ADVERTISEMENT

ಲೇಡಿಹಿಲ್‌ ಹೆಸರು ಬದಲಾವಣೆಗೆ ಆಕ್ಷೇಪ

ಒಂದು ಇತ್ಯರ್ಥ ಆಗುವುದರೊಳಗೆ ಮತ್ತೊಂದು ಕಗ್ಗಂಟು

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2020, 3:16 IST
Last Updated 23 ಸೆಪ್ಟೆಂಬರ್ 2020, 3:16 IST
ಮಂಗಳೂರಿನ ಲೇಡಿಹಿಲ್‌ ವೃತ್ತ
ಮಂಗಳೂರಿನ ಲೇಡಿಹಿಲ್‌ ವೃತ್ತ   

ಮಂಗಳೂರು: ಲೈಟ್‌ಹೌಸ್ ಹಿಲ್‌ ರಸ್ತೆಗೆ ಮೂಲ್ಕಿ ಸುಂದರರಾಮ ಶೆಟ್ಟಿ ಹೆಸರನ್ನು ಇಡಲು ಸರ್ಕಾರ ಒಪ್ಪಿಗೆ ನೀಡಿದ್ದು, ಇದೀಗ ಲೇಡಿಹಿಲ್‌ ವೃತ್ತದ ಹೆಸರು ಬದಲಾವಣೆಗೆ ಆಕ್ಷೇಪ ವ್ಯಕ್ತವಾಗಿದೆ.

ಲೇಡಿಹಿಲ್‌ ವೃತ್ತಕ್ಕೆ ಬ್ರಹ್ಮಶ್ರೀ ನಾರಾಯಣ ಗುರು ವೃತ್ತ ಎಂದು ನಾಮಕರಣ ಮಾಡುವಂತೆ ಇತ್ತೀಚೆಗೆ ಫ್ರೆಂಡ್ಸ್ ಬಳ್ಳಾಲ್ ಭಾಗ್ ಬಿರುವೆರ್ ಕುಡ್ಲ ಕೇಂದ್ರೀಯ ಸಮಿತಿ ವತಿಯಿಂದ ಮೇಯರ್ ದಿವಾಕರ್, ಶಾಸಕ ವೇದವ್ಯಾಸ ಕಾಮತ್ ಅವರಿಗೆ ಮನವಿ ಸಲ್ಲಿಸಲಾಗಿತ್ತು.

ಲೇಡಿಹಿಲ್ ಜಂಕ್ಷನ್ ಅಥವಾ ವೃತ್ತದ ಹೆಸರನ್ನು ಬದಲಾಯಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕ್ರೈಸ್ತ ಸಮುದಾಯದ ಮುಖಂಡರು, ಮೇಯರ್‌ಗೆ ಹಾಗೂ ಆಯುಕ್ತರಿಗೆ ಮನವಿ ಸಲ್ಲಿಸಿದರು.

ADVERTISEMENT

‘1885 ನೇ ಇಸವಿಯಲ್ಲಿ ಅಪೋಸ್ತಲಿಕ್ ಅಂದಿನ ಮದರ್ ಜನರಲ್ ಮಾರಿ ದೇಸ್ ಆಂಜ್ ಫ್ರಾನ್ಸ್‌ನಿಂದ ಮಂಗಳೂರಿಗೆ ಬಂದಾಗ, ಸ್ಥಳೀಯರ ಒತ್ತಾಯದಂತೆ ಹೆಣ್ಣು ಮಕ್ಕಳ ಶಾಲೆಯನ್ನು ತೆರೆಯಲಾಗಿತ್ತು. ಹೆಣ್ಣುಮಕ್ಕಳ ಮೇಲಿನ ಅಭಿಮಾನದಿಂದ ಮತ್ತು ಗೌರವ ತೋರಿಸಲು ಈ ಸ್ಥಳಕ್ಕೆ ಲೇಡಿಹಿಲ್ ಎಂದು ನೂರಾರು ವರ್ಷಗಳಿಂದ ಕರೆಯಲಾಗುತ್ತಿದೆ. ಈ ಸ್ಥಳದ ಹೆಸರನ್ನು ಬದಲಾಯಿಸುವುದು ಸರಿಯಲ್ಲ. ಇತಿಹಾಸವನ್ನು ಬದಲಾಯಿಸುವುದು ಸಮಂಜಸವಲ್ಲ’ ಎಂದು ಮನವಿಯಲ್ಲಿ ತಿಳಿಸಲಾಗಿದೆ.

‘ಈ ಹೆಸರು ಬದಲಾವಣೆ ಮಾಡುವುದರಿಂದ ನಗರದ ಕೆಥೊಲಿಕ್ ಜನರ ಧಾರ್ಮಿಕ ಭಾವನೆಗಳಿಗೆ ಘಾಸಿ ಉಂಟು ಮಾಡುತ್ತದೆ. ಕೋಮು ಸೌಹಾರ್ದ ಕಾಪಾಡುವ ದೃಷ್ಟಿಯಿಂದ ಹೆಸರನ್ನು ಬದಲಾವಣೆ ಮಾಡಬಾರದು’ ಎಂದು ಮನವಿ ಮಾಡಲಾಗಿದೆ.

ಕಳೆದ ವರ್ಷ ಫೆಬ್ರವರಿ 28 ರಂದು ನಡೆದ ಪಾಲಿಕೆ ಸಭೆಯಲ್ಲಿ ಲೇಡಿಹಿಲ್ ಜಂಕ್ಷನ್‌ನಿಂದ ನ್ಯೂ ಚಿತ್ರ ಜಂಕ್ಷನ್‌ವರೆಗಿನ ರಸ್ತೆಯನ್ನು ‘ಶ್ರೀ ಗೋಕರ್ಣನಾಥ ಕ್ಷೇತ್ರ ರಸ್ತೆ’ ಎಂದು ಹೆಸರಿಸುವ ನಿರ್ಣಯವನ್ನು ಅಂಗೀಕರಿಸಲಾಗಿದೆ.

ಕೆಥೊಲಿಕ್‌ ಸಭಾ ಮಂಗಳೂರಿನ ಅಧ್ಯಕ್ಷ ರೋಲ್ಫಿ ಡಿಕೋಸ್ತ, ಅಖಿಲ ಭಾರತ ಕೆಥೊಲಿಕ್ ಯೂನಿಯನ್ ಅಧ್ಯಕ್ಷ ಲ್ಯಾನ್ಸಿ ಡಿಕುನ್ಹ, ಪಿ.ಜೆ. ರಾಡ್ರಿಗಸ್, ಆಲ್ವಿನ್ ಪಾನೀರ್, ಲೇಡಿಹಿಲ್ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರಾದ ಭಗಿನಿ ಉಜ್ವಲಾ ಮನವಿ ಸಲ್ಲಿಸಿದರು.

ನಾಮಕರಣ

ನಗರದ ಅಂಬೇಡ್ಕರ್ ವೃತ್ತದಿಂದ ಲೈಟ್ ಹೌಸ್ ಮಾರ್ಗದ ಕೆಥೊಲಿಕ್‌ ಕ್ಲಬ್ ವರೆಗಿನ ರಸ್ತೆಗೆ ‘ಮೂಲ್ಕಿ ಸುಂದರರಾಮ ಶೆಟ್ಟಿ ರಸ್ತೆ’ ಎಂದು ನಾಮಕರಣ ಮಾಡಲು ಸರ್ಕಾರ ಆದೇಶ ನೀಡಿದು, ನಾಮಕರಣ ಕಾರ್ಯಕ್ರಮ ಬುಧವಾರ (ಇದೇ 23) ಬೆಳಿಗ್ಗೆ 9 ಕ್ಕೆ ಬಾವುಟಗುಡ್ಡೆಯ ಸಿಂಡಿಕೇಟ್ ಬ್ಯಾಂಕ್ ಪಕ್ಕದಲ್ಲಿ ನಡೆಯಲಿದೆ ಎಂದು ಮೇಯರ್ ದಿವಾಕರ್‌ ಪಾಂಡೇಶ್ವರ ತಿಳಿಸಿದ್ದಾರೆ.

ಈ ಹಿಂದೆ ‘ಮೂಲ್ಕಿ ಸುಂದರ ರಾಮ ಶೆಟ್ಟಿ ರಸ್ತೆ’ ಎಂದು ನಾಮಕರಣ ಮಾಡಲು ಸರ್ಕಾರ ಆದೇಶಿಸಿತ್ತು. ಇದಕ್ಕೆ ಆಕ್ಷೇಪಣೆ ಬಂದಿದ್ದರಿಂದ ಸರ್ಕಾರ ರಸ್ತೆ ನಾಮಕರಣವನ್ನು ತಡೆ ನೀಡಿತ್ತು. ಇದೀಗ ತಡೆ ಆದೇಶವನ್ನು ಸರ್ಕಾರ ಹಿಂಪಡೆದಿದ್ದು, ಈ ರಸ್ತೆಗೆ ಮರು ನಾಮಕರಣ ಮಾಡುವಂತೆ ಆದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.