ADVERTISEMENT

ಸಮಸ್ಯೆಗಳ ಕೂಪ ಕೇಂದ್ರ ಮಾರುಕಟ್ಟೆ

ನಿತ್ಯ ಸಾವಿರಾರು ಜನರ ಭೇಟಿಯ ಸ್ಥಳ lಸೌಲಭ್ಯಗಳೇ ಇಲ್ಲ lಸದಾ ವಾಹನ ದಟ್ಟಣೆ

ವಿ.ಎಸ್.ಸುಬ್ರಹ್ಮಣ್ಯ
Published 8 ಸೆಪ್ಟೆಂಬರ್ 2019, 20:35 IST
Last Updated 8 ಸೆಪ್ಟೆಂಬರ್ 2019, 20:35 IST
ಸೆಂಟ್ರಲ್‌ ಮಾರುಕಟ್ಟೆಯ ರಸ್ತೆಗಳ ದುಸ್ಥಿತಿ.– ಪ್ರಜಾವಾಣಿ ಚಿತ್ರಗಳು/ಗೋವಿಂದರಾಜ ಜವಳಿ
ಸೆಂಟ್ರಲ್‌ ಮಾರುಕಟ್ಟೆಯ ರಸ್ತೆಗಳ ದುಸ್ಥಿತಿ.– ಪ್ರಜಾವಾಣಿ ಚಿತ್ರಗಳು/ಗೋವಿಂದರಾಜ ಜವಳಿ   

ಮಂಗಳೂರು: ಬರೋಬ್ಬರಿ 55 ವರ್ಷಗಳ ಇತಿಹಾಸವಿರುವ ನಗರದ ಕೇಂದ್ರ ಮಾರುಕಟ್ಟೆ, ವಾಣಿಜ್ಯ ಚಟುವಟಿಕೆಗಳ ಜೀವನಾಡಿ ಇದ್ದಂತೆ. ತರಕಾರಿ, ಹಣ್ಣು, ಹೂವು, ದಿನಸಿ, ಮಾಂಸ ಎಲ್ಲವೂ ಒಂದೇ ಕಡೆ ಸಿಗುವ ತಾಣ. ಈ ಮಾರುಕಟ್ಟೆ ಈಗ ಸಮಸ್ಯೆಗಳ ಕೂಪದಂತಾಗಿದೆ.

ರಸ್ತೆಯ ಮೇಲೆಲ್ಲಾ ಹರಿಯುತ್ತಿರುವ ಕೊಚ್ಚೆ ನೀರು, ಸದಾ ವಾಹನ ದಟ್ಟಣೆಯಿಂದ ಕೂಡಿರುವ ರಸ್ತೆಗಳು, ಎಲ್ಲೆಂದರಲ್ಲಿ ಬಿದ್ದಿರುವ ಘನ ತ್ಯಾಜ್ಯದ ರಾಶಿ, ಗ್ರಾಹಕರು ಮತ್ತು ಕಾರ್ಮಿಕರು ನಡೆದಾಡುವುದಕ್ಕೂ ಸಾಧ್ಯವಾಗದಂತಹ ಕಿರಿದಾದ ಪಾದಚಾರಿ ಮಾರ್ಗಗಳು, ದುರ್ನಾತ ಬೀರುತ್ತಿರುವ ಶೌಚಾಲಯಗಳು ಹೀಗೆ ಪಟ್ಟಿ ಮಾಡುತ್ತಾ ಹೋದರೆ ಸಮಸ್ಯೆಗಳ ಸರಮಾಲೆಯನ್ನೇ ಹೆಸರಿಸಬಹುದು.

ಮಂಗಳೂರು ನಗರದ ಜನಸಂಖ್ಯೆ ಕೇವಲ 50,000 ಇದ್ದ ಕಾಲದಲ್ಲಿ ಕೇಂದ್ರ ಮಾರುಕಟ್ಟೆ ಅಸ್ತಿತ್ವಕ್ಕೆ ಬಂದಿತ್ತು. ಈಗ ನಗರದ ಜನಸಂಖ್ಯೆ 6 ಲಕ್ಷ ಮೀರಿದೆ. ಆಗಿನ ಕಾಲಕ್ಕೆ ಹೋಲಿಸಿದರೆ 11 ಪಟ್ಟು ಹೆಚ್ಚಾಗಿದೆ. ಆದರೆ, ಮಾರುಕಟ್ಟೆಯಲ್ಲಿ ಯಾವ ಬದಲಾವಣೆಯೂ ಆಗಿಲ್ಲ. ಜನಸಂಖ್ಯೆಯ ಒತ್ತಡ ಹೆಚ್ಚಿದಂತೆಲ್ಲಾ ಕೇಂದ್ರ ಮಾರುಕಟ್ಟೆಯಲ್ಲೂ ಸಮಸ್ಯೆಗಳ ಭಾರ ಹೆಚ್ಚುತ್ತಲೇ ಇದೆ.

ADVERTISEMENT

ತ್ಯಾಜ್ಯದ ರಾಶಿಗಳು: ಕೇಂದ್ರ ಮಾರುಕಟ್ಟೆ ಸುಮಾರು 4 ಎಕರೆ ವಿಸ್ತೀರ್ಣದಲ್ಲಿ ವ್ಯಾಪಿಸಿಕೊಂಡಿದೆ. ತರಕಾರಿ, ಹಣ್ಣು, ಹೂವು ಮತ್ತು ದಿನಸಿ ಅಂಗಡಿಗಳು ಇರುವ ಕಟ್ಟಡದಲ್ಲಿ 492 ಮಳಿಗೆಗಳಿವೆ. ತರಕಾರಿ, ಹಣ್ಣು ಮತ್ತು ಹೂವಿನ ಅಂಗಡಿಗಳಲ್ಲಿ ಬೃಹತ್‌ ಪ್ರಮಾಣದ ಘನತ್ಯಾಜ್ಯ ಉತ್ಪತ್ತಿಯಾಗುತ್ತದೆ. ಈ ತ್ಯಾಜ್ಯದ ವಿಲೇವಾರಿಗೆ ಮಾರುಕಟ್ಟೆಯ ಅಂಗಳದಲ್ಲಿ ಸರಿಯಾದ ವ್ಯವಸ್ಥೆಯೇ ಇಲ್ಲ.

‘ಮಾರುಕಟ್ಟೆಯಲ್ಲಿ ಉತ್ಪತ್ತಿಯಾಗುವ ಅಷ್ಟೂ ಘನತ್ಯಾಜ್ಯವನ್ನು ಎಸೆಯಲು ಒಂದು ಬಯಲು ಸ್ಥಳ ನಿಗದಿ ಮಾಡಲಾಗಿದೆ. ಹೆಚ್ಚಿನ ಅಂಗಡಿಗಳ ಕಾರ್ಮಿಕರು ಅಷ್ಟು ದೂರ ಹೋಗುವುದೇ ಇಲ್ಲ. ಎಲ್ಲೆಂದರಲ್ಲಿ ಕಸ ಎಸೆದು ಹೋಗುತ್ತಾರೆ. ಬೀದಿಬದಿ ವ್ಯಾಪಾರಿಗಳು ವಹಿವಾಟು ಮುಗಿಸಿದ ಬಳಿಕ ಅಲ್ಲಿಯೇ ಕಸ ಬಿಟ್ಟು ಹೋಗುತ್ತಾರೆ. ಇದರಿಂದಾಗಿ ಇಡೀ ಮಾರುಕಟ್ಟೆಯಲ್ಲಿ ನೈರ್ಮಲ್ಯವೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಕೇಂದ್ರ ಮಾರುಕಟ್ಟೆ ವ್ಯಾಪಾರಿಗಳ ಸಂಘದ ಉಪಾಧ್ಯಕ್ಷ ಜನಾರ್ದನ ಸಾಲಿಯಾನ್‌.

ಕಸವನ್ನು ಸುರಿಯಲು ನಿಗದಿ ಮಾಡಿರುವ ಸ್ಥಳವೂ ಸರಿಯಾದುದಲ್ಲ. ಅಲ್ಲಿ ರಾಶಿಯಾದ ಕಸದೊಂದಿಗೆ ನೀರು ಸೇರಿಕೊಂಡು ರಸ್ತೆಯ ಮೇಲೆಲ್ಲಾ ಹರಿಯುತ್ತದೆ. ಕೆಸರು ಮತ್ತು ವಾಸನೆಯಿಂದ ಆ ಪ್ರದೇಶದಲ್ಲಿ ಯಾರೂ ಹೋಗಲು ಸಾಧ್ಯವಾಗದಂತಹ ವಾತಾವರಣ ಸೃಷ್ಟಿಯಾಗುತ್ತಿದೆ. ಇದರಿಂದ ವ್ಯಾಪಾರಿಗಳು, ಗ್ರಾಹಕರು ಎಲ್ಲರೂ ತೊಂದರೆ ಅನುಭವಿಸುವಂತಾಗಿದೆ ಎಂದು ಇಲ್ಲಿನ ಮಳಿಗೆಗಳ ಮಾಲೀಕರು ಬೇಸರ ವ್ಯಕ್ತಪಡಿಸುತ್ತಾರೆ.

ಪಾರ್ಕಿಂಗ್‌ ಸ್ಥಳವೇ ಇಲ್ಲ: ಇಷ್ಟು ದೊಡ್ಡ ಮಾರುಕಟ್ಟೆಗೆ ನಿತ್ಯವೂ ಹತ್ತಾರು ಸಾವಿರ ಜನರು ಬಂದು ಹೋಗುತ್ತಾರೆ. ಹಲವು ಕೋಟಿ ರೂಪಾಯಿಗಳ ಲೆಕ್ಕದಲ್ಲಿ ವಹಿವಾಟು ನಡೆಯುತ್ತದೆ. ಇಲ್ಲಿ ಬರುವ ಗ್ರಾಹಕರಿಗೆ ವಾಹನ ನಿಲುಗಡೆ ಮಾಡಲು ಸ್ಥಳಾವಕಾಶವೇ ಇಲ್ಲ. ಇರುವ ಸ್ವಲ್ಪ ಜಾಗವನ್ನೂ ಸದಾಕಾಲ ಬೀದಿಬದಿ ವ್ಯಾಪಾರಿಗಳು ಆಕ್ರಮಿಸಿಕೊಳ್ಳುತ್ತಾರೆ. ಇದರಿಂದಾಗಿ ದ್ವಿಚಕ್ರ ವಾಹನಗಳನ್ನೂ ನಿಲುಗಡೆ ಮಾಡಿ ಖರೀದಿಗೆ ಹೋಗಲಾಗದಂತಹ ಸ್ಥಿತಿ ಕೇಂದ್ರ ಮಾರುಕಟ್ಟೆಯಲ್ಲಿದೆ.

‘ಇಲ್ಲಿ ಹಲವು ಸಮಸ್ಯೆಗಳಿವೆ. ಎಲ್ಲಕ್ಕಿಂತಲೂ ಮುಖ್ಯವಾಗಿ ವಾಹನ ಪಾರ್ಕಿಂಗ್‌ಗೆ ಸರಿಯಾದ ವ್ಯವಸ್ಥೆ ಮಾಡಿದರೆ ಸಾಕು ಎನ್ನುವಂತಾಗಿದೆ. ಪಾರ್ಕಿಂಗ್‌ಗೆ ಸ್ಥಳವಿಲ್ಲ ಎಂಬ ಕಾರಣದಿಂದಾಗಿಯೇ ಇಲ್ಲಿಗೆ ಬರಲು ಜನರು ಹಿಂದೇಟು ಹಾಕುತ್ತಿದ್ದಾರೆ. ಇದರಿಂದಾಗಿ ನಮ್ಮ ವಹಿವಾಟು ಕುಸಿಯುತ್ತಿದೆ’ ಎಂಬುದು ಬಹುತೇಕ ವ್ಯಾಪಾರಿಗಳ ದೂರು.

ಸದಾ ವಾಹನ ದಟ್ಟಣೆ: ಕೇಂದ್ರ ಮಾರುಕಟ್ಟೆ ಇರುವ ಪ್ರದೇಶಕ್ಕೆ ಐದು ಮುಖ್ಯ ರಸ್ತೆಗಳು ಬಂದು ಕೂಡುತ್ತವೆ. ಬಂದರು ಕಡೆಯಿಂದ ಒಂದು ರಸ್ತೆ, ಭವಂತಿ ಬೀದಿ, ಗಣಪತಿ ಶಾಲೆಯ ಕಡೆಯಿಂದ ರಸ್ತೆ, ಎ.ಆರ್‌.ಡಿಸೋಜ ರಸ್ತೆ, ಫಾತಿಮಾ ಸ್ಟೋರ್‌ ಕಡೆಯ ರಸ್ತೆಗಳು ನೇರವಾಗಿ ಬಂದು ಕೇಂದ್ರ ಮಾರುಕಟ್ಟೆ ತಲುಪುತ್ತವೆ. ಇನ್ನೂ ಕೆಲವು ಸಣ್ಣ ಮಾರ್ಗಗಳು ಇಲ್ಲಿಗೆ ಬಂದು ಸೇರುತ್ತವೆ. ಎಲ್ಲ ಮಾರ್ಗಗಳಿಂದಲೂ ಬರುವ ವಾಹನಗಳು ಒಂದೇ ಕಡೆಯಲ್ಲಿ ಸೇರಿ ದಿನವಿಡೀ ವಾಹನ ದಟ್ಟಣೆ ಸೃಷ್ಟಿಯಾಗುತ್ತಿದೆ.

ಮುಖ್ಯ ರಸ್ತೆಯಿಂದ ಮಾರುಕಟ್ಟೆಯ ಒಳಕ್ಕೆ ಹೋಗುವ ಹಾದಿಯೂ ಕಿರಿದಾಗಿದೆ. ಕಟ್ಟಡದ ಒಳಗಿನ ದಾರಿಗಳು ಕಿಷ್ಕಿಂಧೆಯಂತಿವೆ. ತಲೆಹೊರೆ ಕಾರ್ಮಿಕರು ಮೂಟೆ ಹೊತ್ತು ಸಾಗುವಾಗ ಗ್ರಾಹಕರು ಅಡ್ಡಬಂದರೆ ತೀರಾ ಕಷ್ಟದ ಪರಿಸ್ಥಿತಿ ಉಂಟಾಗುತ್ತದೆ. 55 ವರ್ಷಗಳ ಹಿಂದಿನ ಸ್ಥಿತಿಗೂ, ಈಗಿನ ಸ್ಥಿತಿಗೂ ಯಾವ ಬದಲಾವಣೆಯೂ ಆಗಿಲ್ಲ ಎಂಬುದು ಗ್ರಾಹಕರ ಅಳಲು. ಎರಡು ಕಟ್ಟಡಗಳಲ್ಲೂ ಸರಿಯಾದ ಶೌಚಾಲಯದ ವ್ಯವಸ್ಥೆ ಇಲ್ಲ. ಪಾದಚಾರಿ ಮಾರ್ಗಗಳನ್ನು ಹುಡುಕಿದರೂ ಸಿಗುವ ಸ್ಥಿತಿಯಲ್ಲಿ ಇಲ್ಲ. ಒಳಚರಂಡಿ ವ್ಯವಸ್ಥೆ ಸರಿಯಾಗಿ ಇಲ್ಲದಿರುವುದರಿಂದ ಕೊಳಚೆ ನೀರು ಮಾರುಕಟ್ಟೆ ಆವರಣದಲ್ಲೆಲ್ಲಾ ಹರಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.