
ಮಂಗಳೂರು: ‘ಉಡುಪಿ ಪರ್ಯಾಯ ಮಹೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಅಲ್ಲಿನ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರು ಕೇಸರಿ ಬಣ್ಣದ ಧ್ವಜ ಹಾರಿಸಿದ್ದಕ್ಕೆ ಕಾಂಗ್ರೆಸ್ ಮುಖಂಡ ರಮಾನಾಥ ರೈ ಟೀಕೆ ಮಾಡಿದ್ದಾರೆ. ದೇವಾಲಯಗಳಲ್ಲೂ ಕೇಸರಿ ಧ್ವಜ ಹಾರಿಸಬಾರದು ಎಂದು ಹೇಳಿದ್ದಾರೆ. ಇದಕ್ಕಾಗಿ ಅವರು ಹಿಂದೂಗಳ ಕ್ಷಮೆ ಯಾಚಿಸಬೇಕು’ ಎಂದು ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವಕ್ತಾರ ಅರುಣ್ ಶೇಟ್ ಒತ್ತಾಯಿಸಿದರು.
ಇಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘ಉಡುಪಿ ಪರ್ಯಾಯ ಮಹೋತ್ಸವ ಸರ್ಕಾರಿ ಕಾರ್ಯಕ್ರಮವಲ್ಲ. ಅದೊಂದು ಧಾರ್ಮಿಕ ಕಾರ್ಯಕ್ರಮ. ಅಲ್ಲಿ ಕೇಸರಿ ಧ್ವಜ ಹಾರಿಸುವುದು ತಪ್ಪಲ್ಲ. ಅಷ್ಟಕ್ಕೂ ಜಿಲ್ಲಾಧಿಕಾರಿಯವರು ಸರ್ಕಾರಿ ಕಾರ್ಯಕ್ರಮದಲ್ಲಿ ಕೇಸರಿ ಧ್ವಜವನ್ನು ಹಾರಿಸಿಲ್ಲ. ಮಾಜಿ ಸಚಿವರಾಗಿರುವ ರೈ ಅವರಿಂದ ಇಂತಹ ಹೇಳಿಕೆ ನಿರೀಕ್ಷೆ ಮಾಡಿರಲಿಲ್ಲ. ಕೇಸರಿ ಧ್ವಜ ಹಾರಿಸಿದ್ದರಿಂದ ಯಾವ ಕಾನೂನಿನ ಉಲ್ಲಂಘನೆಯಾಗಿದೆ ಎಂಬುದನ್ನು ರಮಾನಾಥ ರೈ ಸ್ಪಷ್ಟಪಡಿಸಬೇಕು’ ಎಂದರು.
‘ರಾಮಾಯಣ, ಮಹಾಭಾರತದ ಕಾಲದಿಂದಲೂ ಭಗವಾಧ್ವಜ ಹಾರಿಸುವ ಪರಿಪಾಟ ಇದೆ. ದೇವಾಲಯಗಳಲ್ಲೂ ಹಿಂದಿನಿಂದಲೂ ಓಂಕಾರ ಇರುವ ಕೇಸರಿ ಧ್ವಜವನ್ನು ಹಾರಿಸಲಾಗುತ್ತಿದೆ. ಹಿಂದೂಗಳ ಧಾರ್ಮಿಕ ಕಾರ್ಯಕ್ರಮದಲ್ಲಿ ಕೇಸರಿ ಧ್ವಜವನ್ನು ಹಾರಿಸದೆ ಪಾಕಿಸ್ತಾನ ಧ್ವಜವನ್ನು ಹಾರಿಸಬೇಕೇ’ ಎಂದು ಪ್ರಶ್ನಿಸಿದರು.
‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತ ಸ್ವರೂಪಕ್ಕೆ ಬರುತ್ತಿದೆ. ಇದನ್ನು ಸಹಿಸದ ಕಾಂಗ್ರೆಸ್‌ನವರು ಹಿಂದೂಗಳ ನಂಬಿಕೆಯನ್ನು ಘಾಸಿಗೊಳಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ರಾಜಕೀಯ ತೆವಲಿನಿಂದ ಹಾಗೂ ಅಲ್ಪಸಂಖ್ಯಾತರ ಓಲೈಕೆಗಾಗಿ ಇಂತಹ ಹೇಳಿಕೆ ನೀಡುತ್ತಿದ್ದಾರೆ’ ಎಂದು ಆರೋಪಿಸಿದರು.
‘ಆರ್‌ಎಸ್‌ಎಸ್ ಮುಖಂಡ ಡಾ.ಕಲ್ಲಡ್ಕ ಪ್ರಭಾಕರ ಭಟ್ ಪುತ್ತೂರಿನಲ್ಲಿ ದ್ವೇಷ ಭಾಷಣ ಮಾಡಿದ್ದಾರೆ’ ಎಂದು ಆರೋಪಿಸಿ ಕಾಂಗ್ರೆಸ್ ತನ್ನ ಸಹವರ್ತಿಗಳಿಂದ ದೂರು ದಾಖಲಿಸಿದೆ. ಅವರ ವಿರುದ್ಧ ಈ ಹಿಂದೆಯೂ ಅನೇಕ ಸುಳ್ಳು ದೂರುಗಳು ದಾಖಲಾಗಿದ್ದು, ಅದಕ್ಕೆ ಹೈಕೋರ್ಟ್ ಛೀಮಾರಿ ಹಾಕಿತ್ತು. ಅಭಿವೃದ್ಧಿ ರಾಜಕಾರಣ ಬಿಟ್ಟು ಹಿಂದೂ ವಿರೋಧಿ ರಾಜಕಾರಣಕ್ಕೆ ಇಳಿದ ಕಾಂಗ್ರೆಸ್‌ನವರು ಇನ್ನೂ ಎಷ್ಟು ದೂರುಗಳನ್ನು ಬೇಕಾದರೂ ದಾಖಲಿಸಲಿ. ಅವುಗಳನ್ನು ಎದುರಿಸುತ್ತೇವೆ’ ಎಂದರು.
ಬಿಜೆಪಿ ಜಿಲ್ಲಾ ಘಟಕದ ಕಾರ್ಯದರ್ಶಿ ಸುಜಿತ್, ಜಿಲ್ಲಾ ಮಾಧ್ಯಮ ಸಂಚಾಲಕ ವಸಂತ್ ಜೆ. ಪೂಜಾರಿ, ಜಿಲ್ಲಾ ಮಾಧ್ಯಮ ಸಹ ಸಂಚಾಲಕ ಕದ್ರಿ ಮನೋಹರ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.