ADVERTISEMENT

ಮನೆಗೆ ನುಗ್ಗಿದ ನೀರು: ಜನರ ಸ್ಥಳಾಂತರ

ಮಂಗಳೂರು ತಾಲ್ಲೂಕಿನಲ್ಲಿ ಮುಂದುವರಿದ ಮಳೆ ಆರ್ಭಟ; ಜನಜೀವನ ಅಸ್ತವ್ಯಸ್ತ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2020, 1:22 IST
Last Updated 12 ಸೆಪ್ಟೆಂಬರ್ 2020, 1:22 IST
ಜಪ್ಪಿನಮೊಗರಿನಲ್ಲಿ ಮನೆಗಳಿಗೆ ನುಗ್ಗಿದ ನೀರು.
ಜಪ್ಪಿನಮೊಗರಿನಲ್ಲಿ ಮನೆಗಳಿಗೆ ನುಗ್ಗಿದ ನೀರು.   

ಮಂಗಳೂರು: ನಗರದಲ್ಲಿ ಬುಧವಾರ ರಾತ್ರಿಯಿಂದ ಆರಂಭವಾಗಿರುವ ಧಾರಾಕಾರ ಮಳೆ ಸತತ ಮೂರನೇ ದಿನವೂ ಮುಂದುವರಿದಿದೆ. ನಗರದ ಎಕ್ಕೂರು, ಜಪ್ಪಿನಮೊಗರು, ಕಲ್ಲಾಪು ಸೇರಿದಂತೆ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಶುಕ್ರವಾರ ಬೆಳಿಗ್ಗೆ ಜಪ್ಪಿನಮೊಗರು ಸುತ್ತಲಿನ ಹಲವು ಮನೆಗಳು, ಫ್ಲ್ಯಾಟ್‌ಗಳಿಗೆ ನೀರು ನುಗ್ಗಿದೆ.

ಎಕ್ಕೂರಿನಿಂದ ಜಪ್ಪಿನಮೊಗರು ಹೋಗುವ ರಾಷ್ಟ್ರೀಯ ಹೆದ್ದಾರಿ ಬದಿಯ ರಾಜಕಾಲುವೆಗಳು ಹಾಗೂ ಚರಂಡಿಗಳು ತುಂಬಿ ಹರಿಯುತ್ತಿವೆ. ಇಲ್ಲಿನ ಕಾಲುವೆ ನೀರು ತುಂಬಿ ಮಧ್ಯದಲ್ಲಿ ಒಡೆದಿದ್ದರಿಂದ ಗದ್ದೆ, ಮನೆಗಳು ಸೇರಿದಂತೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.

ಜಪ್ಪಿನಮೊಗರುವಿನಿಂದ ಕಲ್ಲಾಪುವ ರೆಗಿನ ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿಯ ಪ್ರದೇಶಗಳು ಜಲಾವೃತಗೊಂಡಿವೆ. ಹಲವಾರು ಮನೆಗಳು ಅಪಾಯದಲ್ಲಿವೆ. ಜಪ್ಪಿನಮೊಗರು ಕ್ರಾಸ್‌ನಿಂದ ಮಂಗಳೂರು ಕಡೆಗೆ ಬರುವ ರಸ್ತೆಯಲ್ಲಿನ ಮನೆಗಳು, ಫ್ಲಾಟ್‌ಗಳ ಒಳಗೆ ನೀರು ತುಂಬಿದೆ. ಅಗ್ನಿಶಾಮಕ ದಳ, ಪೊಲೀಸ್ ಇಲಾಖೆ ಸೇರಿದಂತೆ ರಕ್ಷಣಾ ತಂಡ ಸ್ಥಳದಲ್ಲಿದ್ದು, ದೋಣಿಯ ಮೂಲಕ ಜನರನ್ನು ರಕ್ಷಿಸುವ ಕಾರ್ಯ ನಡೆಯುತ್ತಿದೆ. ಬಹುಮಹಡಿ ಫ್ಲಾಟ್‌ಗಳಲ್ಲಿನ ತಳಭಾಗದ ಮನೆಗಳಿಗೆ ನೀರು ನುಗ್ಗಿದ್ದು, ಕೆಲವು ಮನೆಗಳವರು ಮೇಲಿನ ಮಹಡಿಗಳಲ್ಲಿ ಆಶ್ರಯ ಪಡೆದಿದ್ದಾರೆ.

ADVERTISEMENT

‘ಹಿರಿಯ ಅಧಿಕಾರಿಗಳ ಆದೇಶದ ಮೇರೆಗೆ ಬೆಳಿಗ್ಗೆ 8 ಗಂಟೆಗೆ ಈ ಪ್ರದೇಶಕ್ಕೆ ದೋಣಿಗಳೊಂದಿಗೆ ಬಂದಿದ್ದು, ಆ ಸಂದರ್ಭದಲ್ಲಿ 6 ಅಡಿಗಳಷ್ಟು ನೀರು ಮನೆಯೊಳಗೆ ನುಗ್ಗಿತ್ತು. ರಸ್ತೆಯಲ್ಲಿ ಸುಮಾರು 8 ಅಡಿಗಳಷ್ಟು ನೀರಿತ್ತು. ಕೂಡಲೇ 12 ಮಂದಿಯನ್ನು ರಕ್ಷಿಸಿ ಸುರಕ್ಷಿತ ತಾಣಗಳಿಗೆ ತಲುಪಿಸಿದ್ದೇವೆ’ ಎಂದು ಅಗ್ನಿಶಾಮಕ ದಳದ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

‘ಇನ್ನೂ ಎರಡು ದಿನಗಳ ಕಾಲ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿರುವುದರಿಂದ ರಕ್ಷಣಾ ತಂಡ ಸನ್ನದ್ಧವಾಗಿದೆ’ ಎಂದು ಮೇಯರ್ ದಿವಾಕರ ಪಾಂಡೇಶ್ವರ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ, ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಉಪ ಆಯುಕ್ತ ಡಾ.ಸಂತೋಷ್ ಕುಮಾರ್, ಮಂಗಳೂರು ಉಪ ವಿಭಾಗಾಧಿಕಾರಿ ಮದನ್ ಮೋಹನ್‌, ತಹಶೀಲ್ದಾರ್ ಗುರುಪ್ರಸಾದ್, ಮೇಯರ್ ದಿವಾಕರ ಪಾಂಡೇಶ್ವರ, ಪಾಲಿಕೆ ಸದಸ್ಯೆ ವೀಣಾ ಮಂಗಳಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಆತಂಕದಲ್ಲಿಯೇ ರಾತ್ರಿ ಕಳೆದ ಜನರು:

‘ಮಳೆ ಮುಂದುವರಿದಿದ್ದರಿಂದ ರಾತ್ರಿ ಒಂದು ಗಂಟೆಯ ವೇಳೆಗೆ ನೀರು ಏರಿಕೆಯಾಗಿದೆ. ಬೆಳಗಿನ ಜಾವ 3 ಗಂಟೆಯ ಸುಮಾರಿಗೆ ಇಲ್ಲಿನ ಹಲವು ಮನೆಗಳಿಗೆ, ಫ್ಲ್ಯಾಟ್‌ಗಳ ತಳಮಹಡಿಗೆ ನೀರು ನುಗ್ಗಲಾರಂಭಿಸಿತು. ನನ್ನ ಮನೆಯೂ ನೀರಿನಿಂದ ತುಂಬಿ ಹೋಗಿದೆ’ ಎಂದು ಜಪ್ಪಿನಮೊಗರು ನಿವಾಸಿ ದಯಾನಂದ ತಿಳಿಸಿದ್ದಾರೆ.

‘ಈ ಬಾರಿ ಇಲ್ಲಿನ ರಾಜಕಾಲುವೆಗಳ ಅತಿಕ್ರಮಣ ತೆರವುಗೊಳಿಸಿ, ಸ್ವಚ್ಛಗೊಳಿಸಲಾಗಿತ್ತು. ಅದಾಗ್ಯೂ ತೆಗ್ಗು ಪ್ರದೇಶವಾಗಿದ್ದರಿಂದ ಮಳೆ ನೀರು ಮನೆಗಳಿಗೆ ನುಗ್ಗಿದೆ. ಇಲ್ಲಿನ ಕುಟುಂಬಗಳು ಆತಂಕದಿಂದಲೇ ರಾತ್ರಿ ಕಳೆಯುವಂತಾಗಿತ್ತು. ರಕ್ಷಣಾ ತಂಡ ಸ್ಥಳಕ್ಕೆ ಬಂದಿದ್ದು, ರಕ್ಷಣಾ ಕಾರ್ಯ ನಡೆಸಿದೆ. 2018ರಲ್ಲಿ ಸಂಭವಿಸಿದ ಮಳೆಯನ್ನು ಈ ಘಟನೆಯನ್ನು ನೆನಪಿಸುತ್ತಿದೆ’ ಎಂದು ಹೇಳಿದ್ದಾರೆ.

ಮಣ್ಣಿನಡಿ ಸಿಲುಕಿದ 10 ಕಾರು

ನಗರದ ದೇರೆಬೈಲ್‌ ಕುಂಟಿಕಾನದ ಎಸ್ಸೆಲ್‌ ಹೈಟ್ಸ್‌ ಅಪಾರ್ಟ್‌ಮೆಂಟ್‌ನ ತಡೆಗೋಡೆ ಕುಸಿದು, ಮಣ್ಣಿನಡಿ 10ಕ್ಕೂ ಅಧಿಕ ಕಾರುಗಳು ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

ತಡೆಗೋಡೆ ಒಂದು ಭಾಗದ ಗೋಡೆ ಕುಸಿದು, ಹಿಂಭಾಗದ ಹಾಸ್ಟೆಲ್ ಆವರಣದೊಳಗೆ ಮಣ್ಣು ರಾಶಿಯಾಗಿ ಬಿದ್ದಿದೆ. ಇದರ ಮತ್ತೊಂದು ಭಾಗದ ಗೋಡೆಯು ಕುಸಿಯುವ ಭೀತಿಯಿದ್ದು, ಕಾರ್ಯಾಚರಣೆಗೆ ತೊಡಕಾಗಿದೆ. ಮಳೆಯೂ ಸುರಿಯುತ್ತಿದ್ದು, ಮತ್ತಷ್ಟು ಮಣ್ಣು ಕುಸಿಯುವ ಭೀತಿ ಇರುವುದರಿಂದ ಕಾರ್ಯಾಚರಣೆ ಹಿನ್ನಡೆ ಉಂಟಾಗಿದೆ.

ನೋಟಿಸ್‌ ಜಾರಿ: ತಡೆಗೋಡೆ ಕುಸಿದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪಾರ್ಟ್‌ಮೆಂಟ್‌ಗೆ ನೋಟಿಸ್‌ ಜಾರಿ ಮಾಡಿರುವ ಪಾಲಿಕೆ ಆಯುಕ್ತ ಅಕ್ಷಯ್‌ ಶ್ರೀಧರ್‌, ನಿಮ್ಮ ಕಟ್ಟಡವನ್ನು ವಾಸಕ್ಕೆ ಯೋಗ್ಯವಲ್ಲ ಎಂದು ಏಕೆ ಘೋಷಿಸಬಾರದು ಎಂಬುದಕ್ಕೆ 24 ಗಂಟೆಯೊಳಗೆ ವಿವರಣೆ ನೀಡುವಂತೆ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.