ADVERTISEMENT

ಮಂಗಳೂರು: ಮುಳುಗಡೆ ಪ್ರದೇಶಗಳಲ್ಲಿ ನಿರಂತರ ನಿಗಾ

ಮಳೆ: ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಪ್ರಭಾರ ಜಿಲ್ಲಾಧಿಕಾರಿ ಸೂಚನೆ

​ಪ್ರಜಾವಾಣಿ ವಾರ್ತೆ
Published 21 ಮೇ 2025, 16:12 IST
Last Updated 21 ಮೇ 2025, 16:12 IST
ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಪ್ರಭಾರ ಜಿಲ್ಲಾಧಿಕಾರಿ ಡಾ.ಆನಂದ ಕೆ. ಮಾತನಾಡಿದರು. ಗೀತಾ ಕುಲಕರ್ಣಿ, ಸಂತೋಷ್‌ ಹಾಗೂ ರವಿಚಂದ್ರ ನಾಯಕ್ ಭಾಗವಹಿಸಿದ್ದರು
ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಪ್ರಭಾರ ಜಿಲ್ಲಾಧಿಕಾರಿ ಡಾ.ಆನಂದ ಕೆ. ಮಾತನಾಡಿದರು. ಗೀತಾ ಕುಲಕರ್ಣಿ, ಸಂತೋಷ್‌ ಹಾಗೂ ರವಿಚಂದ್ರ ನಾಯಕ್ ಭಾಗವಹಿಸಿದ್ದರು   

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ಮುಳುಗಡೆ ಪ್ರದೇಶಗಳಲ್ಲಿ ನಿರಂತರ ನಿಗಾ ವಹಿಸಬೇಕು. ನಿರ್ಲಕ್ಷದಿಂದ ಯಾವುದೇ ಪ್ರಾಣ ಹಾನಿಯಾ
ಗದಂತೆ ಎಚ್ಚರ ವಹಿಸಬೇಕು ಎಂದು ಪ್ರಭಾರ ಜಿಲ್ಲಾಧಿಕಾರಿ ಡಾ.ಕೆ. ಆನಂದ್ ಸೂಚಿಸಿದರು.
ಜಿಲ್ಲಾ ಕಚೇರಿಗಳ ಸಂಕೀರ್ಣ ಪ್ರಜಾಸೌಧದ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಭೂಕುಸಿತ, ಪ್ರವಾಹ ಕಾಣಿಸಿಕೊಳ್ಳುವ ಅಪಾಯಕಾರಿ ಸ್ಥಳಗಳನ್ನು ಮೊದಲೇ ಗುರುತಿಸಿ, ರೆಡ್ ಅಲರ್ಟ್ ಸಮಯದಲ್ಲಿ ಅಲ್ಲಿನ ನಿವಾಸಿಗಳನ್ನು ಸ್ಥಳಾಂತರಿಸಬೇಕು. ಕಳೆದ ಮಳೆಗಾಲದಲ್ಲಿ ಜಲಾವ್ರತವಾಗಿದ್ದ ಪ್ರದೇಶಗಳಿಗೆ ನಿರಂತರ ಭೇಟಿ ನೀಡಿ, ಅಲ್ಲಿ ನೀರು ಹರಿವಿಗೆ ತಡೆಯಾಗದಂತೆ ನೋಡಿಕೊಳ್ಳಬೇಕು’ ಎಂದು ನಿರ್ದೇಶನ ನೀಡಿದರು.

ಶಿಸ್ತುಕ್ರಮ ಎಚ್ಚರಿಕೆ: ‘ಗ್ರಾಮ ಕರಣಿಕರು, ಪಿಡಿಒ, ನಗರ ಸ್ಥಳೀಯ ಸಂಸ್ಥೆಗಳ ಮುಖ್ಯ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕು.  ವಿಕೋಪ ನಿರ್ವಹಣೆಯಲ್ಲಿ ನಿರ್ಲಕ್ಷ್ಯವನ್ನು ಸಹಿಸಲಾಗದು. ಅಂತಹ ಅಧಿಕಾರಿಗಳ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯಡಿ ಶಿಸ್ತುಕ್ರಮ ಜರುಗಿಸುತ್ತೇವೆ’ ಎಂದು ಎಚ್ಚರಿಸಿದರು. 

ADVERTISEMENT

ವಿದ್ಯುತ್‌ ಮಾರ್ಗಗಳ ಬಳಿಯ ಅಪಾಯಕಾರಿ ಮರ ತೆರವುಗೊಳಿಸುವ ಮೂಲಕ ಮಳೆಗಾಲದಲ್ಲಿ ಯಾವುದೇ ಸಮಸ್ಯೆ ಅಥವಾ ಪ್ರಾಣ ಹಾನಿ ಆಗದಂತೆ ಅರಣ್ಯ ಇಲಾಖೆ ಹಾಗೂ ಮೆಸ್ಕಾಂ ಕ್ರಮವಹಿಸಬೇಕು. ರಸ್ತೆ ಅಥವಾ ಹೆದಾರಿ ಪಕ್ಕದ ಚರಂಡಿ ಸ್ವಚ್ಛಗೊಳಿಸಿ ನೀರು ನಿಲ್ಲದಂತೆ ಸಂಬಂಧಪಟ್ಟ ಇಲಾಖೆಯವರು ಕ್ರಮವಹಿಸಬೇಕು ಎಂದರು.

ಶಾಲೆಗಳಲ್ಲಿ ಎಚ್ಚರವಹಿಸಿ: ಶಾಲೆ ಮತ್ತು ಅಂಗನವಾಡಿಗಳ ಶಿಥಿಲ ಕಟ್ಟಡಗಳನ್ನು  ದುರಸ್ತಿಗೊಳಿಸಬೇಕು. ಶಾಲೆಗಳ  ವಿದ್ಯುತ್ ಸ್ವಿಚ್, ಕೇಬಲ್‍ಗಳನ್ನು ವಿದ್ಯಾರ್ಥಿಗಳು ಮುಟ್ಟದಂತೆ ಶಿಕ್ಷಕರು ನಿಗಾ ವಹಿಸಬೇಕು. ಶಿಥಿಲ ಕೊಠಡಿಗಳಲ್ಲಿ ಯಾವುದೇ ಕಾರಣಕ್ಕೂ ತರಗತಿ ನಡೆಸಬಾರದು ಎಂದು ತಿಳಿಸಿದರು.
ಬಜಪೆಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶದ ಆಸುಪಾಸಿನ ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿ ತೊಂದರೆಯಾದ ಬಗ್ಗೆ ದೂರುಗಳು ಬಂದಿವೆ. ಈ ಸಮಸ್ಯೆ ನಿವಾರಣೆಗೆ ಅಗತ್ಯ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

‘ಈ ಸಮಸ್ಯೆ ನಿವಾರಿಸಲು ಎನ್ಐಟಿಕೆಯ ತಜ್ಞರ ಅಭಿಪ್ರಾಯ ಪಡೆಯಲಾಗುತ್ತಿದೆ’ ಎಂದು ವಿಮಾನನಿಲ್ದಾಣದ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದರು.

ಮೀನುಗಾರಿಕಾ ರಜಾ ಅವಧಿಯಲ್ಲಿ ದೋಣಿಗಳು ಸಮುದ್ರಕ್ಕೆ ಇಳಿಯಬಾರದು. ಈ ಅವಧಿಯಲ್ಲಿ ಬೋಟ್‍ನಲ್ಲಿ ಕಾರ್ಮಿಕರು ಮಲಗಬಾರದು ಎಂದು ಈಗಾಗಲೇ ಸೂಚಿಸಲಾಗಿದೆ.  ಸಣ್ಣ ನೀರಾವರಿ ಇಲಾಖೆಯ ಅಣೆಕಟ್ಟು, ಕಿರು ಅಣೆಕಟ್ಟುಗಳ ಹೂಳೆತ್ತಲು ಕ್ರಮವಹಿಸಬೇಕು. ಮರಳು ತೆಗೆದ ಹೊಂಡಗಳಲ್ಲಿ ನಿಲ್ಲುವ ಮಳೆ ನೀರಿನಲ್ಲಿ ಈಜಾಡಲು ಹೋದ ಮಕ್ಕಳು ಪ್ರಾಣ ಕಳೆದುಕೊಂಡ  ಹಲವಾರು ಘಟನೆ ನಡೆದಿವೆ. ಇಂತಹ ಘಟನೆ ಮರುಕಳಿಸದಂತೆ ಗಣಿ ಇಲಾಖೆ ನೋಡಿಕೊಳ್ಳಬೇಕು ಎಂದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಸಂತೋಷ್‌, ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್, ಸಹಾಯಕ ಪೊಲೀಸ್ ಆಯುಕ್ತರಾದ ಗೀತಾ ಕುಲಕರ್ಣಿ ಇದ್ದರು.

ಪ್ರವೇಶ ನಿಷೇಧಕ್ಕೆ ಸೂಚನೆ

‘ಜಿಲ್ಲೆಯ ಮಲೆನಾಡು ಪ್ರದೇಶಗಳಲ್ಲಿರುವ ಜಲಪಾತಗಳಿಗೆ ಹಾಗೂ ಕಡಲ ಕಿನಾರೆಗಳಿಗೆ ತೀವ್ರ ಮಳೆಯ ಸಂದರ್ಭದಲ್ಲಿ ಪ್ರವಾಸಿಗರಿಗೆ ನಿರ್ಬಂಧ ಹೇರಬೇಕು. ಅಗತ್ಯ ಬಿದ್ದರೆ ಗೃಹರಕ್ಷಕ ದಳದ ಸಿಬ್ಬಂದಿ ಅಥವಾ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಬೇಕು ಎಂದು ಪ್ರಭಾರ ಜಿಲ್ಲಾಧಿಕಾರಿ ಸೂಚಿಸಿದರು.

‘ಕುಡಿಯುವ ನೀರು ಆಗಾಗ್ಗೆ ಪರೀಕ್ಷಿಸಿ’

ನಗರ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮ ಪಂಚಾಯಿತಿಗಳು ಪೂರೈಸುವ ಕುಡಿಯುವ ನೀರನ್ನು 15 ದಿನಗಳಿಗೊಮ್ಮೆ ಪ್ರಯೋಗಾಲಯದಲ್ಲಿ ಪರೀಕ್ಷೆಗೊಳಪಡಿಸುವಂತೆ ಪ್ರಭಾರ ಜಿಲ್ಲಾಧಿಕಾರಿ ಸೂಚಿಸಿದರು. ಕುಡಿಯುವ ನೀರಿನ ಕೊಳವೆ ಹಾಗೂ ಚರಂಡಿ ನೀರುಹಾಗೂ ಬೇರೆ ವಸ್ತು ಬೆರೆಯದಂತೆ ಎಚ್ಚರವಹಿಸಬೇಕು. ಸಾಂಕ್ರಾಮಿಕ ರೋಗ ತಡೆಯಲು ಕುಡಿಯುವ ನೀರನ್ನು ಬಿಸಿ ಮಾಡಿಯೇ ಸೇವಿಸಬೇಕು ಎಂದು ಸಲಹೆ ನೀಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.