ADVERTISEMENT

ದಕ್ಷಿಣ ಕನ್ನಡದಲ್ಲಿ ನದಿಗಳ ರುದ್ರನರ್ತನ: ನಲುಗಿದ ಬದುಕು

ಸಂತ್ರಸ್ತ ಕುಟುಂಬಗಳಿಗೆ ಕಾಳಜಿ ಕೇಂದ್ರಗಳಲ್ಲಿ ಆಶ್ರಯ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2020, 4:22 IST
Last Updated 10 ಆಗಸ್ಟ್ 2020, 4:22 IST
ಸಂತ್ರಸ್ತರು ಉಳಿದಿರುವ ಮಂಗಳೂರಿನ ಆರ್ಯ ಮರಾಠಾ ಭವನಕ್ಕೆ ಭಾನುವಾರ ಭೇಟಿ ನೀಡಿದ ಶಾಸಕ ಡಿ.ವೇದವ್ಯಾಸ್‌ ಕಾಮತ್‌, ವ್ಯವಸ್ಥೆಯ ಕುರಿತು ಮಾಹಿತಿ ಪಡೆದರು.
ಸಂತ್ರಸ್ತರು ಉಳಿದಿರುವ ಮಂಗಳೂರಿನ ಆರ್ಯ ಮರಾಠಾ ಭವನಕ್ಕೆ ಭಾನುವಾರ ಭೇಟಿ ನೀಡಿದ ಶಾಸಕ ಡಿ.ವೇದವ್ಯಾಸ್‌ ಕಾಮತ್‌, ವ್ಯವಸ್ಥೆಯ ಕುರಿತು ಮಾಹಿತಿ ಪಡೆದರು.   

ಮಂಗಳೂರು: ವಾರದಿಂದ ಜಿಲ್ಲೆಯಾದ್ಯಂತ ಸುರಿಯುತ್ತಿದ್ದ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ನೇತ್ರಾವತಿ, ಕುಮಾರಧಾರ, ಫಲ್ಗುಣಿ ನದಿಗಳಲ್ಲಿ ನೀರು ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ಆಸುಪಾಸಿನ ಹಲವು ಮನೆಗಳಿಗೆ ನೀರು ನುಗ್ಗಿದೆ. ನೆರೆ ಹಾವಳಿಯ ಭೀತಿಗೊಳಗಾದ ಹಲವು ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಈ ಮಧ್ಯೆ ಹಲವು ಮಂದಿಗೆ ಶಾಲೆಗಳಲ್ಲಿ ತೆರೆಯಲಾದ ಕಾಳಜಿ ಕೇಂದ್ರಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ.

ಘಟ್ಟ ಪ್ರದೇಶಗಳಲ್ಲೂ ನಿರಂತರ ಮಳೆ ಸುರಿದ ಪರಿಣಾಮ ಕರಾವಳಿಯ ನದಿ ತೀರದ ಹಲವು ತಗ್ಗು ಪ್ರದೇಶಗಳಿಗೆ, ಮನೆ, ಅಂಗಡಿಗಳಿಗೆ, ಕೃಷಿ ಜಮೀನಿಗೆ ನೀರು ನುಗ್ಗಿದೆ. ನಗರ ಮತ್ತು ಗ್ರಾಮಾಂತರ ಪ್ರದೇಶದ ಹಲವೆಡೆ ವಿದ್ಯುತ್ ಕಂಬಗಳು, ಮರಗಳು ನೆಲಕ್ಕೆ ಉರುಳಿದ್ದು, ವಿದ್ಯುತ್‌ ವ್ಯತ್ಯಯವಾಗಿತ್ತು. ರಸ್ತೆಗೆ ಅಡ್ಡವಾಗಿ ಮರಗಳು ಉರುಳಿ ಬಿದ್ದು, ವಾಹನಗಳ ಸಂಚಾರಕ್ಕೂ ತೊಂದರೆ ಉಂಟಾಗಿತ್ತು.

ಬಜ್ಪೆ ಸಮೀಪದ ಆದ್ಯಪಾಡಿ ಮತ್ತು ಕೊಳಂಬೆಯ ಎರಡು ಹಟ್ಟಿಗೆ ನೀರು ನುಗ್ಗಿದೆ. ಹಟ್ಟಿಯಲ್ಲಿದ್ದ 16 ಜಾನುವಾರುಗಳನ್ನು ಸ್ಥಳಾಂತರಿಸಲಾಗಿದೆ. ಗುರುಪುರ ಕೊಟ್ಟಾರಿಗುಡ್ಡೆಯಲ್ಲಿ ತೆಂಗಿನ ಮರ ಬಿದ್ದು ಮನೆಗೆ ಹಾನಿಯಾಗಿದೆ. ಉಳ್ಳಾಲ, ಸೋಮೇಶ್ವರ-ಉಚ್ಚಿಲ, ಪಣಂಬೂರು, ಬೈಕಂಪಾಡಿ ಸಹಿತ ಕಡಲ ತೀರದ ಹಲವು ಕಡೆ ಸಮುದ್ರದ ಅಲೆಗಳು ರೌದ್ರಾವತಾರ ತಾಳುತ್ತಿದೆ. ಕಡಲ ತೀರದ ಮನೆಗಳ ಗೋಡೆಗೆ ಅಪ್ಪಳಿಸುತ್ತಿದೆ. ಇದರಿಂದ ಹಲವು ಮನೆಗಳಿಗೆ ಹಾನಿಯಾಗಿದೆ.

ADVERTISEMENT

ಕಾಳಜಿ ಕೇಂದ್ರ: ನಗರದ ಜಪ್ಪಿನಮೊಗರು ಮತ್ತು ಅತ್ತಾವರದಲ್ಲಿ ಸುಮಾರು 15 ಕುಟುಂಬಗಳನ್ನು ಸ್ಥಳೀಯ ಆರ್ಯ ಮರಾಠ ಸಂಘದ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಕಲ್ಲಾಪು ಬಳಿಯೂ ನೀರಿನ ಮಟ್ಟ ಅಪಾಯದಲ್ಲಿದ್ದು, ಪರಿಸರದ ನಿವಾಸಿಗಳು ಮನೆ ತೆರವು ಮಾಡಲು ಸೂಚಿಸಲಾಗಿದೆ. ಸೋಮೇಶ್ವರದಲ್ಲೂ 1 ಕಾಳಜಿ ಕೇಂದ್ರ ತೆರೆಯಲು ಸಿದ್ಧತೆ ನಡೆಸಲಾಗಿದೆ. ತಾಲ್ಲೂಕಿನಲ್ಲಿ ಸದ್ಯ 6 ಕಾಳಜಿ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಮಂಗಳೂರು ತಹಶೀಲ್ದಾರ್ ಗುರುಪ್ರಸಾದ್ ತಿಳಿಸಿದ್ದಾರೆ.

ತಣ್ಣೀರುಬಾವಿಯಲ್ಲಿ ನಿರ್ಮಿಸುತ್ತಿರುವ ಸಿಹಿ ನೀರಿನ ಘಟಕಕ್ಕೆ ಸಮುದ್ರ ನೀರು ನುಗ್ಗಿದ್ದರಿಂದ ಅಪಾಯದ ಭೀತಿ ಎದುರಿಸುತ್ತಿದ್ದ ಆಸುಪಾಸಿನ 15ಕ್ಕೂ ಅಧಿಕ ಮನೆಗಳ ಜನರನ್ನು ಕೂಳೂರಿನ ಶಾಲೆಗೆ ಸ್ಥಳಾಂತರಿಸಲಾಗಿದೆ. ಕೂಳೂರು ಸಮೀಪದ ನದಿ ತಟದಲ್ಲಿ ತೆಪ್ಪದಲ್ಲಿ ಮೀನು ಹಿಡಿದು ಜೀವನ ನಡೆಸುತ್ತಿದ್ದ 15 ಮಂದಿಗೆ ಬೈಕಂಪಾಡಿಯ ಅಂಗರಗುಂಡಿಯಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ.

ಸ್ವಯಂ ಸೇವಕರ ತಂಡ: ಜಿಲ್ಲಾಡಳಿತದ ನೇತೃತ್ವದಲ್ಲಿ ಪೊಲೀಸ್ ಇಲಾಖೆ, ಅಗ್ನಿಶಾಮಕ ದಳ, ಗೃಹರಕ್ಷಕ ದಳ, ಮುಳುಗುತಜ್ಞರ ತಂಡವು ಅಲ್ಲಲ್ಲಿ ಕಾರ್ಯಾಚರಣೆಗೆ ನಡೆಸಿವೆ. ಜಿಲ್ಲೆಯ ಹಲವೆಡೆ ಸಾಮಾಜಿಕ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳ ಕಾರ್ಯಕರ್ತರನ್ನು ಒಳಗೊಂಡಂತೆ ಸ್ವಯಂ ಸೇವಕರ ತಂಡಗಳು ಅಪಾಯಕಾರಿ ಸ್ಥಳಗಳಲ್ಲಿ ನಿಂತು ಸಂಕಷ್ಟಕ್ಕೆ ಸಿಲುಕಿದ್ದ ಜನರನ್ನು ಸ್ಥಳಾಂತರಿಸಿದವು.

ಕಾಸರಗೋಡು: ಭೂಕುಸಿತ, ಪ್ರವಾಹ

ಕಾಸರಗೋಡು ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ತೇಜಸ್ವಿನಿ, ಚಂದ್ರಗಿರಿ, ಚೈತ್ರವಾಹಿನಿ ನದಿಗಳು ತುಂಬಿ ಹರಿಯುತ್ತಿವೆ. ಗುಡ್ಡ ಪ್ರದೇಶಗಳಲ್ಲಿ ಭೂಕುಸಿತ ಭೀತಿ ಉಂಟಾಗಿದೆ.

ಜಿಲ್ಲೆಯ 76 ಕುಟುಂಬಗಳನ್ನು ಕಾಳಜಿ ಕೇಂದ್ರಗಳಿಗೆ ಮತ್ತು 859 ಕುಟುಂಬಗಳನ್ನು ಸಂಬಂಧಿಕರ ಮನೆಗಳಿಗೆ ಸೇರಿದಂತೆ 3,420 ಜನರನ್ನ ಸ್ಥಳಾಂತರಿಸಲಾಗಿದೆ. ಹಲವೆಡೆ ಕೃಷಿಗೆ ಹಾನಿಯಾಗಿದ್ದು, ಇಲ್ಲಿಯವರೆಗೆ 10 ಮನೆಗಳು ಭಾಗಶಃ ನಾಶವಾಗಿವೆ. ಪೊಯಿನಾಚಿ-ಬಂತದುಕ್ಕ ರಸ್ತೆ ಪುನಕ್ಕಲ್‌ನಲ್ಲಿ ಭೂಕುಸಿತ ಉಂಟಾಗಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಕಿನನೂರ ಗ್ರಾಮದ ಕರಿಯಂಕೋಡ್ ತೇಜಸ್ವಿನಿ ನದಿಯಲ್ಲಿ ನೀರು ಹೆಚ್ಚಾಗಿದ್ದರಿಂದ 34 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ವೆಲ್ಲರಿಕ್ಕುಂದ ತಾಲ್ಲೂಕಿನಲ್ಲಿ 8.5 ಸೆಂ.ಮೀ. ಮಳೆಯಾಗಿದೆ.

ತುಂಬಿದ ನದಿಯಲ್ಲಿ ಮೋಜು

ಬಂಟ್ವಾಳದ ನೇತ್ರಾವತಿ ನದಿಯಲ್ಲಿ ಯುವಕರು ಮೋಜು ಮಸ್ತಿಯಲ್ಲಿ ತೊಡಗಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ.

ಪಾಣೆಮಂಗಳೂರಿನಲ್ಲಿ ಸ್ಥಳೀಯ ಯುವಕರು ಸೇತುವೆಯಿಂದ ನೇತ್ರಾವತಿ ನದಿಗೆ ಹಾರಿ ಈಜಾಡಿ ಸಾಹಸ ನಡೆಸಿದರು. ಭಾನುವಾರ ನದಿಯ ಪ್ರವಾಹ ಅಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದ್ದು, ಸೇತುವೆಯಿಂದ ಯುವಕರು ನದಿಗೆ ಹಾರಿ ಈಜಾಡುತ್ತಿದ್ದರು.

ನದಿ ಪಾತ್ರದ ಜನ ಎಚ್ಚರಿಕೆಯಿಂದ ಇರುವಂತೆ ಹಾಗೂ ನದಿಗೆ ಇಳಿಯದಂತೆ ಜಿಲ್ಲಾಡಳಿತ ಸೂಚಿಸಿದೆ. ಅದಾಗ್ಯೂ ಯುವಕರು ಈ ರೀತಿ ಅಪಾಯಕಾರಿ ಸಾಹಸ ಮಾಡುತ್ತಿದ್ದಾರೆ. ಅನಾಹುತ ಆಗುವ ಮೊದಲು ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು ಎಂದು ಸ್ಥಳೀಯರ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.