ADVERTISEMENT

ನೆಲ್ಯಾಡಿ | ಜ್ವರದಿಂದ ಬಳಲುತ್ತಿದ್ದ ಗರ್ಭಿಣಿ ‘ಆಸ್ಪತ್ರೆ’ ಅಲೆದಾಟ

ದಿನಪೂರ್ತಿ ಕಾದರೂ ಚಿಕಿತ್ಸೆ ಸಿಗದೆ ಮನೆಗೆ ವಾಪಸ್

​ಪ್ರಜಾವಾಣಿ ವಾರ್ತೆ
Published 19 ಜುಲೈ 2020, 16:39 IST
Last Updated 19 ಜುಲೈ 2020, 16:39 IST

ನೆಲ್ಯಾಡಿ (ಉಪ್ಪಿನಂಗಡಿ): ಸಣ್ಣ ಜ್ವರದಿಂದ ಬಳಲಿದ್ದ ನೆಲ್ಯಾಡಿಯ ತುಂಬು ಗರ್ಭಿಣಿಯೊಬ್ಬರು ಚಿಕಿತ್ಸೆಗಾಗಿ ಪುತ್ತೂರು, ಮಂಗಳೂರಿನ ಆಸ್ಪತ್ರೆಗಳಿಗೆ ದಿನಪೂರ್ತಿ ಅಲೆದಾಟ ನಡೆಸಿ, ಚಿಕಿತ್ಸೆ ಸಿಗದೇ ಮನೆಗೆ ಹಿಂತಿರುಗಿದ ಘಟನೆ ಶನಿವಾರ ನಡೆದಿದೆ.

ಕೋವಿಡ್‌–19ನಂತಹ ಸಂಕಷ್ಟದ ಕಾಲದಲ್ಲಿ ಸೂಕ್ತ ಚಿಕಿತ್ಸೆ ಸಿಗದೇ ಜನರು ಸಂಕಷ್ಟಕ್ಕೆ ಒಳಗಾಗುತ್ತಿರುವುದು ಮತ್ತು ಆರೋಗ್ಯ ಇಲಾಖೆಯವರು ಪ್ರತಿಯೊಂದು ಸಣ್ಣ ಜ್ವರವನ್ನೂ ‘ಕೊರೊನಾ’ ಕಣ್ಣಿನಿಂದಲೇ ನೋಡಿ ಚಿಕಿತ್ಸೆ ನೀಡದೆ, ತಾವೇ ದಿಗಿಲುಗೊಂಡು ರೋಗಿಗಳನ್ನು ಅಲ್ಲಿಂದಿಲ್ಲಿಗೆ ಅಲೆದಾಡಿಸುತ್ತಿದ್ದಾರೆ ಎಂಬ ಆರೋಪಕ್ಕೆ ಇದೊಂದು ತಾಜಾ ನಿದರ್ಶನವಾಗಿದೆ.

ನೆಲ್ಯಾಡಿ ಗ್ರಾಮದ ದರ್ಖಾಸು ನಿವಾಸಿ ಆನಂದ ಅವರ ಪತ್ನಿ ಗೀತಾ 9 ತಿಂಗಳ ಗರ್ಭಿಣಿಯಾಗಿದ್ದು, ತುಸು ಜ್ವರ ಕಾಣಿಸಿಕೊಂಡ ಕಾರಣ ಅವರು ತನ್ನ ಅಕ್ಕನೊಂದಿಗೆ ಶನಿವಾರ ಬೆಳಿಗ್ಗೆ ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಿದ್ದರು. ಅಲ್ಲಿ ವೈದ್ಯರು ಇರಲಿಲ್ಲ. ಆಸ್ಪತ್ರೆ ಸಿಬ್ಬಂದಿ ಪ್ರಾಥಮಿಕ ಚಿಕಿತ್ಸೆ ನೀಡಿ, ಅವರಿಗೆ ಪುತ್ತೂರಿನ ಆಸ್ಪತ್ರೆಗೆ ತೆರಳುವಂತೆ ಸೂಚಿಸಿದ್ದಾರೆ.

ADVERTISEMENT

ಬಳಿಕ ಗೀತಾ ಮತ್ತು ಅವರ ಅಕ್ಕ 108 ವಾಹನದಲ್ಲಿ ಪುತ್ತೂರಿಗೆ ಹೋಗಿದ್ದು, ಅಲ್ಲಿಯೂ ವೈದ್ಯರು ಇಲ್ಲದ ಕಾರಣ ಚಿಕಿತ್ಸೆ ಸಿಕ್ಕಿಲ್ಲ. ಅಲ್ಲಿನ ಸಿಬ್ಬಂದಿ ಮಂಗಳೂರಿನ ಲೇಡಿಗೋಶನ್ ಆಸ್ಪತ್ರೆಗೆ ಹೋಗುವಂತೆ ತಿಳಿಸಿದ್ದಾರೆ. ಗೀತಾ ಅದೇ ಆಂಬ್ಯಲೆನ್ಸ್‌ನಲ್ಲಿ ಲೇಡಿಗೋಶನ್‌ ಆಸ್ಪತ್ರೆಗೆ ತೆರಳಿದ್ದಾರೆ. ಗೀತಾಗೆ ಜ್ವರ ಇದ್ದ ಹಿನ್ನೆಲೆಯಲ್ಲಿ ಅಲ್ಲಿನ ಸಿಬ್ಬಂದಿ ಅವರಿಗೆ ಆಸ್ಪತ್ರೆ ಪ್ರವೇಶಿಸಲು ಅವಕಾಶ ನೀಡದೇ ವೆನ್ಲಾಕ್‌ಗೆ ಹೋಗುವಂತೆ ಸೂಚಿಸಿದ್ದಾರೆ. ವೆನ್ಲಾಕ್‌ಗೆ ಹೋದರೆ ಅಲ್ಲಿ ಕೂಡ ಚಿಕಿತ್ಸೆ ನೀಡದೇ; ಮತ್ತೇ ಗೀತಾರನ್ನು ಲೇಡಿಗೋಶನ್‌ಗೆ ಕಳುಹಿಸಿದ್ದಾರೆ.

ಇದೇ ರೀತಿ ಆಂಬುಲೆನ್ಸ್‌ನಲ್ಲಿ ವೆನ್ಲಾಕ್ ಹಾಗೂ ಲೇಡಿಗೋಶನ್ ನಡುವೆ ಗರ್ಭಿಣಿ ನಾಲ್ಕು ಬಾರಿ ಅಲೆದಾಟ ನಡೆಸಿದ್ದಾರೆ. ಕೊನೆಗೆ ಆಂಬ್ಯುಲೆನ್ಸ್‌ ಚಾಲಕ ಗೀತಾ ಮತ್ತು ಆಕೆಯ ಅಕ್ಕನನ್ನು ವೆನ್ಲಾಕ್‌ನಲ್ಲಿ ಬಿಟ್ಟು ಹೊರಟು ಹೋಗಿದ್ದಾರೆ.

ಮಹಿಳೆ ಜ್ವರದಿಂದ ಬಳಲುತ್ತಿದ್ದ ಕಾರಣ ಅವರಿಗೆ ಕೋವಿಡ್‌–19 ಸೋಂಕು ಇರಬಹುದು ಎಂದು ಆಸ್ಪತ್ರೆಯವರು ಚಿಕಿತ್ಸೆ ನೀಡಲು ಮುಂದೆ ಬಂದಿಲ್ಲ. ಇದರಿಂದಾಗಿ ಊಟ, ನೀರು ಇಲ್ಲದೆ ಮಹಿಳೆ ವೆನ್ಲಾಕ್ ಆಸ್ಪತ್ರೆಯ ಜಗುಲಿಯಲ್ಲಿಯೇ ಕಾಲ ಕಳೆದಿದ್ದಾರೆ.

‌ರಾತ್ರಿ ವೇಳೆಗೆ ಮಹಿಳೆಯ ಮನೆಯವರು ನೆಲ್ಯಾಡಿಯಿಂದ ಮಂಗಳೂರಿಗೆ ಜೀಪು ಮಾಡಿಕೊಂಡು ಬಂದು, ಗರ್ಭಿಣಿಯನ್ನು ಮನೆಗೆ ಕರೆದುಕೊಂಡು ಬಂದಿದ್ದಾರೆ. ಜ್ವರದಿಂದ ಬಳಲುತ್ತಿದ್ದ ಗರ್ಭಿಣಿಗೆ ಕೋವಿಡ್‌–19 ಇರಬಹುದು ಎಂಬ ದಿಗಿಲಿನಿಂದ ಸೂಕ್ತ ಚಿಕಿತ್ಸೆ ನೀಡದೆ ಸತಾಯಿಸಿದ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಮಹಿಳೆ ಮನೆಯವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಾಸಕಕರು ಕರೆ ಸ್ವೀಕರಿಸಲಿಲ್ಲ; ಚಿಕಿತ್ಸೆಯೂ ಸಿಗಲಿಲ್ಲ:

‘ಲೇಡಿಗೋಶನ್, ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರೆಯುತ್ತಿಲ್ಲ ಎಂಬ ವಿಚಾರ ತಿಳಿಸಲು ಸುಳ್ಯ ಶಾಸಕ ಎಸ್. ಅಂಗಾರ ಅವರಿಗೆ ರಾತ್ರಿ ಕರೆ ಮಾಡಿದೆವು. ಆದರೆ, ಅವರು ಕರೆ ಸ್ವೀಕರಿಸಲಿಲ್ಲ’ ಎಂದು ಮಹಿಳೆಯ ಸಂಬಂಧಿ ಗಿರೀಶ್ ತಿಳಿಸಿದ್ದಾರೆ.

ಬಳಿಕ ಈ ವಿಷಯವನ್ನು ನೆಲ್ಯಾಡಿ ಕ್ಷೇತ್ರದ ತಾಲ್ಲೂಕು ಪಂಚಾಯಿತಿ ಸದಸ್ಯೆ ಉಷಾ ಅಂಚನ್‌ ಗಮನಕ್ಕೆ ತಂದೆವು. ಅವರು ಸಹಾಯವಾಣಿಗೆ ಕರೆ ಮಾಡುವಂತೆ ಹೇಳಿ ಫೋನ್‌ ಇಟ್ಟರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದ ಕಾರಣ ರಾತ್ರಿವರೆಗೂ ಅವರಿಬ್ಬರೂ ಆಸ್ಪತ್ರೆಯ ಜಗುಲಿ ಮೇಲೆ ಕಾಲ ಕಳೆದಿದ್ದಾರೆ. ಬಳಿಕ ನಾವು ಅಲ್ಲಿಗೆ ತೆರಳಿ ತುಂಬು ಗರ್ಭಿಣಿಯನ್ನು ರಾತ್ರಿ 12 ಗಂಟೆ ವೇಳೆಗೆ ವಾಪಸ್‌ ಮನೆಗೆ ಕರೆದುಕೊಂಡು ಬಂದಿದ್ದೇವೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.