ADVERTISEMENT

ಮಧುಕರ ಶೆಟ್ಟಿ ಪುಣ್ಯಸ್ಮರಣೆ: ಭಾವುಕರಾದ ಗೆಳೆಯರು

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2019, 5:21 IST
Last Updated 30 ಡಿಸೆಂಬರ್ 2019, 5:21 IST
ಕುಂದಾಪುರ ಸಮೀಪದ ಯಡಾಡಿ–ಮತ್ಯಾಡಿಯ ಪ್ರಫುಲ್ಲಾ ರೈ ಫಾರ್ಮ್‌ಗೆ ಶನಿವಾರ ಭೇಟಿ ನೀಡಿದ ಮಾಜಿ ಐಪಿಎಸ್‌ ಅಧಿಕಾರಿ ಕೆ.ಅಣ್ಣಾಮಲೈ ಅವರು ದಿ.ಮಧುಕರ ಶೆಟ್ಟಿ ಅವರ ಸಮಾಧಿಗೆ ಗೌರವ ನಮನ ಸಲ್ಲಿಸಿದರು.
ಕುಂದಾಪುರ ಸಮೀಪದ ಯಡಾಡಿ–ಮತ್ಯಾಡಿಯ ಪ್ರಫುಲ್ಲಾ ರೈ ಫಾರ್ಮ್‌ಗೆ ಶನಿವಾರ ಭೇಟಿ ನೀಡಿದ ಮಾಜಿ ಐಪಿಎಸ್‌ ಅಧಿಕಾರಿ ಕೆ.ಅಣ್ಣಾಮಲೈ ಅವರು ದಿ.ಮಧುಕರ ಶೆಟ್ಟಿ ಅವರ ಸಮಾಧಿಗೆ ಗೌರವ ನಮನ ಸಲ್ಲಿಸಿದರು.   

ಕುಂದಾಪುರ: ಯಡಾಡಿ–ಮತ್ಯಾಡಿ ಮನೆಯಲ್ಲಿ ದಕ್ಷ ಪೊಲೀಸ್‌ ಅಧಿಕಾರಿ ದಿವಂಗತ ಮಧುಕರ ಶೆಟ್ಟಿ ಅವರ ವಾರ್ಷಿಕ ಪುಣ್ಯ ಸ್ಮರಣೆಯನ್ನು ಈಚೆಗೆ ಕುಟುಂಬ ಸದಸ್ಯರು ಸರಳವಾಗಿ ಆಚರಿಸಿದರು.

ತಂದೆ ವಡ್ಡರ್ಸೆ ರಘುರಾಮ ಶೆಟ್ಟಿ ಹಾಗೂ ತಾಯಿ ಪ್ರಫುಲ್ಲಾ ಶೆಟ್ಟಿ ಅವರ ಸಮಾಧಿ ಬಳಿ, ಮಧುಕರ ಶೆಟ್ಟಿ ಅವರ ಸಮಾಧಿಯೂ ಇದೆ. ಶನಿವಾರ ಬೆಳಿಗ್ಗೆ ಕುಟುಂಬ ಸದಸ್ಯರು ಪುಷ್ಟ ಅರ್ಪಿಸಿ ನಮನ ಸಲ್ಲಿಸಿದರು.

ಬೆಂಗಳೂರಿನ ಕಾಲೇಜು ದಿನಗಳ ಒಡನಾಡಿ ಹಾಗೂ ಪಶ್ಚಿಮ ವಲಯದ ಪೊಲೀಸ್‌ ಮಹಾನಿರೀಕ್ಷಕ ಅರುಣ್‌ ಚಕ್ರವರ್ತಿ ಅವರು ಮಧುಕರ ಶೆಟ್ಟಿ ಸಮಾಧಿಗೆ ಗೌರವ ನಮನ ಸಲ್ಲಿಸಿ, ಕುಟುಂಬ ಸದಸ್ಯರೊಂದಿಗೆ ನೆನಪು ಹಂಚಿಕೊಂಡರು. ಪತ್ನಿ ಸುವರ್ಣ ಮಧುಕರ ಶೆಟ್ಟಿ, ಪುತ್ರಿ ಸಮ್ಯ ಮಧುಕರ, ಸಹೋದರರಾದ ಮುರಳೀಧರ ಶೆಟ್ಟಿ ಹಾಗೂ ಸುಧಾಕರ ಶೆಟ್ಟಿ, ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಸಹೋದರ ಸಂಬಂಧಿ ವಡ್ಡರ್ಸೆ ನವೀನ್‌ ಶೆಟ್ಟಿ ಇದ್ದರು.

ADVERTISEMENT

ಶನಿವಾರ ಬೆಳಿಗ್ಗೆ ಯಡಾಡಿ ಪ್ರಫುಲ್ಲಾ ರೈ ಫಾರ್ಮ್‌ಗೆ ಬಂದಿದ್ದ ಮಾಜಿ ಐಪಿಎಸ್‌ ಅಧಿಕಾರಿ ಕೆ.ಅಣ್ಣಾಮಲೈ ಅವರು ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಮಾತನಾಡಿದರು. ನಂತರ ಮಧುಕರ ಶೆಟ್ಟಿ ಅವರ ಸಮಾಧಿಗೆ ಹಣೆ ಹಚ್ಚಿ ನಮಿಸಿಭಾವುಕರಾದರು.

ಹೈದರ್‌ಬಾದ್‌ನಿಂದ ಬಂದಿದ್ದ ಐಜಿಪಿ ಸ್ಟೀಫನ್‌ ರವೀಂದ್ರ, ಕೇಂದ್ರ ಸರ್ಕಾರದ ಜಂಟಿ ಕಾರ್ಯದರ್ಶಿ ರವೀಂದ್ರ ಆರ್‌., ಕಾಲೇಜು ದಿನಗಳ ಸ್ನೇಹಿತರಾದ ಡಾ.ಶಿವಚರಣ್‌ ಶೆಟ್ಟಿ ಮಂಗಳೂರು, ಬಿ.ರಾಧಾಕೃಷ್ಣ ನಾಯಕ್‌ ಕುಂದಾಪುರ ಸಮಾಧಿಗೆ ಪುಷ್ಪ ನಮನದೊಂದಿಗೆ ಗೌರವ ಸಲ್ಲಿಸಿದರು.

ಮಧುಕರ ಶೆಟ್ಟಿ

ಹಿರಿಯ ಪತ್ರಕರ್ತ ವಡ್ಡರ್ಸೆ ರಘುರಾಮ ಶೆಟ್ಟಿಯವರ 2ನೇ ಪುತ್ರರಾಗಿದ್ದ ಅವರು 1999ರ ಬ್ಯಾಚ್‌ನ ಐಪಿಎಸ್‌ ಅಧಿಕಾರಿ. ಚಿಕ್ಕಮಗಳೂರಿನಲ್ಲಿ ಎಸ್‌ಪಿಯಾಗಿದ್ದ ದಿನಗಳಲ್ಲಿ ಮೂಡಿಗೆರೆ ತಾಲ್ಲೂಕಿನಲ್ಲಿ ದಲಿತ ಕುಟುಂಬಕ್ಕೆ ಆಗಿದ್ದ ಅನ್ಯಾಯಕ್ಕೆ ಸ್ಪಂದಿಸಿ ಅವರ ಕಣ್ಣೀರು ಒರೆಸಿದ್ದರಿಂದ ಜಿಲ್ಲಾಧಿಕಾರಿ ಹರ್ಷಾ ಗುಪ್ತಾ ಹಾಗೂ ಅವರ ನೆನಪಿನಲ್ಲಿ ಆ ಹಳ್ಳಿಗೆ ಗುಪ್ತಾಶೆಟ್ಟಿ ಹಳ್ಳಿ ಎಂದು ನಾಮಕರಣ ಮಾಡಲಾಗಿತ್ತು. ಚಾಮನಗರದ ಎಸ್‌ಪಿಯಾಗಿದ್ದ ವೇಳೆ ಪೊಲೀಸ್‌ ಅಧೀಕ್ಷರ ನೂತನ ಕಚೇರಿಯನ್ನು ಯಾವುದೆ ಗಣ್ಯ ಅತಿಥಿಗಳನ್ನು ಕರೆಯದೆ ದೀನ ಬಂಧು ಆಶ್ರಮದ ಅನಾಥ ಮಕ್ಕಳಿಂದ ಉದ್ಘಾಟನೆ ಮಾಡಿಸಿದ್ದರು. ಲೋಕಾಯುಕ್ತ ಎಸ್‌ಪಿಯಾಗಿದ್ದ ದಿನಗಳಲ್ಲಿ ನಾಡು ತನ್ನ ಕಡೆ ನೋಡುವಂತೆ ಕರ್ತವ್ಯ ನಿರ್ವಹಿಸಿದ್ದರು.

ಕೃಷಿ ಕಾರ್ಯದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದ ಅವರು, ಯಡಾಡಿಯ ಪ್ರಫುಲ್ಲಾ ರೈ ಫಾರ್ಮ್‌ನ್ನು ಹಸಿರಿನಿಂದ ಕಂಗೊಳಿಸುವಂತೆ ಮಾಡಿದ್ದರು. ಊರಿಗೆ ಬರುವಾಗ ಇಲಾಖೆಯ ಯಾವುದೆ ಶಿಷ್ಟಾಚಾರದ ಗೌರವಗಳನ್ನು ಅಪೇಕ್ಷೆ ಪಡದೆ ಸಾಮಾನ್ಯರಂತೆ ಬಸ್ಸಿನಲ್ಲಿ ಬಂದಿಳಿಯುತ್ತಿದ್ದರು. ಎಲ್ಲರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ಅವರ ಸರಳ ಜೀವನ ಶೈಲಿಗಳನ್ನು ಸ್ಥಳೀಯರು ಇಂದಿಗೂ ನೆನಪಿಸಿಕೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.