ADVERTISEMENT

ವಿನಾಶದ ಅಂಚಿನಲ್ಲಿ ಕಪ್ಪೆ ಸಂತತಿ: ಡಾ. ಹರೀಶ್‌ ಜೋಶಿ

ವಿಶೇಷ ಅಂಚೆ ಲಕೋಟೆಗಳ ಬಿಡುಗಡೆ ಸಮಾರಂಭ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2019, 15:16 IST
Last Updated 13 ಅಕ್ಟೋಬರ್ 2019, 15:16 IST
ಮಂಗಳೂರಿನ ಟಿಎಂಎ ಪೈ ಸಭಾಂಗಣದಲ್ಲಿ ‘ವಿಶೇಷ ಅಂಚೆ ಲಕೋಟೆಗಳ ಬಿಡುಗಡೆ’ ಸಮಾರಂಭ ಭಾನುವಾರ ನಡೆಯಿತು.
ಮಂಗಳೂರಿನ ಟಿಎಂಎ ಪೈ ಸಭಾಂಗಣದಲ್ಲಿ ‘ವಿಶೇಷ ಅಂಚೆ ಲಕೋಟೆಗಳ ಬಿಡುಗಡೆ’ ಸಮಾರಂಭ ಭಾನುವಾರ ನಡೆಯಿತು.   

ಮಂಗಳೂರು: ಕಪ್ಪೆ ಜೈವಿಕ ದಿಕ್ಸೂಚಿ, ಹವಾಮಾನ ವೈಪರೀತ್ಯದಲ್ಲಿ ಆಗುವ ಬದಲಾವಣೆಗಳು ಮೊದಲಿಗೆ ಗೊತ್ತಾಗುವುದು ಕಪ್ಪೆಗಳಿಗೆ ಮಾತ್ರ. ಪ್ರಕೃತಿಗೆ ಪೂರಕವಾದ ಕಪ್ಪೆಗಳ ಸಂತತಿ ಇವತ್ತು ವಿನಾಶದ ಅಂಚಿನಲ್ಲಿದೆ ಎಂದು ಪ್ರಾಣಿಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಹರೀಶ್‌ ಜೋಶಿ ಅವರು ಕಳವಳ ವ್ಯಕ್ತಪಡಿಸಿದರು.

ಮಂಗಳೂರಿನ ಟಿಎಂಎ ಪೈ ಸಭಾಂಗಣದಲ್ಲಿ ಭಾನುವಾರ ಕರ್ನಾಟಕ ಅಂಚೆ ವೃತ್ತವು ಹಮ್ಮಿಕೊಂಡಿದ್ದ ‘ಕರ್ನಾಪೆಕ್ಸ್‌–2019’ 12ನೇ ರಾಜ್ಯ ಮಟ್ಟದ ಅಂಚೆ ಚೀಟಿ ಪ್ರದರ್ಶನದಲ್ಲಿ ಪರಿಸರ ದಿನ ಅಂಗವಾಗಿ ನಡೆದ ‘ವಿಶೇಷ ಅಂಚೆ ಲಕೋಟೆಗಳ ಬಿಡುಗಡೆ’ ಸಮಾರಂಭದಲ್ಲಿ ಅವರು ಮಾತನಾಡಿದರು.

ಪ್ರಕೃತಿಗೆ ಪೂರಕವಾದ ಕಪ್ಪೆಯ ಹೆಸರಿನಲ್ಲಿ ‘ಯುಫ್ಲಿಕ್ಟಿಸ್‌ ಅಲೋಸಿ’ ಎಂಬ ಅಂಚೆ ಲಕೋಟೆ ಬಿಡುಗಡೆ ಮಾಡಿದ್ದು ಇಲಾಖೆಯ ಶ್ಲಾಘನೀಯ ಕಾರ್ಯ.ಕಪ್ಪೆಗಳ ಬಗ್ಗೆ ಈಗಾಗಲೇ ಹಲವಾರು ಸಂಶೋಧನೆ ಮಾಡಲಾಗಿದೆ. ಈ ಬಾರಿ ಅಂಚೆ ಇಲಾಖೆ ಲಕೋಟೆ ಬಿಡುಗಡೆ ಮಾಡುವ ಮೂಲಕ ಮಹತ್ವದ ಹೆಜ್ಜೆ ಇಟ್ಟಿರುವುದು ಉತ್ತಮ ಬೆಳವಣಿಗೆ ಎಂದು ಅವರು ಹೇಳಿದರು.

ADVERTISEMENT

ಕಪ್ಪೆಗಳ ಮೇಲಿನ ಸಂಶೋಧನೆಗಳು ಬಹಳಷ್ಟು ನಡೆಯುತ್ತಿವೆ. ಹಲವಾರು ರೀತಿಯ ಕಪ್ಪೆಯ ಪ್ರಭೇದಗಳಿವೆ. ದೇಶದಲ್ಲಿ ಕಪ್ಪೆಗಳ ವರ್ಣತಂತುಗಳ ಮೇಲೆ ಹಲವಾರು ಸಂಶೋಧನೆ ನಡೆದಿವೆ. ಕಪ್ಪೆಗಳ ಉಳಿವಿಗಾಗಿ ಜಾಗೃತಿ ಉಂಟು ಮಾಡಬೇಕಾದ ಅಗತ್ಯ ಇದೆ. ಕಪ್ಪೆಗಳು ಪ್ರಕೃತಿಗೆ ಪೂರಕವಾದ ವರ್ಣ ತಂತುಗಳನ್ನು ಬಿಡುಗಡೆ ಮಾಡುವ ಸಾಮರ್ಥ್ಯ ಹೊಂದಿರುವ ಜೀವಿ ಎಂದು ಅವರು ಹೇಳಿದರು.

ಭೂಕಂಪ ಆಗುವ ಮುನ್ಸೂಚನೆಕಪ್ಪೆಗಳಿಗೆ ಮೊದಲು ಗೊತ್ತಾಗುತ್ತದೆ. ಕಪ್ಪೆಗಳ ಸಂತತಿ ಹೆಚ್ಚು ವೃದ್ಧಿ ಆದರೆ ಡೆಂಗಿ ಕಾಯಿಲೆ ಕೂಡಾ ನಿರ್ಮೂಲನೆ ಸಾಧ್ಯ. ವಿದೇಶಗಳಲ್ಲಿ ಕಪ್ಪೆಗಳು ರಸ್ತೆ ದಾಟುವಾಗ ಸಿಗ್ನಲ್‌ಗಳನ್ನು ಹಾಕಲಾಗುತ್ತದೆ. ಇಂತಹ ವ್ಯವಸ್ಥೆ ನಮ್ಮಲ್ಲಿಯೂ ಜಾರಿಗೆ ಬರಬೇಕು. ಗದ್ದೆಗಳಿಗೆ ಕಪ್ಪೆಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದರೆ ರೈತರ ಬಾಳು ಹಸನವಾಗುತ್ತದೆ. ಗದ್ದೆಗಳಲ್ಲಿ ಕಪ್ಪೆಗಳ ಸದ್ದು ಹೆಚ್ಚಾಗಿ ಕೇಳುವಂತೆ ಆಗಬೇಕು ಎಂದು ಅವರು ಹೇಳಿದರು.

ಅವಿಸ್ಮರಣೀಯ: ಪೋಸ್ಟ್‌ ಮಾಸ್ಟರ್‌ ಜನರಲ್‌ ಅರವಿಂದ ವರ್ಮಾ ಅವರು ಮಾತನಾಡಿ, ಕರಾವಳಿ ಜಿಲ್ಲೆಯಲ್ಲಿ ಪ್ರವಾಸೋದ್ಯಮ ತಾಣಗಳು ಸದಾ ಘಮಲಿನಿಂದ ಕೂಡಿರುತ್ತವೆ ಎನ್ನುವುದಕ್ಕೆ ಈ ಲಕೋಟೆ ಬಿಡುಗಡೆ ಸಮಾರಂಭ ಸಾಕ್ಷಿ ಆಗಿದೆ. ಇಂತಹ ವಿಶಿಷ್ಟ ಪರಂಪರೆ ಇರುವ ಸ್ಥಳಗಳನ್ನು ಆಸ್ವಾದಿಸುವ ಭಾಗ್ಯ ಸಿಕ್ಕಿದ್ದು ನಿಜಕ್ಕೂ ಅವಿಸ್ಮರಣೀಯ. ಪರಿಸರದ ಕಾಳಜಿ ಇಟ್ಟುಕೊಂಡು ಅಂಚೆ ಇಲಾಖೆ ಮೂರು ವಿಶೇಷ ಅಂಚೆ ಲಕೋಟೆ ಬಿಡುಗಡೆ ಮಾಡಿದೆ ಎಂದು ಅವರು ಹೇಳಿದರು.

ಹಿರಿಯ ಅಂಚೆ ಚೀಟಿ ಸಂಗ್ರಾಹಕರಾದ ಎಂ.ಕೆ. ಕೃಷ್ಣಯ್ಯ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ, ಅಂಚೆ ಇಲಾಖೆ ಪ್ರಕೃತಿ ಕಾಳಜಿ ಇಟ್ಟುಕೊಂಡು ಮೂರು ವಿಶೇಷ ಅಂಚೆ ಲಕೋಟೆಗಳನ್ನು ಬಿಡುಗಡೆ ಮಾಡಿದೆ. ಇಂತಹ ವಿಶೇಷ ಅಂಚೆ ಲಕೋಟೆಗಳನ್ನು ಮತ್ತಷ್ಟು ಬಿಡುಗಡೆ ಮಾಡುವಂತೆ ಆಗಬೇಕು. ಶಾಶ್ವತ ಚಿತ್ರ ಸಹಿತ ಅಂಚೆ ಮೊಹರು ಬಿಡುಗಡೆ ಮಾಡಿದ್ದು ಖುಷಿಯ ವಿಚಾರ. ಎಲ್ಲ ಅಂಚೆ ಕಚೇರಿಗಳಲ್ಲಿ ಇಂತಹ ಮೊಹರು ಬಳಕೆ ಆಗಬೇಕು ಎಂದು ಅವರು ಹೇಳಿದರು.

ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌ ಮಾತನಾಡಿದರು. ಅಂಚೆ ಚೀಟಿ ಸಂಗ್ರಾಹಕರಾದ ಡಾ. ಕೆ.ಎಸ್‌. ಪ್ರಭಾಕರ್‌, ಎಸ್‌. ನಾರಾಯಣ ರಾವ್‌, ಎಂ.ಆರ್‌. ಪಾವುಂಜೆ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.