ADVERTISEMENT

ಪುತ್ತೂರು | 'ಎಲ್ಲೂ ನ್ಯಾಯ ಸಿಕ್ಕಿಲ್ಲ; ನ್ಯಾಯ ಸಿಗದಿದ್ದರೆ ಬಿಡುವುದಿಲ್ಲ'

ವಿವಾಹವಾಗುವುದಾಗಿ ನಂಬಿಸಿ ವಂಚನೆ ಪ್ರಕರಣದ ಸಂತ್ರಸ್ತೆಯ ತಾಯಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2025, 6:21 IST
Last Updated 1 ಜುಲೈ 2025, 6:21 IST

ಪುತ್ತೂರು: ‘ನನ್ನ ಮಗಳನ್ನು ವಿವಾಹವಾಗುವುದಾಗಿ ನಂಬಿಸಿದ ಯುವಕ, ಆಕೆ ಗರ್ಭವತಿಯಾದಾಗ ವಿವಾಹವಾಗಲು ನಿರಾಕರಿಸಿದ್ದಾನೆ. ಇದೀಗ ಆಕೆ ಮಗುವಿಗೆ ಜನ್ಮನೀಡಿದ್ದಾಳೆ. ನಮಗೆ ಹಿಂದೂ ಸಂಘಟನೆ ಮುಖಂಡರಿಂದ, ಶಾಸಕರಿಂದ, ಪೊಲೀಸರಿಂದಲೂ ನ್ಯಾಯ ಸಿಕ್ಕಿಲ್ಲ. ನ್ಯಾಯ ಸಿಗದಿದ್ದರೆ ನಾವು ಬಿಡುವುದಿಲ್ಲ. ಈ ವಿಚಾರದಲ್ಲಿ ಪ್ರತಿಭಟನೆಗೂ ಸಿದ್ಧ’ ಎಂದು ಸಂತ್ರಸ್ತೆಯ ತಾಯಿ ತಿಳಿಸಿದ್ದಾರೆ.

ಪುತ್ತೂರಿನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಯುವಕನಿಗೆ ನನ್ನ ಮಗಳೊಂದಿಗೆ ಪ್ರೇಮ ಸಂಬಂಧವಿತ್ತು. ಆಕೆ ಗರ್ಭಿಣಿಯಾಗಿರುವ ವಿಚಾರವನ್ನು ಯುವಕನೇ ನನ್ನ ಬಳಿ ‌ತಿಳಿಸಿ, ನಮ್ಮಿಂದ ತಪ್ಪಾಗಿದೆ ಎಂದಿದ್ದ. ಈ ವಿಚಾರವನ್ನು ಅವನ ತಂದೆಗೂ ತಿಳಿಸಿದ್ದೆ. ವಿವಾಹ ಮಾಡಿಸುವುದಾಗಿ ಅವರೂ ತಿಳಿಸಿದ್ದರು. ಯುವಕನ ತಂದೆ, ತಾಯಿ, ನಾನು ಮತ್ತು ಮಗಳು ಜತೆಯಲ್ಲಿ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿದಾಗ ಆಕೆಗೆ 7 ತಿಂಗಳಾಗಿದ್ದು, ಗರ್ಭಪಾತ ಮಾಡಿಸಲು ಸಾಧ್ಯವಿಲ್ಲ ಎಂದು ಆಸ್ಪತ್ರೆಯಲ್ಲಿ ತಿಳಿಸಿದ್ದರು. ಈ ಮಧ್ಯೆ ಯುವಕನ ತಾಯಿ, ನನ್ನ ಮಗನೊಂದಿಗೆ ವಿವಾಹ ಮಾಡುವುದನ್ನು ಕನಸಿನಲ್ಲೂ ಯೋಚಿಸಬೇಡಿ ಎಂದಿದ್ದರು’ ಎಂದು ತಿಳಿಸಿದರು.

‘ಈ ಕುರಿತು ನಾನು ಪೊಲೀಸರಿಗೆ ದೂರು ನೀಡಲು ಮುಂದಾದಾಗ ನನ್ನ ಪತಿ, ಯುವಕನ ತಂದೆ ಸಹಪಾಠಿಗಳಾಗಿದ್ದರಿಂದ ದೂರು ಕೊಡುವುದು ಬೇಡ. ಅವರು ವಿವಾಹ ಮಾಡಿಕೊಡಬಹುದು ಎಂದು ಹೇಳಿದ್ದರು. ಆದರೆ, ಯುವಕನ ತಂದೆಯ ನಡವಳಿಕೆಯಲ್ಲಿ ಸಂಶಯವಿದ್ದ ಕಾರಣ ನಾನೇ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದೆ. ಆ ವೇಳೆ ಪೊಲೀಸರು ಹುಡುಗನನ್ನು ಕರೆಸಿದ್ದರು. ಆಗ ಮತ್ತೆ ವಿವಾಹದ ರಾಜಿ ಪಂಚಾಯಿತಿಗೆ ಶಾಸಕರ ಪ್ರವೇಶವಾಯಿತು’ ಎಂದು ಆರೋಪಿಸಿದರು.

ADVERTISEMENT

‘ಎಫ್ಐಆರ್ ಮಾಡಬೇಡಿ. ಜೂನ್‌ 23ಕ್ಕೆ ಯುವಕನಿಗೆ 21 ವರ್ಷ ಆದ ಬಳಿಕ ಅವರು ವಿವಾಹಕ್ಕೆ ಒಪ್ಪಿದ್ದಾರಲ್ಲ ಎಂದರು. ಹಾಗೆ ಠಾಣೆಯಲ್ಲಿ ಮುಚ್ಚಳಿಕೆ ಬರೆಸಿ ಇತ್ಯರ್ಥ ಆಗಿತ್ತು. ಆದರೆ, ಹುಡುಗನಿಗೆ 21 ವರ್ಷ ಆದ ಬಳಿಕ ಅವರು ಒಪ್ಪದಿರುವುದನ್ನು ಶಾಸಕರಿಗೆ ಕರೆ ಮಾಡಿ ತಿಳಿಸಿದ್ದೆ. ಯುವಕನ ಕಡೆಯವರು ವಿವಾಹಕ್ಕೆ ಒಪ್ಪದಿದ್ದರೆ ನಿಮಗೆ ಹೇಗೆ ಬೇಕೋ ಹಾಗೆ ಪ್ರಕರಣ ಮುಂದುವರಿಸಿ ಎಂದು ಹೇಳಿದ್ದಾರೆ’ ಎಂದು ಸಂತ್ರಸ್ತೆಯ ತಾಯಿ ಹೇಳಿದರು.

‘ಯುವಕನಿಗೆ 21 ವರ್ಷ ಆದ ಬಳಿಕ ನಮ್ಮ ಮನೆಯಲ್ಲೇ ಯುವಕ, ಆತನ ತಂದೆ, ಅವರ ಸಹೋದರ ಬಂದು ಮಾತುಕತೆ ನಡೆಸಿದರು. ಮಾತುಕತೆಯ ವೇಳೆ ಅವರು ನನ್ನ ಮಗಳ ಮೇಲೆ ಸಂಶಯದ ರೀತಿಯಲ್ಲಿ ಪ್ರಶ್ನೆ ಮಾಡಿದರು. ಮಗು ನನ್ನದಲ್ಲ ಎಂದು ಹುಡುಗ ಹೇಳಿ, ಆಕೆಯ ಮೇಲೂ ಹಲ್ಲೆಗೆ ಯತ್ನಿಸಿದ. ಮಾತುಕತೆಗೆ ಬಂದವರು ಮನೆ ಬಿಟ್ಟು ಹೋಗುವಂತೆ ಬೆದರಿಕೆಯನ್ನೂ ಹಾಕಿದ್ದಾರೆ’ ಎಂದು ಸಂತ್ರಸ್ತೆಯ ತಾಯಿ ಆರೋಪಿಸಿದರು.

‘ಮಗಳಿಗೆ ನ್ಯಾಯಕ್ಕಾಗಿ ಹಿಂದೂ ಸಂಘಟನೆಯ ಮುಖಂಡರಲ್ಲೂ ಮನವಿ ಮಾಡಿದ್ದೇವೆ. ಮುಖಂಡರೊಬ್ಬರು ಹುಡುಗ ಒಪ್ಪುತ್ತಿಲ್ಲ ಎಂದು ಹೇಳಿದ್ದು, ₹ 10 ಲಕ್ಷ ನೀಡಿದರೆ ಆಗಬಹುದಾ ಎಂದು ಕೇಳಿದ್ದಾರೆ. ನಾನು ₹ 10 ಲಕ್ಷವಲ್ಲ ₹ 1 ಕೋಟಿ ನೀಡಿದರೂ ನ್ಯಾಯ ಸಿಗದೆ ಬಿಡುವುದಿಲ್ಲ ಎಂದು ಹೇಳಿದ್ದೆ. ಮಂಗಳೂರಿನ ಮುಖಂಡರೊಬ್ಬರಿಗೂ ಮನವಿ ಮಾಡಿದ್ದೆವು. ಅವರು ಮಗುವನ್ನು ದತ್ತು ನೀಡಬಹುದಾ ಎಂದು ಕೇಳಿದ್ದರು. ಹಿಂದುತ್ವವಾದಿ ಮುಖಂಡರೊಬ್ಬರು ಈ ವಿಚಾರದಲ್ಲಿ ನಾನು ಬಂದರೆ ತಪ್ಪಾಗುತ್ತದೆ ಎಂದು ಹೇಳಿ ಕೈಚೆಲ್ಲಿದ್ದಾರೆ’ ಎಂದರು.

ನನ್ನ ಮಗಳನ್ನು ವಿವಾಹವಾಗಲು ನಿರಾಕರಿಸಿದ ಯುವಕನ ವಿರುದ್ಧ ಜೂನ್‌ 24ರಂದು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿ ಪ್ರಕರಣ ದಾಖಲಿಸಿದ್ದೇವೆ. ಆದರೆ, ಪೊಲೀಸರು ಅವರನ್ನು ವಿಚಾರಣೆಗೆ ಕರೆದಿಲ್ಲ. ಪೊಲೀಸರನ್ನು ಈ ಕುರಿತು ಪ್ರಶ್ನಿಸಿದರೆ ಯುವಕ ನಾಪತ್ತೆಯಾಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಅವರ ತಂದೆ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಎಂದು ತಿಳಿಸಿದ್ದಾರೆ. ಯುವಕನನ್ನು ಮನೆಯವರೇ ಬಚ್ಚಿಟ್ಟಿದ್ದಾರೆ. ಈ ಕುರಿತು ಎಸ್‌ಪಿಗೂ ತಿಳಿಸಿದ್ದೇವೆ. ಅವರು ಯುವಕನ ಮಾಹಿತಿ ಲಭಿಸಿದೆ ಎನ್ನುತ್ತಾರೆಯೇ ಹೊರತು ಪತ್ತೆ ಮಾಡಿಲ್ಲ’ ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.