ADVERTISEMENT

‘ಸಮಾಜಸೇವೆಯೇ ಪ್ರೊ. ಹಿಲ್ಡಾ ಉಸಿರು’

ಪ್ರಜ್ಞಾ ಸಲಹಾ ಕೇಂದ್ರದ ಸ್ವಾಧಾರ ಗೃಹ ಕಟ್ಟಡಕ್ಕೆ ಶಿಲಾನ್ಯಾಸ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2020, 10:53 IST
Last Updated 13 ಮಾರ್ಚ್ 2020, 10:53 IST
ಪ್ರಜ್ಞಾ ಸಲಹಾ ಕೇಂದ್ರದ ಸ್ವಾಧಾರಗೃಹದ ನಿರ್ಮಾಣಕ್ಕೆ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌ ಶಿಲಾನ್ಯಾಸ ನೆರವೇರಿಸಿದರು.
ಪ್ರಜ್ಞಾ ಸಲಹಾ ಕೇಂದ್ರದ ಸ್ವಾಧಾರಗೃಹದ ನಿರ್ಮಾಣಕ್ಕೆ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌ ಶಿಲಾನ್ಯಾಸ ನೆರವೇರಿಸಿದರು.   

ಮಂಗಳೂರು: ಪ್ರಜ್ಞಾ ಸಲಹಾ ಕೇಂದ್ರದ ಸ್ವಾಧಾರ ಗೃಹದ (ನೊಂದ ಮಹಿಳೆಯರ ಪುನರ್ವಸತಿ ಕೇಂದ್ರ) ನೂತನ ಕಟ್ಟಡಕ್ಕೆ ಶಿಲಾನ್ಯಾಸವನ್ನು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಮಾಜ ಸೇವೆಯೇ ಪ್ರೊ.ಹಿಲ್ಡಾ ರಾಯಪ್ಪನ್‌ ಅವರಿಗೆ ಜೀವನದ ಉಸಿರು. ಯಾವುದೇ ಸ್ವಸ್ಥ ಸಮಾಜದಲ್ಲಿ ಸ್ವಾಧಾರ ಗೃಹಗಳು ಇರಬಾರದು ಎಂದು ಬಯಸಿದರೂ, ವರ್ತಮಾನದ ಸ್ಥಿತಿಯಲ್ಲಿ ನೊಂದ ಮಹಿಳೆಯರಿಗೆ ಇಂತಹ ಪುನರ್ವಸತಿ ಕೇಂದ್ರಗಳ ಅಗತ್ಯವಿದೆ. ದಕ್ಷಿಣ ಕನ್ನಡ ಜಿಲ್ಲೆಗೆ ಮಾದರಿಯಾಗುವಂತಹ ಸುಸಜ್ಜಿತ ಸ್ವಾಧಾರ ಗೃಹದ ಕನಸು ಸಾಕಾರವಾಗುವುದಕ್ಕೆ ಪ್ರಜ್ಞಾ ಸಂಸ್ಥೆಗೆ, ಇನ್‍ಫೋಸಿಸ್, ಎಂಆರ್‌ಪಿಎಲ್, ಸ್ಥಳೀಯ ನಾಗರಿಕರು ಹಾಗೂ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕರಿಸುತ್ತಿರುವ ಎಲ್ಲರಿಗೂ ಹೃದಯ ಪೂರ್ವಕ ವಂದನೆಗಳು ಎಂದು ಹೇಳಿದರು.

ಎಂಆರ್‌ಪಿಎಲ್‌ನ ಜಿಜಿಎಂ ಪ್ರಸಾದ್ ಬಿ.ಎಚ್.ವಿ. ಮಾತನಾಡಿ, ನೂತನ ಕಟ್ಟಡ ನಿರ್ಮಾಣದ ಎಲ್ಲ ಹಂತದಲ್ಲಿ ಎಂಆರ್‌ಪಿಎಲ್ ಜತೆಗೆ ಇರುತ್ತದೆ ಎಂದು ಭರವಸೆ ನೀಡಿದರು.

ADVERTISEMENT

ಇಸ್ಫೊಸಿಸ್ ಮಂಗಳೂರು ಡಿಸಿ ವಾಸುದೇವ ಕಾಮತ್‌ ಮಾತನಾಡಿ, ‘ಪ್ರೊ.ಹಿಲ್ಡಾ ರಾಯಪ್ಪನ್ ಅವರು ನೊಂದ ಮಹಿಳೆಯರಿಗೆ ಮತ್ತು ಮಕ್ಕಳಿಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸುದೀರ್ಘ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಜತೆಗೆ ಇರುವುದು ಇನ್ಫೊಸಿಸ್‌ ಹಾಗೂ ನಾಗರಿಕರಾದ ನಮ್ಮೆಲ್ಲರ ಜವಾಬ್ದಾರಿ’ ಎಂದು ಹೇಳಿದರು.

ಪ್ರಜ್ಞಾ ಸಲಹಾ ಕೇಂದ್ರದ ಸಂಸ್ಥಾಪಕಿ, ನಿರ್ದೇಶಕಿ ಪ್ರೊ.ಹಿಲ್ಡಾ ರಾಯಪ್ಪನ್‌ ಮಾತನಾಡಿ, ‘ಸ್ವಾಧಾರಗೃಹ ನಮ್ಮ 18 ವರ್ಷಗಳ ಕನಸು. ಇದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌ ಅವರಿಂದ ಶಿಲಾನ್ಯಾಸಗೊಳ್ಳುವ ಮೂಲಕ ನನಸಾಗುತ್ತಿದೆ’ ಎಂದರು.
ಎಂಆರ್‌ಪಿಎಲ್‌ನ ಎನ್.ಸುಬ್ರಾಯ ಭಟ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಉಸ್ಮಾನ್ ಎ., ಇನ್ಫೊಸಿಸ್‌ನ ಫೆಸಿಲಿಟೆಟರ್ ಉಸ್ತುವಾರಿ ಧೀರಜ್ ಹೆಜಮಾಡಿ, ವಾಸ್ತುಶಾಸ್ತ್ರಜ್ಞ ಕ್ರಿಸ್ಟೋಫರ್‌ ನೊರೊನ್ಹ, ಮುರಳಿಕೃಷ್ಣ, ಶೀನ ಶೆಟ್ಟಿ, ಕುರ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೈಲಜಾ, ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಗಟ್ಟಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ್ ಕರ್ಕೇರ, ಸದಸ್ಯ ನವೀನ್ ಬಲಪಾಡಿ, ಪಿಡಿಒ ಕೇಶವ ಇದ್ದರು. ಧನಲಕ್ಷ್ಮಿ ಗಟ್ಟಿ ನಿರೂಪಿಸಿದರು. ವಿಲಿಯಂ ಸ್ಯಾಮುವೆಲ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.