ADVERTISEMENT

ಪ್ರಪಂಚದಾದ್ಯಂತ ಬಂಟರ ಹೆಜ್ಜೆ ಗುರುತು: ವೀರೇಂದ್ರ ಹೆಗ್ಗಡೆ

ರಾಮಕೃಷ್ಣ ವಿದ್ಯಾರ್ಥಿನಿ ನಿಲಯದ ಅಮೃತ ಮಹೋತ್ಸವದಲ್ಲಿ ವೀರೇಂದ್ರ ಹೆಗ್ಗಡೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2022, 15:25 IST
Last Updated 24 ಸೆಪ್ಟೆಂಬರ್ 2022, 15:25 IST
ಮಂಗಳೂರಿನಲ್ಲಿ ನಡೆದ ಶ್ರೀ ರಾಮಕೃಷ್ಣ ವಿದ್ಯಾರ್ಥಿನಿ ನಿಲಯದ ಅಮೃತ ಮಹೋತ್ಸವ ಸಮಾರಂಭದಲ್ಲಿ ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿದರು.
ಮಂಗಳೂರಿನಲ್ಲಿ ನಡೆದ ಶ್ರೀ ರಾಮಕೃಷ್ಣ ವಿದ್ಯಾರ್ಥಿನಿ ನಿಲಯದ ಅಮೃತ ಮಹೋತ್ಸವ ಸಮಾರಂಭದಲ್ಲಿ ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿದರು.   

ಮಂಗಳೂರು: ‘ಬದುಕಿನಲ್ಲಿ ಎದುರಾಗುವ ಕಷ್ಟಗಳನ್ನು ಮೆಟ್ಟಿನಿಂತು, ಸಾಧನೆಯ ಛಲ ಹೊಂದಿರುವ ಬಂಟರು, ಪ್ರಪಂಚದಾದ್ಯಂತ ತಮ್ಮ ಹೆಜ್ಜೆ ಗುರುತನ್ನು ಮೂಡಿಸಿದ್ದಾರೆ’ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

ಬಂಟರ ಯಾನೆ ನಾಡವರ ಮಾತೃ ಸಂಘದ ಆಶ್ರಯದಲ್ಲಿ ಶನಿವಾರ ಇಲ್ಲಿ ನಡೆದ ಶ್ರೀ ರಾಮಕೃಷ್ಣ ವಿದ್ಯಾರ್ಥಿನಿ ನಿಲಯದ ಅಮೃತ ಮಹೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಭೂ ಸುಧಾರಣಾ ಕಾಯ್ದೆ ಜಾರಿಯಾದಾಗ ಒಂದು ತಲೆಮಾರಿನ ಜನರು ತೀವ್ರ ಸಂಕಷ್ಟ ಅನುಭವಿಸಿದರು. ಗೇಣಿ ಕೊಡುತ್ತಿದ್ದ ಜಮೀನನ್ನು ಕಳೆದುಕೊಂಡಾಗ ಎದುರಾದ ಸಮಸ್ಯೆ ಹೇಳಲು ಸಾಧ್ಯವಿಲ್ಲ. ಆದರೆ, ಇದನ್ನೇ ಸವಾಲಾಗಿ ಸ್ವೀಕರಿಸಿ, ಸ್ವಾವಲಂಬಿ ಬದುಕಿನ ಹಟ ತೊಟ್ಟ ಬಂಟರು, ವಿದ್ಯೆ ಪಡೆದು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದರು. ಹೀಗಾಗಿ, ಭೂ ಸುಧಾರಣಾ ಕಾಯ್ದೆಯು ಬಂಟರು ಪ್ರಬಲ ಶಕ್ತಿಯಾಗಿ ರೂಪುಗೊಳ್ಳಲು ಸಹಕಾರಿಯಾಯಿತು ಎಂದರು.

ಬದುಕಿನಲ್ಲಿ ದುಡ್ಡು, ಸಂಪತ್ತು ಯಾವುದೂ ಶಾಶ್ವತವಲ್ಲ, ಅಕಸ್ಮಾತ್ ಆಗಿ ದೊರೆಯುವ ಅವಕಾಶ ಶಾಶ್ವತ. ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು. 75 ವರ್ಷಗಳ ಹಿಂದೆ ಹಿರಿಯರು ಯೋಚಿಸಿದ ಮಹಿಳಾ ಸಶಕ್ತೀಕರಣ, ಸಮಾನತೆಯ ಫಲವಾಗಿ ಆರಂಭವಾಗಿದ್ದ ವಿದ್ಯಾರ್ಥಿನಿ ವಸತಿ ನಿಲಯವು ಹಲವಾರು ಹೆಣ್ಣು ಮಕ್ಕಳ ಬದುಕಿಗೆ ಬೆಳಕಾಗಿದೆ. ಮಕ್ಕಳಿಗೆ ವಿದ್ಯೆ ನೀಡುವ ಜತೆಗೆ ಸಂಸ್ಕೃತಿ, ಸಂಪ್ರದಾಯ ಉಳಿಸಿಕೊಳ್ಳುವ ಕೆಲಸ ಆಗಬೇಕು. ಶ್ರೇಷ್ಠ ತುಳು ಸಂಸ್ಕೃತಿ ಮುಂದುವರಿಯಬೇಕು ಎಂದು ಹೇಳಿದರು.

ADVERTISEMENT

ಸಮಾಜ ಕಲ್ಯಾಣ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಬೆಂಗಳೂರಿನ ಅದಮ್ಯ ಚೇತನ ಫೌಂಡೇಶನ್ ಸಿಇಒ ತೇಜಸ್ವಿನಿ ಅನಂತಕುಮಾರ್ ಅವರು, ‘ಸಮಾಜದಲ್ಲಿ ಎಲ್ಲರನ್ನೂ ಮುಖ್ಯವಾಹಿನಿಗೆ ತರುವಲ್ಲಿ ವಸತಿ ನಿಲಯಗಳ ಪಾತ್ರ ಮುಖ್ಯವಾದದ್ದು. ಕೃಷಿಯಷ್ಟೇ ಪ್ರಧಾನವಾಗಿ ಯೋಧರಾಗಿ ದೇಶ ರಕ್ಷಣೆಯಲ್ಲೂ ಮುಂಚೂಣಿಯಲ್ಲಿದ್ದವರು ಬಂಟರು’ ಎಂದು ಶ್ಲಾಘಿಸಿದರು. ಪ್ಲಾಸ್ಟಿಕ್ ಕಡಿಮೆ ಬಳಕೆ, ಶೂನ್ಯ ತ್ಯಾಜ್ಯ ಉತ್ಪಾದನೆ, ಹಸಿರು ಉಳಿಸುವಲ್ಲಿ ಎಲ್ಲರು ಕೈಜೋಡಿಸಬೇಕು ಎಂದು ವಿನಂತಿಸಿದರು.

ಬಂಟ್ಸ್‌ ಕತಾರ್‌ನ ಪದ್ಮಶ್ರೀ ಆರ್‌ ಶೆಟ್ಟಿ ಅವರು ‘ಅಮೃತಸಿರಿ’ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು. ಸದಾಶಿವ ಶೆಟ್ಟಿ, ಸುಜಾತಾ ಶೆಟ್ಟಿ, ಉಪೇಂದ್ರ ಶೆಟ್ಟಿ, ಪ್ರಗತಿ ಶೆಟ್ಟಿ ಅವರನ್ನು ಅಭಿನಂದಿಸಲಾಯಿತು. ಬಂಟರ ಸಮುದಾಯದ ಸಾಧಕಿಯರಾದ ಭಾರತಿ ಶೆಟ್ಟಿ, ಶಕುಂತಳಾ ಶೆಟ್ಟಿ, ರೀನಾ ಶೆಟ್ಟಿ, ಮಲ್ಲಿಕಾ ಚೌಟ, ಹಸ್ತಾ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ಬಂಟರ ಸಂಘದ ಅಧ್ಯಕ್ಷ ಅಜಿತ್‌ಕುಮಾರ್ ರೈ ಸ್ವಾಗತಿಸಿದರು. ರಾಮಕೃಷ್ಣ ವಿದ್ಯಾರ್ಥಿನಿ ನಿಲಯದ ಅಧ್ಯಕ್ಷೆ ವೀಣಾ ಶೆಟ್ಟಿ, ಸಂಚಾಲಕಿ ಶಾಲಿನಿ ಶೆಟ್ಟಿ, ಸಂಘಟನೆ ಪ್ರಮುಖರಾದ ಕಾವು ಹೇಮನಾಥ ಶೆಟ್ಟಿ, ಗೋಪಾಲಕೃಷ್ಣ ಶೆಟ್ಟಿ, ಕೃಷ್ಣಪ್ರಸಾದ ರೈ, ಸಂಪಿಗೇಡಿ ಸಂಜೀವ ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.