ಮಂಗಳೂರು: ‘ನನಗೆ ಯಾರೂ ದಿಕ್ಕಿಲ್ಲ. ನನಗೆ ಹೊಟ್ಟೆ ಹೊರೆಯುವುದಕ್ಕಿಂತಲೂ ಮಳೆಯದೇ ಚಿಂತೆ. ಪ್ರತಿ ಸಲ ಮಳೆಯಾದಾಗಲೂ ಎದೆ ಡವಗುಡಲು ಶುರುವಾಗುತ್ತದೆ. ಮನೆಯ ಮಣ್ಣಿನ ಗೋಡೆ ಯಾವಾಗ ಬೀಳುತ್ತದೊ ಎಂಬ ಆತಂಕದಲ್ಲಿ ನಿದ್ದೆಯೇ ಬರುವುದಿಲ್ಲ...’
ಮಳೆ ಸಂತ್ರಸ್ತರಿಗಾಗಿ ಪಾಲಿಕೆ ಇಲ್ಲಿನ ಪುರಭವನದಲ್ಲಿ ಆರಂಭಿಸಿರುವ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಅತ್ತಾವರದ ಸರಸ್ವತಿ (65) ಅವರು ‘ಪ್ರಜಾವಾಣಿ’ ಬಳಿ ಭಾನುವಾರ ಅಳಲು ತೋಡಿಕೊಂಡಿದ್ದು ಹೀಗೆ.
ಅತ್ತಾವರ ವೈದ್ಯನಾಥ ದೇವಸ್ಥಾನದ ಸಮೀಪದಲ್ಲಿ ತೋಡಿನ ಪಕ್ಕದಲ್ಲಿರುವ ಜೋಪಡಿಯಲ್ಲಿ ಸರಸ್ವತಿಯವರು ಒಬ್ಬಂಟಿಯಾಗಿ ವಾಸವಾಗಿದ್ದಾರೆ.
‘ನನಗೆ ಗಂಡ, ಮಕ್ಕಳು ಇಲ್ಲ. ಕಡಲೆಕಾಯಿ ಮಾರಾಟ ಮಾಡಿ ಬದುಕು ಕಟ್ಟಿಕೊಂಡಿದ್ದೆ. ನಾಲ್ಕೈದು ವರ್ಷಗಳ ಹಿಂದೆ ತಮ್ಮ ತೀರಿಕೊಂಡ. ಆ ಬಳಿಕ ಕಡಲೆ ಮಾರುವುದನ್ನೂ ನಿಲ್ಲಿಸಿದ್ದೇನೆ. ಸ್ಥಳೀಯ ಹೋಟೆಲ್‌ನವರು ದಿನವೂ ಎರಡು ಹೊತ್ತಿನ ಊಟ ಕೊಡುತ್ತಾರೆ. ಹಿಂದೆ ನಾನಿರುವ ಮನೆಗೆ ತಿಂಗಳಿಗೆ ₹ 250 ಬಾಡಿಗೆ ಕೊಡುತ್ತಿದ್ದೆ. ಈಗ ಅದನ್ನೂ ಕೊಡುತ್ತಿಲ್ಲ’ ಎಂದು ಅವರು ತಿಳಿಸಿದರು.
‘ಈ ಸಲ ಮಳೆಗಾಲದಲ್ಲಿ ಮೂರು ಸಲ ಮಳೆ ನೀರು ಮನೆಯೊಳಗೆ ನುಗ್ಗಿದೆ. ಶನಿವಾರ ಸಂಜೆ ಸೊಂಟದೆತ್ತರಕ್ಕೆ ನೀರು ಬಂದಿತ್ತು. ಪಾಲಿಕೆಯವರು ಇಲ್ಲಿಗೆ ಕರೆತಂದು ಬಿಟ್ಟಿದ್ದಾರೆ. ಇಲ್ಲಿ ಊಟ ತಿಂಡಿಗೆ ವ್ಯವಸ್ಥೆ ಕಲ್ಪಿಸಿದ್ದಾರೆ’ ಎಂದರು.
ಉಟ್ಟ ಬಟ್ಟೆಯಲ್ಲೇ ಬಂದೆವು: ‘ಶನಿವಾರದ ಮಳೆಗೆ ಮನೆಯಲ್ಲಿದ್ದ ಸಾಮಗ್ರಿಗಳೆಲ್ಲ ನೀರುಪಾಲಾಗಿವೆ. ಬಟ್ಟೆ, ಬಕೆಟ್, ಪಾತ್ರೆಗಳೆಲ್ಲ ನೀರಿನಲ್ಲಿ ಕೊಚ್ಚಿ ಹೋಗಿವೆ. ಉಟ್ಟ ಬಟ್ಟೆಯಲ್ಲೇ ಇಲ್ಲಿಗೆ ಬಂದಿದ್ದೇವೆ. ಮನೆಯಲ್ಲಿ ಏನೆಲ್ಲ ಸಾಮಗ್ರಿ ಉಳಿದಿದೆ ಎಂದೂ ಗೊತ್ತಿಲ್ಲ. ಈ ಸಣ್ಣಮಕ್ಕಳನ್ನು ಹಿಡಿದುಕೊಂಡು ಎಲ್ಲಿಗೆ ಹೋಗಲಿ’ ಎಂದು ಅತ್ತಾವರದ ಶ್ರೀಕೃಷ್ಣ ಭಜನಾ ಮಂದಿರ ಬಳಿಯ ನಿವಾಸಿ ಸುಶೀಲಾ ಪ್ರಶ್ನಿಸಿದರು.
ಸ್ಥಳೀಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸಿಬ್ಬಂದಿಯಾಗಿರುವ ಅವರು ಮಗಳು (ಸರಿತಾ) ಹಾಗೂ ಇಬ್ಬರು ಮೊಮ್ಮಕ್ಕಳ (ದಿಯಾ ಮತ್ತು ನಿಹಾನ್) ಜೊತೆ ಅತ್ತಾವರಲ್ಲಿ ನೆಲೆಸಿದ್ದಾರೆ.
‘ಮಗಳನ್ನು ಡ್ಯಾನ್ಸ್ ತರಗತಿಗೆ ಬಿಟ್ಟು, ಮನೆಗೆ ಮರಳುವಷ್ಟರಲ್ಲಿ ಮೊಣಕಾಲಿನಷ್ಟು ಎತ್ತರಕ್ಕೆ ನೀರು ಬಂದಿತ್ತು. ಕೆಲವೇ ನಿಮಿಷಗಳಲ್ಲಿ ನೀರಿನ ಮಟ್ಟವು ಸೊಂಟದೆತ್ತರಕ್ಕೆ ತಲುಪಿತು. ಐದಾರು ವರ್ಷಗಳ ಹಿಂದೆ ಮನೆಯೊಳಗೆ ನೀರು ಬಂದಿತ್ತು. ಆದರೆ ಯಾವತ್ತೂ ಇಷ್ಟೊಂದು ನೀರು ಬಂದಿಲ್ಲ’ ಎಂದು ಸರಿತಾ ತಿಳಿಸಿದರು.
‘ನಮ್ಮ ಮನೆ ಮಳೆ ನೀರು ಹರಿಯುವ ತೋಡಿನ ಪಕ್ಕದಲ್ಲೇ ಇದೆ. ಮನೆಯ ಗೋಡೆಯೂ ಶಿಥಿಲವಾಗಿದೆ. ತೋಡಿನಲ್ಲಿ ಶೌಚಾಲಯದ ನೀರೂ ಹರಿಯುತ್ತದೆ. ಅದರ ವಸರು ಮನೆಯೊಳಗೂ ಬರುತ್ತದೆ. ಮಳೆಗಾಲದಲ್ಲಿ ನೀರಿನ ಚಿಂತೆ. ಮಳೆ ಕಡಿಮೆಯಾದರೆ ದುರ್ವಾಸನೆಯುಕ್ತ ವಸರಿನ ಚಿಂತೆ’ ಎಂದು ಅವರು ಸಮಸ್ಯೆ ಹೇಳಿಕೊಂಡರು.
ಮನೆಯಲ್ಲಿದ್ದ ಧವಸ ಧಾನ್ಯಗಳೆಲ್ಲ ಒದ್ದೆಯಾಗಿವೆ. ಗೋಡೆಗೆ ಜೋತು ಹಾಕಿದ್ದ ಮೊಮ್ಮಗಳ ಶಾಲೆಯ ಚೀಲವೂ ನೀರಿನಲ್ಲಿ ಮುಳುಗುತ್ತದೆಯೇನೋ ಎಂದು ಚಿಂತೆಯಾಗಿದೆಸುಶೀಲಾ ಅತ್ತಾವರ ನಿವಾಸಿ
ಈ ಮಳೆ ನಿಲ್ಲುವ ಲಕ್ಷಣ ಕಾಣಿಸುತ್ತಿಲ್ಲ. ಮಳೆ ನಿಂತರೂ ಮನೆಗೆ ಮರಳುತ್ತೇನೆ ಎಂಬ ನಂಬಿಕೆ ಇಲ್ಲ. ಮಳೆ ಮುಗಿಯುವಷ್ಟರಲ್ಲಿ ಮನೆ ಇರುತ್ತದೋ ಇಲ್ಲವೋಸರಸ್ವತಿ ಅತ್ತಾವರ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.