ಜೈಲು
ಮಂಗಳೂರು: ನಗರದಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ಸೋಮವಾರ ಸಂಜೆ ಎರಡು ಪ್ರತ್ಯೇಕ ಬ್ಯಾರಕ್‌ಗಳಲ್ಲಿದ್ದ ವಿಚಾರಣಾಧೀನ ಕೈದಿಗಳು ಪರಸ್ಪರ ಹೊಡೆದಾಡಿಕೊಂಡಿದ್ದು, ಒಬ್ಬ ಕೈದಿ ಗಾಯಗೊಂಡಿದ್ದಾನೆ. ಈ ಬಗ್ಗೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಕ್ವಾರಂಟೈನ್ ಸೆಲ್ ವಿಭಾಗದ ಕೆಲವು ವಿಚಾರಣಾ ಕೈದಿಗಳು ಕಚೇರಿ ಮುಂಭಾಗದಲ್ಲಿ ನಿಂತು ‘ಬಿ' ಬ್ಯಾರಕ್‌ನಲ್ಲಿರುವ ಕೈದಿಗಳನ್ನು ಗುರಾಯಿಸಿ ನೋಡಿದ್ದರು. ಪರಸ್ಪರ ಅವಾಚ್ಯವಾಗಿ ಬೈದುಕೊಂಡಿದ್ದರು. ಸಿಮೆಂಟ್ ಇಟ್ಟಿಗೆಯನ್ನು ಒಡೆದು ಅದರ ತುಂಡುಗಳನ್ನು ಎಸೆದಿದ್ದರು. ಇನ್ನೊಂದು ಬ್ಯಾರಾಕ್‌ನ ಕೆಲ ಕೈದಿಗಳು ಮಧ್ಯದ ಗೇಟ್ ಅನ್ನು ದೂಡಿ ಹೊರಬಂದು ಕಚೇರಿಯ ನ್ಯಾಯಾಂಗ ವಿಭಾಗದ ಕೋಣೆಯತ್ತ ನುಗ್ಗಿ, ಅದರ ಬಾಗಿಲಿನ ಗಾಜುಗಳನ್ನು ಒಡೆದುಹಾಕಿದ್ದರು. ಈ ಗಲಾಟೆಯಲ್ಲಿ ಕೈದಿಯೊಬ್ಬನ ಕಾಲಿಗೆ ಗಾಯವಾಗಿದೆ’ ಎಂದು ಜೈಲಿನ ಅಧೀಕ್ಷಕರು ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಜೈಲಿನಲ್ಲಿ ಕೈದಿಗಳು ಹೊಡೆದಾಡುವ ದೃಶ್ಯವನ್ನು ಸಮೀಪದ ಕಟ್ಟಡವೊಂದರ ಮಹಡಿಯಲ್ಲಿದ್ದವರು ಚಿತ್ರೀಕರಿಸಿದ್ದಾರೆ. ರೌಡಿಶೀಟರ್ ಸುಹಾಶ್ ಶೆಟ್ಟಿ ಹತ್ಯೆಯಲ್ಲಿ ಬಂಧನಕ್ಕೊಳಗಾದ ಆರೋಪಿ ನೌಷಾದ್ ಗುರಿಯಾಗಿಸಿ ಹಲ್ಲೆ ನಡೆಸಲಾಗಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವರು ಮಾಹಿತಿ ಹಂಚಿಕೊಂಡಿದ್ದರು.
‘ಆರೋಪಿ ನೌಷಾದ್ ಅವರ ಮೇಲೆ ಯಾವುದೇ ಹಲ್ಲೆ ನಡೆದಿಲ್ಲ’ ಎಂದು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ಸ್ಪಷ್ಟಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.