ಪುತ್ತೂರು: ಸಾಗುವಳಿ ಚೀಟಿ ಮೂಲಕ ಮಂಜೂರಾದ ಜಾಗ ಮಾರಾಟ ಮಾಡಲು ನಿರಾಕ್ಷೇಪಣಾ ಪತ್ರ ನೀಡಲು ಲಂಚ ಪಡೆದ ಪುತ್ತೂರು ತಹಶೀಲ್ದಾರ್ ಕಚೇರಿಯ ಭೂ ಸುಧಾರಣಾ ಶಾಖೆಯ ಕೇಸ್ ವರ್ಕರ್ ಸುನಿಲ್ ಗುರುವಾರ ಸಂಜೆ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದು, ಪುತ್ತೂರು ತಹಶೀಲ್ದಾರ್ ವಿರುದ್ಧವೂ ಪ್ರಕರಣ ದಾಖಲಾಗಿದೆ.
ಪುತ್ತೂರಿನ ಮಿನಿವಿಧಾನ ಸೌಧದ ಕಟ್ಟಡದಲ್ಲಿರುವ ಕಚೇರಿಯಲ್ಲಿ ಸುನಿಲ್ ಪುತ್ತೂರು ತಾಲ್ಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಅಜಿತ್ ಎಂಬುವರಿಂದ ಗುರುವಾರ ಸಂಜೆ ₹ 12 ಸಾವಿರ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಈ ನಡುವೆ ಪುತ್ತೂರು ತಹಶೀಲ್ದಾರ್ ತಲೆಮರೆಸಿಕೊಂಡಿದ್ದು, ಪ್ರಕರಣದಲ್ಲಿ ಅವರ ಪಾತ್ರದ ಕುರಿತು ತನಿಖೆ ನಡೆಸಲಾಗುವುದು ಎಂದು ಲೋಕಾಯುಕ್ತ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ದೂರದಾರರ ಚಿಕ್ಕಪ್ಪನಿಗೆ ಪುತ್ತೂರು ತಾಲ್ಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದಲ್ಲಿ 85 ಸೆಂಟ್ಸ್ ಜಮೀನು ಅಕ್ರಮ ಸಕ್ರಮದಡಿ ಮಂಜೂರಾಗಿತ್ತು. ಅವರು ಅನಾರೋಗ್ಯದ ಕಾರಣ ಪುತ್ತೂರು ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಮರಣ ಶಾಸನ ಬರೆಸಿ ಕೊಟ್ಟಿದ್ದರು. ಇದರ ಪ್ರಕಾರ ಅವರ ಚಿಕ್ಕಪ್ಪನ ಮರಣ ನಂತರ ಈ ಜಮೀನಿನ ಸಂಪೂರ್ಣ ಹಕ್ಕು ದೂರುದಾರರಿಗೆ ಸೇರಿದೆ. ಈ ಜಮೀನು ದೂರದಾರರ ಚಿಕ್ಕಪ್ಪನಿಗೆ ಮಂಜೂರಾಗಿ 27 ವರ್ಷ ಆಗಿದ್ದು, ಈ ಜಮೀನನ್ನು ಪರಭಾರೆ ಮಾಡಲು ತಹಶೀಲ್ದಾರರಿಂದ ನಿರಾಕ್ಷೇಪಣಾ ಪತ್ರ ಅವಶ್ಯಕತೆ ಇತ್ತು. ದೂರುದಾರರ ಚಿಕ್ಕಪ್ಪ ಡಿಸೆಂಬರ್‌ನಲ್ಲಿ ಸಾಗುವಳಿ ಚೀಟಿ ಮೂಲಕ ತಹಶೀಲ್ದಾರರಿಂದ ಮಂಜೂರಾದ ಜಾಗ ಮಾರಾಟ ಮಾಡಲು ನಿರಾಕ್ಷೇಪಣಾ ಪತ್ರ ಕೋರಿ ಪುತ್ತೂರು ತಹಶೀಲ್ದಾರ್‌ಗೆ ಅರ್ಜಿ ಸಲ್ಲಿಸಿದ್ದರು.
ದೂರುದಾರರು ನಿರಾಕ್ಷೇಪಣಾ ಪತ್ರದ ಬಗ್ಗೆ ವಿಚಾರಿಸಿದಾಗ, ಸುನಿಲ್ ಅವರು ತಹಶೀಲ್ದಾರ್ ಅವರ ಸಹಿಗೆ ಬಾಕಿ ಇದೆ. ಅದಕ್ಕೆ ಸ್ವಲ್ಪ ಹಣ ಖರ್ಚು ಇರುತ್ತದೆ. ತಹಶೀಲ್ದಾರ್‌ಗೆ ₹ 10ಸಾವಿರ ಹಾಗೂ ನನಗೂ ಹಣ ಕೊಡಬೇಕಾಗುತ್ತದೆ ಎಂದು ಹೇಳಿ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಸುನಿಲ್ ಮತ್ತು ಪುತ್ತೂರು ತಹಶೀಲ್ದಾರ್ ವಿರುದ್ಧ ಪ್ರಕರಣ ದಾಖಲಾಗಿದೆ.
ಲೋಕಾಯುಕ್ತ ಮಂಗಳೂರು ವಿಭಾಗದ ಪ್ರಭಾರ ಎಸ್‌ಪಿ ಕುಮಾರಚಂದ್ರ ಅವರ ಮಾರ್ಗದರ್ಶನದಲ್ಲಿ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕರಾದ ಗಾನ ಪಿ.ಕುಮಾರ್, ಇನ್‌ಸ್ಪೆಕ್ಟರ್‌ಗಳಾದ ಭಾರತಿ ಜಿ., ಚಂದ್ರಶೇಖರ್ ಕೆ.ಎನ್., ರವಿ ಪವಾರ್, ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.