ADVERTISEMENT

ದ.ಕ ಧಾರಾಕಾರ ಮಳೆ: ಇಬ್ಬರು ಸಾವು

ವಿದ್ಯುತ್‌ ತಂತಿ ಸ್ಪರ್ಶಿಸಿ ಮಹಿಳೆ ಸಾವು, ಕಾರು ಕಾಲುವೆಗೆ ಉರುಳಿ ಚಾಲಕ ಸಾವು

​ಪ್ರಜಾವಾಣಿ ವಾರ್ತೆ
Published 29 ಮೇ 2025, 7:29 IST
Last Updated 29 ಮೇ 2025, 7:29 IST

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಬುಧವಾರ ದಿನವಿಡೀ ಮಳೆಯಾಗಿದೆ. ಸ್ವಲ್ಪ ಹೊತ್ತು ಧಾರಾಕಾರ ಸುರಿದರೆ, ನಂತರ ಸ್ವಲ್ಪ ಹೊತ್ತು ಹದವಾಗಿ ಸುರಿಯುತ್ತಿತ್ತು. ನಸುಕಿನಲ್ಲೇ ಶುರುವಾದ ಮಳೆ ಸಂಜೆವರೆಗೂ ಮುಂದುವರಿದಿತ್ತು. ಮಳೆಯಿಂದಾಗಿ ಜಿಲ್ಲೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ.     

ಮೂಡುಬಿದಿರೆ ಸಮೀಪದ ಇರುವೈಲಿನಲ್ಲಿ ತುಂಡಾಗಿ ಬಿದ್ದ ವಿದ್ಯುತ್ ತಂತಿಯನ್ನು ತುಳಿದು ಮಹಿಳೆಯೊಬ್ಬರು ವಿದ್ಯುತ್ ಅಘಾತದಿಂದ ಮೃತಪಟ್ಟಿದ್ದಾರೆ. ಮೃತರನ್ನು ಲಿಲ್ಲಿ ಡಿಸೋಜ (52) ಎಂದು ಗುರುತಿಸಲಾಗಿದೆ. ಗಾಳಿ ಮಳೆಗೆ ವಿದ್ಯುತ್ ತಂತಿ ತುಂಡಾಗಿ ಅವರ ಮನೆಯ ಕೊಟ್ಟಿಗೆಯ ಬಳಿ ನೆಲಕ್ಕೆ ಬಿದ್ದಿತ್ತು. ಅದನ್ನು ಗಮನಿಸದ ಮಹಿಳೆ ವಿದ್ಯುತ್ ತಂತಿ ಮೇಲೆ ಕಾಲಿಟ್ಟಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.

ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ನಗರದ ಕೊಟ್ಟಾರ ಬಳಿ ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದಲ್ಲಿರುವ ಮಳೆ ನೀರು ಹರಿಯುವ ಕಾಲುವೆಗೆ ಬಿದ್ದಿದೆ. ಕಾರು ಚಲಾಯಿಸುತ್ತಿದ್ದ ವಿಡಿಯೊಗ್ರಾಫರ್  ಮೃತಪಟ್ಟಿದ್ದಾರೆ. ಮೃತರನ್ನು ಕಾಸರಗೋಡು ಜಿಲ್ಲೆಯ ಉಪ್ಪಳದ ಸೂರ್ಯನಾರಾಯಣ (49) ಎಂದು ಗುರುತಿಸಲಾಗಿದೆ. 

ADVERTISEMENT

ಪಣಂಬೂರಿನ ನಂದನೇಶ್ವರ ದೇವಸ್ಥಾನದಲ್ಲಿ ಬುಧವಾರ ಹಮ್ಮಿಕೊಳ್ಳಲಾದ ಕಾರ್ಯಕ್ರಮದ ವಿಡಿಯೋಗ್ರಫಿ ಮಾಡಲು ತೆರಳುತ್ತಿದ್ದರು. ಅವರೇ ಚಲಾಯಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಹೆದ್ದಾರಿ ಪಕ್ಕದ ಕಾಲುವೆಗೆ ಉರುಳಿ ಬಿದ್ದಿತ್ತು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಹೆದ್ದಾರಿಯಿಂದ ಪಕ್ಕದ ಕಾಲುವೆಯನ್ನು ಬೇರ್ಪಡಿಸುವ ತಡೆಗೋಡೆ ಇಲ್ಲ. ಅಪಘಾತ ಸಂಭವಿಸುವಾಗ    ಮಳೆಯೂ ಬರುತ್ತಿತ್ತು. ಹಾಗಾಗಿ ಅವರು ಕಾರು ಚಲಾಯಿಸುವಾಗ  ನಿಯಂತ್ರಣ ಕಳೆದುಕೊಂಡು ಕಾಲುವೆಗೆ ಬಿದ್ದಿರಬಹುದು ಎಂದರು. 

ಸೂರ್ಯನಾರಾಯಣ ಅವರು ಉಡುಪಿಯಲ್ಲಿ ಸ್ಟುಡಿಯೊ ಒಂದರಲ್ಲಿ ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದರು. ಈಚೆಗೆ ಉಪ್ಪಳದಲ್ಲಿ ಸ್ವಂತ ಸ್ಟುಡಿಯೊ ಆರಂಭಿಸಿದ್ದರು.                     

ರೆಡ್‌ ಅಲರ್ಟ್‌: ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದ್ದು ಮೇ 29ರಂದು ಶಿಕ್ಷಣ ಸಂಸ್ಥೆಗಳು, ಟ್ಯೂಷನ್ ಕೇಂದ್ರಗಳು, ಅಂಗನವಾಡಿಗಳು, ಮದರಸಾಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಕೆ.ಇನ್ಬಶೇಖರ್ ಆದೇಶ ಹೊರಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.