ADVERTISEMENT

ಮಂಗಳೂರು ವಿವಿ | ಸೆ.1ರಿಂದ ಸ್ನಾತಕೋತ್ತರ ಕೋರ್ಸ್‌ಗಳ ತರಗತಿಗಳು ಪ್ರಾರಂಭ

ಸಂಧ್ಯಾ ಹೆಗಡೆ
Published 12 ಸೆಪ್ಟೆಂಬರ್ 2025, 6:22 IST
Last Updated 12 ಸೆಪ್ಟೆಂಬರ್ 2025, 6:22 IST
<div class="paragraphs"><p>ಮಂಗಳೂರು ವಿವಿ</p></div>

ಮಂಗಳೂರು ವಿವಿ

   

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ 2025–26ನೇ ಸಾಲಿನ ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶದ ಅವಧಿ ಕೊನೆಗೊಂಡಿದ್ದು, ವಿದ್ಯಾರ್ಥಿಗಳ ದಾಖಲಾತಿ ಕಳೆದ ವರ್ಷಕ್ಕಿಂತ ಇನ್ನಷ್ಟು ಕುಸಿತಗೊಂಡಿದೆ.

ಕಳೆದ ವರ್ಷ ದಾಖಲಾತಿ ಆಗದ ಅನೇಕ ಕೋರ್ಸ್‌ಗಳಿಗೆ ಈ ವರ್ಷವೂ ಹೊಸ ದಾಖಲಾತಿ ಆಗಿಲ್ಲ. ಇವು ಸೇರಿದಂತೆ ಒಂಬತ್ತಕ್ಕೂ ಹೆಚ್ಚು ಕೋರ್ಸ್‌ಗಳಿಗೆ ವಿದ್ಯಾರ್ಥಿಗಳ ಸಂಖ್ಯೆ ಇಲ್ಲವಾಗಿದೆ. ನಾಲ್ಕೈದು ಕೋರ್ಸ್‌ಗಳಿಗೆ ವಿವಿ ನಿಗದಿಪಡಿಸಿರುವ ವಿದ್ಯಾರ್ಥಿಗಳ ಸಂಖ್ಯೆಗಿಂತ ಕಡಿಮೆ ಜನರು ನೋಂದಾಯಿಸಿದ್ದಾರೆ. ಪ್ರತಿ ಕೋರ್ಸ್‌ನಲ್ಲಿ ವಿದ್ಯಾರ್ಥಿಗಳ ಸಂಖ್ಯೆ 15ಕ್ಕಿಂತ ಕಡಿಮೆ ಇದ್ದರೆ, ಅಂತಹ ವಿಭಾಗವನ್ನು ತಾತ್ಕಾಲಿಕವಾಗಿ ಬಂದ್ ಮಾಡಿ, ವಿದ್ಯಾರ್ಥಿಗಳ ಪ್ರವೇಶ ಹೆಚ್ಚಿದಾಗ ಪುನಃ ತೆರೆಯುವ ನಿರ್ಧಾರವನ್ನು ವಿವಿ ಕಳೆದ ವರ್ಷದಿಂದ ಅನುಷ್ಠಾನಗೊಳಿಸಿದೆ.

ADVERTISEMENT

ಪರಿಸರ ವಿಜ್ಞಾನ, ಕಡಲ ವಿಜ್ಞಾನ, ಬಯೊಸೈನ್ಸ್, ಎಲೆಕ್ಟ್ರಾನಿಕ್ಸ್, ಮಟೀರಿಯಲ್ ಸೈನ್ಸ್, ಸಂಖ್ಯಾಶಾಸ್ತ್ರ, ಜಿಯೊ ಇನ್ಫೊಮೆಟಿಕ್ಸ್, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ, ಕೆಲವು ಭಾಷಾ ಸ್ನಾತಕೋತ್ತರ ಕೋರ್ಸ್‌ಗಳು, ಸೈಬರ್ ಸೆಕ್ಯುರಿಟಿ ಮತ್ತು ಕೆಲವು ಉಪ ಕೋರ್ಸ್‌ಗಳಿಗೆ ವಿದ್ಯಾರ್ಥಿಗಳ ದಾಖಲಾತಿ ಆಗಿಲ್ಲ. ವಿವಿಯಲ್ಲಿ ಅರ್ಜಿ ವಿತರಣೆ ಆರಂಭವಾದ ಬಳಿಕ ಹಲವರು ಅರ್ಜಿ ಪಡೆದುಕೊಂಡು ಹೋಗಿದ್ದರಿಂದ, ಈ ಬಾರಿ ಹೊಸ ಭರವಸೆ ಮೂಡಿತ್ತು ಎಂದು ವಿವಿ ಮೂಲಗಳು ತಿಳಿಸಿವೆ.

ಮಂಗಳೂರು ವಿವಿಯಲ್ಲಿ 28 ವಿಭಾಗಗಳು ಇದ್ದು, ಒಟ್ಟು 42 ವಿವಿಧ ಕೋರ್ಸ್‌ಗಳು, ಎರಡು ಡಿಪ್ಲೊಮಾ ಕೋರ್ಸ್‌ಗಳು ಇವೆ. ಎಂ.ಕಾಂ.ಗೆ ವಿವಿ ಕ್ಯಾಂಪಸ್ ಹಾಗೂ ಹಂಪನಕಟ್ಟೆ ವಿವಿ ಕಾಲೇಜು ಈ ಎರಡೂ ಕಡೆಗಳಲ್ಲಿ ಗರಿಷ್ಠ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಇಂಗ್ಲಿಷ್, ಭೌತ ವಿಜ್ಞಾನ, ಇಂಡಸ್ಟ್ರಿಯಲ್ ಕೆಮಿಸ್ಟ್ರಿ, ಅರ್ಥಶಾಸ್ತ್ರ, ಕಂಪ್ಯೂಟರ್ ಸೈನ್ಸ್, ಜೀವ ವಿಜ್ಞಾನ ಕೋರ್ಸ್‌ಗಳಿಗೆ ಹೆಚ್ಚು ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಕಳೆದ ವರ್ಷ 700ಕ್ಕೂ ಅಧಿಕ ವಿದ್ಯಾರ್ಥಿಗಳು ವಿವಿಧ ಕೋರ್ಸ್‌ಗಳಿಗೆ ಪ್ರವೇಶ ಪಡೆದಿದ್ದರೆ, ಈ ಬಾರಿ ಈ ಸಂಖ್ಯೆ 600 ದಾಟಿಲ್ಲ ಎಂದು ಪ್ರಾಧ್ಯಾಪಕರೊಬ್ಬರು ತಿಳಿಸಿದರು.

ಅರ್ಜಿ ಸಲ್ಲಿಕೆಗೆ ವಿವಿ ಎರಡು ಬಾರಿ ದಿನಾಂಕ ವಿಸ್ತರಣೆ ಮಾಡಿದ್ದು, ವಿದ್ಯಾರ್ಥಿಗಳ ಪ್ರವೇಶಕ್ಕೆ ಆಗಸ್ಟ್ 30 ಕೊನೆಯ ದಿನವಾಗಿತ್ತು. ಸೆ.1ರಿಂದ ಸ್ನಾತಕೋತ್ತರ ಕೋರ್ಸ್‌ಗಳ ತರಗತಿಗಳು ಪ್ರಾರಂಭವಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.