ಬೆಳ್ತಂಗಡಿ: ‘ಧಾರ್ಮಿಕ ಕೇಂದ್ರದ ಸೌಹಾರ್ದ ಕೆಡಿಸಿ, ಧರ್ಮಗಳ ನಡುವೆ ಕಂದಕ ನಿರ್ಮಾಣ ಮಾಡಲು ಧಾರ್ಮಿಕ ಕೇಂದ್ರವನ್ನು ಉಪಯೋಗಿಸುವ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರ ನಡೆ ಖಂಡನೀಯ. ಇದು ಜನಪ್ರತಿನಿಧಿಯೊಬ್ಬರ ಬೇಜವಾಬ್ದಾರಿ ನಡೆಗೆ ಸಾಕ್ಷಿಯಾಗಿದೆ’ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಹೇಳಿದ್ದಾರೆ.
ತೆಕ್ಕಾರು ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶದ ವೇದಿಕೆಯನ್ನು ಮುಸ್ಲಿಮರ ವಿರುದ್ಧ ದ್ವೇಷ ಹುಟ್ಟಿಸಲು ಉಪಯೋಗಿಸಿರುವುದು ಸರಿಯಲ್ಲ. ತೆಕ್ಕಾರು ಗ್ರಾಮದ ಎಲ್ಲರ ಸಹಕಾರದಿಂದ ದೇವಸ್ಥಾನದ ಅಭಿವೃದ್ಧಿ ಕಾಮಗಾರಿ ಹಾಗೂ ಧಾರ್ಮಿಕ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ. ಗ್ರಾಮದಲ್ಲಿ ಹಿಂದೂ- ಮುಸ್ಲಿಮರು ಸಹೋದರರಂತೆ ಇರುವುದನ್ನು ಸಹಿಸದ ಹರೀಶ್ ಪೂಂಜ ತನ್ನ ಭಾಷಣದುದ್ದಕ್ಕೂ ಮುಸ್ಲಿಮರನ್ನು ಟೀಕಿಸಿ ಧಾರ್ಮಿಕ ಕೇಂದ್ರವನ್ನು ದ್ವೇಷದ ಕೇಂದ್ರವಾಗಿಸಿದ್ದಾರೆ’ ಎಂದು ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ಧಾರ್ಮಿಕ ವೇದಿಕೆಗಳನ್ನು ರಾಜಕೀಯ ಉದ್ದೇಶಗಳಿಗೆ ಉಪಯೋಗಿಸಲು ಬಿಡಬಾರದು. ಅಂಥ ಘಟನೆಯನ್ನು ವಿರೋಧಿಸಿ, ಊರಿನ ಘನತೆ, ಗೌರವ, ಸೌಹಾರ್ದ ಉಳಿಸಿಕೊಂಡು ಇತರರಿಗೆ ಮಾದರಿಯಾಗಬೇಕು. ಜಿಲ್ಲೆಯಲ್ಲಿ ಕೆಲ ದಿನಗಳಿಂದ ನಡೆಯುತ್ತಿರುವ ಘರ್ಷಣೆಗಳನ್ನು ತಿಳಿಗೊಳಿಸಬೇಕಾದ ಜನಪ್ರತಿನಿಧಿ ಈ ರೀತಿ ದ್ವೇಷ ಭಾಷಣ ಮಡಿರುವುದು ಖಂಡನೀಯ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.