂಗುದಾಣಗಳಲ್ಲಿ ಪ್ರಯಾಣಿಕರು ಬಸ್‌ಗಾಗಿ ಕಾಯುತ್ತಾ ನಿಂತಿರುವುದು ಕಂಡು ಬಂತು. ಉಡುಪಿ ಕಡೆಗೆ ಹೋಗುವ ಬಸ್‌ಗಳು ಪಿವಿಎಸ್‌ ಲಾಲ್‌ಬಾಗ್‌, ನಾರಾಯಣಗುರು ವೃತ್ತ ಮಾರ್ಗವಾಗಿ ಸಾಗುತ್ತಿದ್ದವು. ಇಂದು ಬಂಟ್ಸ್‌ಹಾಸ್ಟೆಲ್‌ನನಿಂದ ಕದ್ರಿ ಕಂಬಳ ಮಾರ್ಗ ಹಾಗೂ ಕೆಪಿಟಿ ವೃತ್ತದ ಮೂಲಕ ಸಾಗಿದವು.

ರೋಡ್‌ ಶೋ ರಾತ್ರಿ 7.45ರ ಬಲಿಕ ಆರಂಭವಾಗಲಿದೆಯಾದರೂ ಮೋದಿ ಅವರ ಅವರ ಅಭಿಮಾನಿಗಳು ಕಾರ್ಯಕ್ರಮ ಆರಂಭವಾಗಲಿರುವ ನಾರಾಯಣಗುರು ವೃತ್ತದತ್ತ ಸಂಜೆ 4.30ರ ವೇಳೆಗೇ ಹೆಜ್ಜೆ ಹಾಕುತ್ತಿದ್ದುದು ಕಂಡು ಬಂತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.