ADVERTISEMENT

ಉಜಿರೆ | ಮಳೆಯ ಸಿಂಚನ: ರಾಗರಸದ ರೋಮಾಂಚನ

​ಪ್ರಜಾವಾಣಿ ವಾರ್ತೆ
Published 25 ಮೇ 2025, 18:31 IST
Last Updated 25 ಮೇ 2025, 18:31 IST
ಕರುಂಬಿತ್ತಿಲ್ ಸಂಗೀತ ಶಿಬಿರದ ಸಮಾರೋಪ ಸಮಾರಂಭದಲ್ಲಿ ವಿದ್ಯಾಭೂಷಣ ಅವರು ಕಚೇರಿ ನಡೆಸಿಕೊಟ್ಟರು
ಕರುಂಬಿತ್ತಿಲ್ ಸಂಗೀತ ಶಿಬಿರದ ಸಮಾರೋಪ ಸಮಾರಂಭದಲ್ಲಿ ವಿದ್ಯಾಭೂಷಣ ಅವರು ಕಚೇರಿ ನಡೆಸಿಕೊಟ್ಟರು   

ಉಜಿರೆ: ಧಾರಾಕಾರ ಮಳೆ ಸೃಷ್ಟಿಸಿದ್ದ ತಣ್ಣನೆ ಹವೆಯಲ್ಲಿ ಸೇರಿದ್ದ ಸಹೃದಯರಲ್ಲಿ ರಾಗರಸದ ಹೊಳೆ. ಕಲಾಪ್ರಿಯರು ಮತ್ತು ಸಂಗೀತ ವಿದ್ವಾನರ ಮನದ ಶ್ರುತಿ ಒಂದಾದ ವಾತಾವರಣದಲ್ಲಿ ಕರುಂಬಿತ್ತಿಲ್‌ ಸಂಗೀತ ಶಿಬಿರಕ್ಕೆ ಬೆಚ್ಚನೆಯ ತೆರೆ.

ಇಲ್ಲಿನ ಕೊಕ್ಕಡದಲ್ಲಿ ಕರುಂಬಿತ್ತಿಲ್‌ ಕುಟುಂಬದವರು ಆಯೋಜಿಸಿದ್ದ ಆರು ದಿನಗಳ ಶಿಬಿರ ಭಾನುವಾರ ಕುಂಭದ್ರೋಣ ಮಳೆಯ ನಡುವೆಯೇ ಸಮಾರೋಪಗೊಂಡಿತು. ಕೊನೆಯ ದಿನದ ಕಾರ್ಯಕ್ರಮಕ್ಕೆ ಗಾಯಕ ವಿದ್ಯಾಭೂಷಣ ಅವರ ಸಂಗೀತ ಕಚೇರಿ ಆಮೋದವಿತ್ತು.

ಸುತ್ತ ಮಳೆಯ ರಭಸದ ಸಿಂಚನವಾಗುತ್ತಿದ್ದರೆ, ವೇದಿಕೆಯಲ್ಲಿ ವಿದ್ಯಾಭೂಷಣರ ಸಂಗೀತ ಧಾರೆಯ ಸಿಂಚನ. ಶಿಬಿರದಲ್ಲಿ ಪಡೆದ ಸಂಗೀತ ಕಲಿಕೆಯ ಅನುಭವಕ್ಕೆ ಮಳೆ ವಿಶೇಷ ಕಳೆ ತುಂಬಿತು ಎಂದು ಶಿಬಿರಾರ್ಥಿಗಳು ಅಭಿಪ್ರಾಯಪಟ್ಟರು. 

ADVERTISEMENT

ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ವಿದ್ಯಾಭೂಷಣ ಅವರು ‘ವಿದ್ಯೆಯನ್ನು ಗುರುಗಳು ಕಲಿಸಿದರಷ್ಟೇ ಸಾಲದು. ವಿದ್ಯಾರ್ಥಿಯ ಪರಿಶ್ರಮವೂ ವಿಶೇಷವಾಗಿ ಬೇಕು. ಕಲಿಕಾರ್ಥಿ ಸ್ವಾಧ್ಯಾಯ ನಿರತನಾಗಬೇಕು, ಅವರಲ್ಲಿ ಸಮರ್ಪಣಾ ಮನೋಭಾವ ಇರಬೇಕು’ ಎಂದು ಹೇಳಿದರು.

‘ಪಾಠ, ಪರಿಶ್ರಮ, ಸ್ವಾಧ್ಯಾಯ ಮತ್ತು ದೈವಾನುಗ್ರಹದಲ್ಲಿ ವಿದ್ಯೆ ಒಲಿಯುತ್ತದೆ. ಮಕ್ಕಳಿಗೆ ವಿದ್ಯೆಯನ್ನು ಹೇಳಿಕೊಡುವ ಜೊತೆಯಲ್ಲಿ ಪೂರಕ ಮತ್ತು ಪ್ರೇರಕ ವಾತಾವರಣ ನಿರ್ಮಿಸುತ್ತಿರುವ ಕರುಂಬಿತ್ತಿಲ್‌ ಶಿಬಿರ ವಿಶಿಷ್ಟ’ ಎಂದು ಅವರು ಹೇಳಿದರು.

ಶಿಬಿರದ ಆಯೋಜಕ, ಸಂಗೀತ ಗುರು ವಿದ್ವಾನ್‌ ವಿಠಲ ರಾಮಮೂರ್ತಿ ಮಾತನಾಡಿ, ‘ಮನೆದೇವರ ಪೂಜೆಯ ರೀತಿಯಲ್ಲಿ ಸರಳವಾಗಿ ಶಿಬಿರ ಆರಂಭಿಸಲಾಗಿತ್ತು. ಅದು 25ನೇ ವರ್ಷಕ್ಕೆ ಕಾಲಿಟ್ಟಿದ್ದು, ಇಷ್ಟೊಂದು ವಿಸ್ತೃತವಾಗಿ ಬೆಳೆದಿದೆ. ಮುಂದಿನ ತಲೆಮಾರಿನ ಮಕ್ಕಳು ಸಂಗೀತದ ಯಾನವನ್ನು ಮುಂದುವರಿಸುವ ನಂಬಿಕೆ ಇದೆ’ ಎಂದು ಹೇಳಿದರು.

ವಿದುಷಿ ಕೃಷ್ಣವೇಣಿ ಅಮ್ಮ, ವಿದ್ವಾನ್‌ ಉಡುಪಿ ಗೋಪಾಲಕೃಷ್ಣನ್‌, ವಿದ್ವಾನ್‌ ಶ್ರೀಮುಷ್ಣಂ ರಾಜಾರಾವ್‌, ವಿದ್ವಾನ್‌ ನಾಗೈ ಮುರಳೀಧರನ್‌, ಜಿಲ್ಲಾ ಆರೋಗ್ಯಾಧಿಕಾರಿ ಡಾ.ತಿಮ್ಮಯ್ಯ ಎಂ.ಆರ್‌ ಪಾಲ್ಗೊಂಡಿದ್ದರು. ಶಿಬಿರದಲ್ಲಿ ಕಲಿತ ಕೃತಿಗಳನ್ನು ಶಿಬಿರಾರ್ಥಿಗಳು ಹಾಡಿದರು. ಮೃದಂಗ ವಾದನದ ಪ್ರಸ್ತುತಿಯೂ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.