ADVERTISEMENT

ಮಕ್ಕಳ ಸ್ವಾಗತಕ್ಕೆ ಶಾಲೆಗಳು ಅಣಿ

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ 30ರಂದು ಶಾಲಾ ಪ್ರಾರಂಭೋತ್ಸವಕ್ಕೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 29 ಮೇ 2025, 7:24 IST
Last Updated 29 ಮೇ 2025, 7:24 IST
ಶಾಲಾ ಪ್ರಾರಂಭೋತ್ಸವದ ಪ್ರಯುಕ್ತ ಪೆರ್ಮನ್ನೂರು ಪ್ರೌಢಶಾಲೆಯಲ್ಲಿ ಶಿಕ್ಷಕರು, ಸಿಬ್ಬಂದಿ ಸೇರಿ ಶಾಲೆಯ ಆವರಣ ಸ್ವಚ್ಛಗೊಳಿಸಿದರು
ಶಾಲಾ ಪ್ರಾರಂಭೋತ್ಸವದ ಪ್ರಯುಕ್ತ ಪೆರ್ಮನ್ನೂರು ಪ್ರೌಢಶಾಲೆಯಲ್ಲಿ ಶಿಕ್ಷಕರು, ಸಿಬ್ಬಂದಿ ಸೇರಿ ಶಾಲೆಯ ಆವರಣ ಸ್ವಚ್ಛಗೊಳಿಸಿದರು   

ಮಂಗಳೂರು: ಮುಂಗಾರು ಪೂರ್ವ ಮಳೆ ಕರಾವಳಿಯಲ್ಲಿ ಸೆಕೆಯ ಧಗೆಯನ್ನು ಮರೆಸಿ ಆಹ್ಲಾದಕರ ವಾತಾವರಣ ಮೂಡಿಸಿದೆ. ಈ ನಡುವೆ ಶೈಕ್ಷಣಿಕ ವರ್ಷ ಪ್ರಾರಂಭವಾಗುತ್ತಿದ್ದು, ಖುಷಿಯ ಹೊನಲಿನಲ್ಲಿ ಮಕ್ಕಳು ಶಾಲೆಗೆ ಮರಳಲು ಅಣಿಯಾಗುತ್ತಿದ್ದಾರೆ.

ಜಿಲ್ಲೆಯಾದ್ಯಂತ ಮೇ 29ರಿಂದ ಶಾಲೆಗಳು ಶುರುವಾಗಲಿದ್ದು, 30ರಂದು ಮಕ್ಕಳನ್ನು ಸ್ವಾಗತಿಸಲು ಶಾಲೆಗಳಲ್ಲಿ ಭರದ ಸಿದ್ಧತೆಗಳು ನಡೆಯುತ್ತಿವೆ. ಶಿಕ್ಷಕರು, ಬಿಸಿಯೂಟ ಕಾರ್ಯಕರ್ತೆಯರು ಶಾಲಾ ಕೊಠಡಿ ಸ್ವಚ್ಛತೆ, ಅಡುಗೆ ಕೋಣೆಯಲ್ಲಿ ಪಾತ್ರೆಗಳ ಸಿದ್ಧತೆ ಕಾರ್ಯದಲ್ಲಿ ತೊಡಗಿದ್ದಾರೆ.

‘ಮೇ 30ರಂದು ಎಲ್ಲ ಶಾಲೆಗಳಲ್ಲಿ ಪ್ರಾರಂಭೋತ್ಸವ ನಡೆಯಲಿದೆ. ಮಂಗಳವಾರದಿಂದಲೇ ಶಿಕ್ಷಕರು ಶಾಲೆಗೆ ತೆರಳಿ, ಕೊಠಡಿ, ಡೆಸ್ಕ್, ಬೆಂಚ್‌ಗಳ ಸ್ವಚ್ಛತಾ ಕಾರ್ಯ ನಡೆಸುತ್ತಿದ್ದಾರೆ. ಎಲ್ಲ ತಾಲ್ಲೂಕುಗಳಲ್ಲಿ ಮುಖ್ಯ ಶಿಕ್ಷಕರ ಸಭೆ ನಡೆಸಲಾಗಿದೆ. ಹಳೆಯ ಕೊಠಡಿಗಳು ಇದ್ದರೆ ಅಲ್ಲಿ ತರಗತಿ ನಡೆಸಬಾರದು, ವಿದ್ಯುತ್ ತಂತಿ ಅಪಾಯದ ಸ್ಥಿತಿಯಲ್ಲಿ ಇದ್ದರೆ ತಕ್ಷಣ ತಿಳಿಸಬೇಕು, ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಎಲ್ಲ ಶಾಲೆಗಳಿಗೆ ಸೂಚನೆ ನೀಡಲಾಗಿದೆ’ ಎಂದು ಪ್ರಭಾರಿ ಡಿಡಿಪಿಐ ಆಗಿರುವ ಡಯಟ್ ಪ್ರಾಂಶುಪಾಲೆ ರಾಜಲಕ್ಷ್ಮಿ ಕೆ. ತಿಳಿಸಿದರು.

ADVERTISEMENT

‘ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಿಸುವ ಸಂಬಂಧ ‘ನಮ್ಮ ಶಾಲೆ ನಮ್ಮ ಜವಾಬ್ದಾರಿ’ ಕಾರ್ಯಕ್ರಮ ನಡೆಸಿ ಪಾಲಕರಿಗೆ ತಿಳಿವಳಿಕೆ ನೀಡಲಾಗಿದೆ. ಕೆಲವು ಕಡೆ ಶಿಕ್ಷಕರು ಮನೆ ಬಾಗಿಲಿಗೆ ಹೋಗಿ ಮಕ್ಕಳನ್ನು ಶಾಲೆಗೆ ಸೇರಿಸುವಂತೆ ವಿನಂತಿಸಿದ್ದಾರೆ. ಉತ್ತಮ ಫಲಿತಾಂಶ ಪಡೆದಿರುವ, ಸಕಲ ಸೌಲಭ್ಯ ಹೊಂದಿರುವ ಹಲವಾರು ಶಾಲೆಗಳು ಕರಪತ್ರ ಸಿದ್ಧಪಡಿಸಿ, ಪಾಲಕರನ್ನು ತಲುಪಲು ಪ್ರಯತ್ನಿಸಿವೆ’ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.  

‘ಮೊದಲ ದಿನ ಶಾಲೆಗೆ ಬರುವ ಮಕ್ಕಳನ್ನು ಹೂ ಕೊಟ್ಟು ಸ್ವಾಗತಿಸಲು ಹಲವು ಶಾಲೆಗಳಲ್ಲಿ ತಯಾರಿ ನಡೆದರೆ, ಇನ್ನು ಕೆಲವು ಶಾಲೆಗಳು ಬ್ಯಾಂಡ್ ವಾದ್ಯದೊಂದಿಗೆ ಮಕ್ಕಳನ್ನು ಶಾಲೆಗೆ ಕರೆತರಲು ಸಿದ್ಧತೆ ಮಾಡಿಕೊಂಡಿವೆ’ ಎಂದು ಹೇಳಿದರು.

‘ಬಿಸಿಯೂಟ ಸಾಮಗ್ರಿ ಬೇಡಿಕೆ

’ ಪಠ್ಯಪುಸ್ತಕಗಳು ಬಹುತೇಕ ಪೂರೈಕೆಯಾಗಿವೆ. ಸಮವಸ್ತ್ರ ಪೂರ್ಣ ಪ್ರಮಾಣದಲ್ಲಿ ಬಂದಿಲ್ಲ. ಬಂದಿರುವಷ್ಟು ಸಾಮಗ್ರಿಯನ್ನು ಪ್ರಾರಂಭೋತ್ಸವದ ದಿನ ಮಕ್ಕಳಿಗೆ ವಿತರಿಸಲಾಗುತ್ತದೆ. ಮೊದಲ ದಿನ ಸಿಹಿ ತಿನಿಸಿನೊಂದಿಗೆ ಬಿಸಿಯೂಟ ಇರಲಿದೆ. ಹೊಸ ಶೈಕ್ಷಣಿಕ ವರ್ಷದ ಬಿಸಿಯೂಟದ ಸಾಮಗ್ರಿಗಳ ಬೇಡಿಕೆ ಸಲ್ಲಿಸಲಾಗಿದ್ದು ಇನ್ನಷ್ಟೇ ಪೂರೈಕೆ ಆಗಬೇಕಾಗಿದೆ. ಅಲ್ಲಿಯವರೆಗೆ ಸಂಗ್ರಹದಲ್ಲಿರುವ ಸಾಮಗ್ರಿಯನ್ನು ಬಿಸಿಯೂಟಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತದೆ ಎಂದು ಶಿಕ್ಷಕರೊಬ್ಬರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.