ADVERTISEMENT

ಕರ್ತವ್ಯಪ್ರಜ್ಞೆ ತೋರಿದ ಸಂಸ್ಥೆ: ಶಾಸಕ ಕಾಮತ್

ಬೋಳೂರು ಪರಿಸರದಲ್ಲಿ ಅಧಿಕಾರಿಗಳ ಮೂಲಕ ಕಿಟ್ ವಿತರಣೆ

​ಪ್ರಜಾವಾಣಿ ವಾರ್ತೆ
Published 6 ಮೇ 2020, 10:22 IST
Last Updated 6 ಮೇ 2020, 10:22 IST
ಮಂಗಳೂರಿನ ಬೋಳೂರು ಪರಿಸರದ ನಿವಾಸಿಗಳಿಗೆ ಹಿಂದೂಸ್ತಾನ್‌ ಯೂನಿಲಿವರ್‌ ನೀಡಿದ ಕಿಟ್‌ಗಳನ್ನು ಮಂಗಳವಾರ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು.
ಮಂಗಳೂರಿನ ಬೋಳೂರು ಪರಿಸರದ ನಿವಾಸಿಗಳಿಗೆ ಹಿಂದೂಸ್ತಾನ್‌ ಯೂನಿಲಿವರ್‌ ನೀಡಿದ ಕಿಟ್‌ಗಳನ್ನು ಮಂಗಳವಾರ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು.   

ಮಂಗಳೂರು: ಕಂಟೈನ್‌ಮೆಂಟ್‌ ವಲಯವಾಗಿ ಘೋಷಿಸಲಾಗಿರುವ ಬೋಳೂರು ವಾರ್ಡ್‌ನ ನಿವಾಸಿಗಳಿಗೆ ಶಾಸಕ ವೇದವ್ಯಾಸ್ ಕಾಮತ್ ಅವರ ಮನವಿಯ ಮೇರೆಗೆ ಹಿಂದುಸ್ತಾನ್ ಯೂನಿಲಿವರ್ ಸಂಸ್ಥೆಯ ವತಿಯಿಂದ ಶಾಸಕ ವೇದವ್ಯಾಸ ಕಾಮತ್ ಹಾಗೂ ಪಾಲಿಕೆ ಸದಸ್ಯ ಜಗದೀಶ್ ಶೆಟ್ಟಿ ಉಪಸ್ಥಿತಿಯಲ್ಲಿ ಉಸ್ತುವಾರಿ ಅಧಿಕಾರಿ ಲಿಂಗೇಗೌಡ ಅವರಿಗೆ ದಿನಸಿ ಸಾಮಗ್ರಿಗಳ ಕಿಟ್‌ಗಳನ್ನು ಹಸ್ತಾಂತರಿಸಲಾಯಿತು.

ಈ ಕುರಿತು ಮಾತನಾಡಿದ ಶಾಸಕ ಕಾಮತ್, ‘ಕೋವಿಡ್– 19 ಸೋಂಕಿನ ಹಿನ್ನೆಲೆಯಲ್ಲಿ ಸಂಪೂರ್ಣ ಸೀಲ್‌ಡೌನ್ ಜಾರಿಗೊಳಿಸಿರುವ ಬೋಳೂರು ಪರಿಸರದ ಜನರು ಹೊರಗಡೆ ಬರುವಂತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಜನರ ಕಷ್ಟಗಳನ್ನು ಅರಿತು ಬೋಳೂರಿನಲ್ಲಿ ಅನೇಕ ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಹಿಂದುಸ್ತಾನ್ ಯೂನಿಲಿವರ್ ಸಂಸ್ಥೆಯು ಕಿಟ್‌ಗಳನ್ನು ನೀಡುವ ಮೂಲಕ ಕರ್ತವ್ಯ ಮೆರೆದಿದೆ ಎಂದು ಶ್ಲಾಘಿಸಿದರು.

ನಗರದ ಮೂರು ಕಡೆಗಳಲ್ಲಿ ಸೀಲ್‌ಡೌನ್ ಜಾರಿಗೊಳಿಸಲಾಗಿದೆ. ಆಯಾ ಸ್ಥಳಗಳಲ್ಲಿ ಸ್ಥಳೀಯ ಅಂಗಡಿಗಳ ಮಾಲೀಕರು, ಅಧಿಕಾರಿಗಳ ಸಹಾಯದಿಂದ ಮನೆ ಮನೆಗೂ ಸಾಮಗ್ರಿಗಳನ್ನು ತಲುಪಿಸುವ ಕಾರ್ಯ ಆಗುತ್ತಿದೆ. ಶಕ್ತಿನಗರ ಕಕ್ಕೆಬೆಟ್ಟು ಹಾಗೂ ಪಡೀಲ್ ಪರಿಸರದಲ್ಲಿ 500ಕ್ಕೂ ಅಧಿಕ ಮನೆಗಳಿದ್ದು, ಸಂಸ್ಥೆಯ ವತಿಯಿಂದ ಅಲ್ಲಿಯೂ ಕಿಟ್ ಒದಗಿಸಿದರೆ ಅಧಿಕಾರಿಗಳ ಮೂಲಕ ಜನರಿಗೆ ತಲುಪಿಸಲಾಗುವುದು ಎಂದು ಮನವಿ ಮಾಡಿದರು.

ADVERTISEMENT

ಸಂಸ್ಥೆಯಿಂದ ದಿನಸಿ ಸಾಮಗ್ರಿಗಳನ್ನು ಕೊಡಿಸುವಲ್ಲಿ ಕಸ್ತೂರಿ ಪ್ರಭೋದ್ ಪೈ ಶ್ರಮಿಸಿದ್ದಾರೆ. ಸೀಲ್‌ಡೌನ್ ಜಾರಿಗೊಳಿಸಿದ ದಿನದಿಂದ ಪಾಲಿಕೆ ಸದಸ್ಯ ಜಗದೀಶ್ ಶೆಟ್ಟಿ ನಿರಂತರವಾಗಿ ಜನರ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಸ್ಥೆಯ ಅಧಿಕಾರಿಗಳಾದ ಸಂಜಯ್ ಸಿಕ್ವೇರಾ, ವಿಘ್ನೇಶ್ವರ ಹೆಗ್ಡೆ, ಚಿದಾನಂದ ಯೆಯ್ಯಾಡಿ, ಸ್ಥಳೀಯ ಮುಖಂಡ ರಾದ ರಾಹುಲ್ ಶೆಟ್ಟಿ, ಕಾರ್ತಿಕ್ ಬಂಗೇರ, ರೋಶನ್, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಪೊಲೀಸ್‌ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.