ADVERTISEMENT

ಅಣೆಕಟ್ಟೆಗಳು ಭರ್ತಿ: ಹೆಚ್ಚುವರಿ ನೀರು ಹೊರಕ್ಕೆ

ದ.ಕ. ಜಿಲ್ಲೆಯಲ್ಲಿ ವಾಡಿಕೆಗಿಂತ ಅಧಿಕ ಮಳೆ; 17 ಮನೆಗಳಿಗೆ ಭಾಗಶಃ ಹಾನಿ

​ಪ್ರಜಾವಾಣಿ ವಾರ್ತೆ
Published 19 ಜೂನ್ 2021, 3:40 IST
Last Updated 19 ಜೂನ್ 2021, 3:40 IST
ಧರ್ಮಸ್ಥಳದ ಬಳಿ ನೇತ್ರಾವತಿ ನದಿ ತುಂಬಿ ಹರಿಯುತ್ತಿದೆ.
ಧರ್ಮಸ್ಥಳದ ಬಳಿ ನೇತ್ರಾವತಿ ನದಿ ತುಂಬಿ ಹರಿಯುತ್ತಿದೆ.   

ಮಂಗಳೂರು: ಜಿಲ್ಲೆಯಾದ್ಯಂತ ಕಳೆದ ಕೆಲದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಶುಕ್ರವಾರ ಮಳೆಯ ಅಬ್ಬರ ತಗ್ಗಿದೆ. ಜಿಲ್ಲೆಯಲ್ಲಿ ಜೂನ್‌ 18 ರಂದು 3.9 ಸೆಂ.ಮೀ. ವಾಡಿಕೆ ಮಳೆ ಇದ್ದು, 4.6 ಸೆಂ.ಮೀ. ಮಳೆಯಾಗಿದೆ.

ಮಂಗಳೂರು ತಾಲ್ಲೂಕಿನಲ್ಲಿ 5, ಬಂಟ್ವಾಳದಲ್ಲಿ 7, ಪುತ್ತೂರಿನಲ್ಲಿ 1, ಕಡಬ ತಾಲ್ಲೂಕಿನಲ್ಲಿ 4 ಸೇರಿದಂತೆ ಜಿಲ್ಲೆಯಲ್ಲಿ 24 ಗಂಟೆಗಳಲ್ಲಿ ಒಟ್ಟು 17 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಜನವರಿಯಿಂದ ಇದುವರೆಗೆ ಜಿಲ್ಲೆಯಲ್ಲಿ ಒಟ್ಟು 51 ಮನೆಗಳು ಪೂರ್ಣ ಹಾಗೂ 300 ಮನೆಗಳು ಭಾಗಶಃ ಹಾನಿಗೆ ಒಳಗಾಗಿವೆ.

ಏಪ್ರಿಲ್‌ನಿಂದ ಈವರೆಗೆ ಜಿಲ್ಲೆಯಲ್ಲಿ ಒಟ್ಟು 2,687 ವಿದ್ಯುತ್‌ ಕಂಬ ಹಾಗೂ 171 ಪರಿವರ್ತಕಗಳು ಹಾಳಾಗಿವೆ. ಅಲ್ಲದೇ 59 ಕಿ.ಮೀ. ಉದ್ದದ ವಿದ್ಯುತ್‌ ಮಾರ್ಗಕ್ಕೆ ಹಾನಿಯಾಗಿದೆ ಎಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಪಶ್ಚಿಮ ಘಟ್ಟದಲ್ಲಿ ಉತ್ತಮ ಮಳೆ ಆಗಿದ್ದರಿಂದ ನದಿಗಳಲ್ಲಿ ನೀರಿನ ಹರಿವು ಹೆಚ್ಚಳವಾಗಿದೆ. ಬಂಟ್ವಾಳದಲ್ಲಿ ನೇತ್ರಾವತಿ ನದಿ ನೀರಿನ ಗರಿಷ್ಠ ಮಟ್ಟ 8.5 ಮೀಟರ್ ಇದ್ದು, ಶುಕ್ರವಾರ 5.2 ಮೀಟರ್ ದಾಖಲಾಗಿತ್ತು. ಉಪ್ಪಿನಂಗಡಿಯಲ್ಲಿ ನೇತ್ರಾವತಿ ನದಿ ನೀರಿನ ಗರಿಷ್ಠ ಮಟ್ಟ 31.5 ಮೀಟರ್‌ ಇದ್ದು, ಶುಕ್ರವಾರ 26 ಮೀಟರ್ ನೀರು ಹರಿಯಿತು. ಗುಂಡ್ಯಾ ನದಿಯ ಗರಿಷ್ಠ ಮಟ್ಟ 5 ಮೀಟರ್‌ ಇದ್ದು, ಶುಕ್ರವಾರ 4 ಮೀಟರ್‌ ದಾಖಲಾಗಿದೆ.

ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿರುವುದರಿಂದ ಅಣೆಕಟ್ಟೆಗಳಲ್ಲಿ ಗೇಟ್‌ ತೆರೆದು ನೀರನ್ನು ಹೊರಗೆ ಬಿಡಲಾಗುತ್ತಿದೆ. ಶಂಭೂರಿನ ಎಎಂಆರ್ ಜಲಾಶಯಕ್ಕೆ 38,756 ಕ್ಯುಸೆಕ್‌ ಒಳಹರಿವಿದ್ದು, ಅಷ್ಟೇ ಪ್ರಮಾಣದ ನೀರನ್ನು ಹೊರಗೆ ಬಿಡಲಾಗಿದೆ.

ನಗರಕ್ಕೆ ನೀರು ಪೂರೈಸುವ ತುಂಬೆ ಕಿಂಡಿ ಅಣೆಕಟ್ಟೆಗೆ 38,756 ಕ್ಯುಸೆಕ್‌ ನೀರು ಹರಿದು ಬರುತ್ತಿದ್ದು, 14 ಗೇಟ್‌ಗಳನ್ನು ತೆರೆದು ಅಷ್ಟೇ ಪ್ರಮಾಣದ ನೀರನ್ನು ನದಿಗೆ ಬಿಡಲಾಗುತ್ತಿದೆ. ಈ ಅಣೆಕಟ್ಟೆಯ ಗರಿಷ್ಠ ಸಾಮರ್ಥ್ಯ 7 ಮೀಟರ್‌ ಇದ್ದು, ಸದ್ಯಕ್ಕೆ 4.50 ಮೀಟರ್ ನೀರನ್ನು ಸಂಗ್ರಹಿಸಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ. ನೀರಕಟ್ಟೆಯ ಸಾಗರ ಜಲಾಶಯದ ಗರಿಷ್ಠ ಮಟ್ಟ 38 ಮೀಟರ್ ಇದ್ದು, 32.30 ಮೀಟರ್ ನೀರು ಸಂಗ್ರಹಿಸಲಾಗಿದೆ.

ರಕ್ಷಣಾ ತಂಡ ಸನ್ನದ್ಧ
ಜಿಲ್ಲೆಯಲ್ಲಿ ಮಳೆಯಿಂದ ಉಂಟಾಗುವ ಹಾನಿಯ ಸಂದರ್ಭದಲ್ಲಿ ರಕ್ಷಣಾ ಕಾರ್ಯಕ್ಕೆ ತಂಡಗಳನ್ನು ಸಜ್ಜುಗೊಳಿಸಲಾಗಿದೆ.
ಜಿಲ್ಲೆಯಲ್ಲಿ 24 ಜನರ ಎಸ್‌ಡಿಆರ್‌ಎಫ್‌ ತಂಡ, 50 ಜನರ ಪೌರ ರಕ್ಷಣಾ ತಂಡ ಹಾಗೂ 20 ಜನರ ಎನ್‌ಡಿಆರ್‌ಎಫ್‌ ತಂಡಗಳನ್ನು ಸಜ್ಜುಗೊಳಿಸಲಾಗಿದೆ.

ಜಿಲ್ಲೆಯಲ್ಲಿ 16 ಬೋಟ್‌ಗಳನ್ನು ಒದಗಿಸಲಾಗಿದ್ದು, ತುರ್ತು ರಕ್ಷಣಾ ಕಾರ್ಯಾಚರಣೆಗೆ ಬಳಸಿಕೊಳ್ಳಲು ಸೂಚನೆ ನೀಡಲಾಗಿದೆ.

ಶನಿವಾರ, ಭಾನುವಾರ ರೆಡ್‌ ಅಲರ್ಟ್‌
ಶನಿವಾರ ಬೆಳಿಗ್ಗೆ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಬಳಿಕ ಆರೆಂಜ್ ಅಲರ್ಟ್ ಇರಲಿದೆ. ಭಾನುವಾರ ರೆಡ್ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮಂಗಳೂರಿನಿಂದ ಕಾರವಾರದವರೆಗೆ ಸಮುದ್ರಲ್ಲಿ 3.5- 4.8 ಮೀ. ಎತ್ತರದ ಅಲೆಗಳು ದಡಕ್ಕೆ ಅಪ್ಪಳಿಸುವ ಸಾಧ್ಯತೆ ಇದೆ. ಶನಿವಾರ ಗಂಟೆಗೆ 40-50 ಕಿ.ಮೀ. ವೇಗದಲ್ಲಿ ಬಲವಾದ ಗಾಳಿ ಬೀಸಲಿದೆ. ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಎಚ್ಚರಿಕೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.