ADVERTISEMENT

ಶುಲ್ಕ ಪಾವತಿಸಿಯೂ ಹೆದ್ದಾರಿಯಲ್ಲಿ ಗುಂಡಿಗೆ ಬೀಳುವ ಸ್ಥಿತಿ

ಟೋಲ್‌ಗೇಟ್‌ ವಿರೋಧ ಹೋರಾಟ ಸಮಿತಿ ಟೀಕೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2022, 14:19 IST
Last Updated 3 ಜುಲೈ 2022, 14:19 IST
ನವಮಂಗಳೂರು ಬಂದರು– ಸುರತ್ಕಲ್‌ ನಡುವೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಾಣವಾಗಿರುವ ಗುಂಡಿ
ನವಮಂಗಳೂರು ಬಂದರು– ಸುರತ್ಕಲ್‌ ನಡುವೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಾಣವಾಗಿರುವ ಗುಂಡಿ   

ಮಂಗಳೂರು: ‘ಸುರತ್ಕಲ್ ಹಾಗೂ ನವಮಂಗಳೂರು ಬಂದರು ನಡುವೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಒಂದು ವಾರದಿಂದ ಈಚೆಗೆ ಭಾರಿ ಗಾತ್ರದ ಗುಂಡಿಗಳು ನಿರ್ಮಾಣಗೊಂಡಿವೆ. ಆದರೂ, ಗುಂಡಿಗಳನ್ನು ಮುಚ್ಚುವುದಕ್ಕೆ ಕ್ರಮ ಕೈಗೊಂಡಿಲ್ಲ’ ಎಂದು ಸುರತ್ಕಲ್‌ ಟೋಲ್‌ಗೇಟ್‌ ವಿರೋಧಿ ಹೋರಾಟ ಸಮಿತಿಯ ಅಧ್ಯಕ್ಷ ಮುನೀರ್‌ ಕಾಟಿಪಳ್ಳ ಆರೋಪಿಸಿದ್ದಾರೆ.

‘ವಾಹನಗಳಿಂದ ಶುಲ್ಕ ಸಂಗ್ರಹಿಸುವ ರಸ್ತೆಗಳಲ್ಲಿ ಗುಂಡಿಗಳು ನಿರ್ಮಾಣವಾದರೆ 48ಗಂಟೆಗಳ ಒಳಗೆ ಅದನ್ನು ಮುಚ್ಚಬೇಕು. ರಸ್ತೆ ಸಮರ್ಪಕ ನಿರ್ವಹಣೆ ಮಾಡದಿದ್ದರೆ ಶುಲ್ಕ ಸಂಗ್ರಹ ಮಾಡುವಂತಿಲ್ಲ ಎಂದು ನಿಯಮ ಹೇಳುತ್ತದೆ. ಆದರೆ ಸುರತ್ಕಲ್ ಟೋಲ್ ಸಂಗ್ರಹವೇ ಅಕ್ರಮ. ಶುಲ್ಕ ತೆತ್ತು ಕೂಡ ಗುಂಡಿಮಯ ರಸ್ತೆಯಲ್ಲಿ ಸಂಚರಿಸುವ ದಯನೀಯ ಸ್ಥಿತಿ ಈ ಹೆದ್ದಾರಿಯನ್ನು ಬಳಸುವ ಪ್ರಯಾಣಿಕರದ್ದು’ ಎಂದು ಅವರು ಟೀಕಿಸಿದ್ದಾರೆ

‘ಎನ್ಎಂಪಿಎ– ಸುರತ್ಕಲ್‌ ನಡುವಿನ ಹೆದ್ದಾರಿಯಲ್ಲಿ ಚಲಾಯಿಸುವಾಗ ದಿಢೀರ್ ಆಗಿ ಎದುರಾಗುವ ಈ ಗುಂಡಿಗಳುವಾಹನಗಳ ಚಾಲಕರನ್ನು ಗಲಿಬಿಲಿಗೊಳಿಸುತ್ತಿವೆ. ಮಳೆ ಸುರಿಯುವಾಗ ಹೊಂಡಗಳು ಕಣ್ಣಿಗೆ ಬೀಳದೆ ವಾಹನಗಳು ಅಪಘಾತಕ್ಕೊಳಗಾಗುತ್ತಿವೆ. ದ್ವಿಚಕ್ರ ಸವಾರರಂತು ಗುಂಡಿ ತಪ್ಪಿಸಲಾಗದೆ ಪಡಿಪಾಟಲು ಎದುರಿಸುವುದು ಸಾಮಾನ್ಯ ಎಂಬಂತಾಗಿದೆ. ಈ ಹೆದ್ದಾರಿಯು ವಾಹನ ಸವಾರರ ಪಾಲಿಗೆ ಅತ್ಯಂತ ಅಪಾಯಕಾರಿಯಾಗಿ ಪರಿಣಮಿಸಿದೆ’ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಸುರತ್ಕಲ್ ಮತ್ತು ಬಿ.ಸಿ.ರೋಡ್ ಟೋಲ್ ರಸ್ತೆ ನಿರ್ವಹಣೆಗೆ ವರ್ಷಕ್ಕೆ ₹ 3 ಕೋಟಿ ಗುತ್ತಿಗೆಯನ್ನು ಖಾಸಗಿ ಏಜನ್ಸಿಗೆ ನೀಡಲಾಗಿದೆ. ರಸ್ತೆ ಗುಂಡಿ, ದಾರಿ ದೀಪ, ಹುಲ್ಲು ಕತ್ತರಿಸುವ ಜವಾಬ್ದಾರಿಯನ್ನೂ ಈ ಏಜೆನ್ಸಿಗೆ ವಹಿಸಲಾಗಿದೆ. ಆದರೆ ಏಜನ್ಸಿಯವರು ಮಳೆಗಾಲಕ್ಕೆ ಮುಂಚಿತವಾಗಿ ಯಾವುದೇ ನಿರ್ವಹಣೆ ಕಾರ್ಯ ನಡೆಸಿಲ್ಲ. ಹಾಗಾಗಿ ಈಗ ದುರವಸ್ಥೆಗೆ ಎದುರಾಗಿದೆ. ಅಕ್ರಮವಾಗಿ ಕಾರ್ಯ ನಿರ್ವಹಿಸುವ ಟೋಲ್‌ಗೇಟ್‌ ಕುರಿತಾಗಲಿ, ಹೆದ್ದಾರಿಯಲ್ಲಿ ಗುಂಡಿಗಳು ನಿರ್ಮಾಣವಾಗಿರುವ ಕುರಿತಾಗಲಿಜಿಲ್ಲೆಯ ಸಂಸದ ಹಾಗೂ ಶಾಸಕರು ತಲೆ ಕೆಡಿಸಿಕೊಳ್ಳದೇ ಇರುವುದು ದುರದೃಷ್ಟಕರ’ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.