ADVERTISEMENT

ಮಂಗಳೂರು | ಮೀನುಗಾರಿಕೆ ಬಂದರು ಯೋಜನೆ ಮರು ಆರಂಭಿಸಿ: ಮನವಿ

ರಾಜ್ಯ ಸರ್ಕಾರದ ಮೀನುಗಾರಿಕಾ ನಿರ್ದೇಶಕರಿಗೆ ಎನ್‌ಎಂಪಿಎ ಮನವಿ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2025, 14:55 IST
Last Updated 21 ಮಾರ್ಚ್ 2025, 14:55 IST
ಕುಳಾಯಿಯಲ್ಲಿ ನಡೆಯುತ್ತಿರುವ ಮೀನುಗಾರಿಕಾ ಬಂದರಿನ ಕಾಮಗಾರಿಯ ದೃಶ್ಯ
ಕುಳಾಯಿಯಲ್ಲಿ ನಡೆಯುತ್ತಿರುವ ಮೀನುಗಾರಿಕಾ ಬಂದರಿನ ಕಾಮಗಾರಿಯ ದೃಶ್ಯ   

ಮಂಗಳೂರು: ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯ, ನವ ಮಂಗಳೂರು ಬಂದರು ಪ್ರಾಧಿಕಾರ ಮತ್ತು ಕರ್ನಾಟಕ ಸರ್ಕಾರದ ಜಂಟಿ ಪ್ರಯತ್ನದಿಂದ ಕುಳಾಯಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ಅತ್ಯಾಧುನಿಕ ಮೀನುಗಾರಿಕಾ ಬಂದರನ್ನು ಕೆಲವರ ಅಪ್ರಸ್ತುತ, ಆಧಾರರಹಿತ ಆರೋಪಗಳಿಂದ ಸ್ಥಗಿತಗೊಳಿಸಲಾಗಿದೆ. ಕಾಮಗಾರಿಯನ್ನು ಮರು ಆರಂಭಿಸಬೇಕು ಎಂದು ರಾಜ್ಯ ಸರ್ಕಾರದ ಮೀನುಗಾರಿಕಾ ನಿರ್ದೇಶಕರಿಗೆ ಎನ್‌ಎಂಪಿಎ ಮನವಿ ಮಾಡಿದೆ.

ಜಿಲ್ಲೆಯ ಮೀನುಗಾರ ಸಮುದಾಯಕ್ಕೆ ಗುಣಮಟ್ಟದ ಮತ್ತು ಉತ್ತಮ ಸವಲತ್ತು ಒದಗಿಸುವ ದೃಷ್ಟಿಯಿಂದ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಯೋಜನೆಯ ಅನುಷ್ಠಾನದಲ್ಲಿ ಜೋಡಣೆ, ಬ್ರೇಕ್‌ವಾಟರ್‌ ವಿನ್ಯಾಸ ಮತ್ತು ಪ್ರಶಾಂತತೆಗೆ ಸಂಬಂಧಿಸಿ ಕೆಲವು ಕಳವಳಗಳನ್ನು ಉಲ್ಲೇಖಿಸಿ ಶೇ 49 ಜೆ.ವಿ ಪಾಲುದಾರ ಸಂಸ್ಥೆ ಮೆಸರ್ಸ್ ಜಿಸಿಸಿಯಿಂದ ದೂರು ಬಂದಿತ್ತು.

ಬಂದರು ಪ್ರಾಧಿಕಾರ ಮಂಡಳಿಯ ಸೂಕ್ತ ಅನುಮೋದನೆಯ ನಂತರ, ಜಿಸಿಸಿ, ಶೇ 49 ಜೆವಿ ಪಾಲುದಾರರು ಎತ್ತಿದ ಸಮಸ್ಯೆಗಳನ್ನು ಪರಿಶೀಲಿಸಲು ಎನ್‌ಐಒ ಗೋವಾ, ಎನ್‌ಐಒಟಿ ಚೆನ್ನೈ ಮತ್ತು ಎನ್‌ಸಿಸಿಆರ್ ಚೆನ್ನೈನಿಂದ ತಲಾ ಒಬ್ಬರು ಸೇರಿ ಮೂವರು ತಜ್ಞರನ್ನು ಒಳಗೊಂಡ ತಾಂತ್ರಿಕ ಸಮಿತಿ ರಚಿಸಲಾಗಿತ್ತು. ಮೂವರು ಸದಸ್ಯರ ತಾಂತ್ರಿಕ ಸಮಿತಿಯು ಕುಳಾಯಿ ಮೀನುಗಾರಿಕಾ ಬಂದರಿಗೆ ಭೇಟಿ ನೀಡಿ ಯೋಜನೆಗೆ ಸಂಬಂಧಿಸಿದ ದಾಖಲೆ, ಸುರತ್ಕಲ್‌ನ ಎನ್‌ಐಟಿಕೆಯ ವರದಿಗಳನ್ನು ಪರಿಶೀಲಿಸಿತ್ತು. ಜ.6ರಂದು ನಡೆಸಿದ ಇತ್ತೀಚಿನ ಆರ್‌ಟಿಕೆ ಸಮೀಕ್ಷೆಯ ಆಧಾರದಲ್ಲಿ ನಿರ್ಮಿಸಲಾದ ಬ್ರೇಕ್‌ವಾಟರ್‌ನ ವಿನ್ಯಾಸ ಮತ್ತು ಜೋಡಣೆಯು ಎನ್‌ಎಂಪಿಎ ಟೆಂಡರ್‌ನಲ್ಲಿ ಹೇಳಲಾದ ಮೂಲ ವಿನ್ಯಾಸದೊಂದಿಗೆ ಹೊಂದಿಕೆಯಾಗುತ್ತದೆ ಎಂದು ತೀರ್ಮಾನಿಸಿತ್ತು ಎಂದು ಎನ್‌ಎಂಪಿಎ ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ಶೇ 49  ಜೆವಿ ಪಾಲುದಾರ ಜಿಸಿಸಿ ಎತ್ತಿದ ಸಮಸ್ಯೆ, ದೂರುಗಳನ್ನು ಪರಿಶೀಲಿಸಲು ಎನ್‌ಎಂಪಿಎಯ ವಿಜಿಲೆನ್ಸ್ ವಿಭಾಗವು ಸ್ವತಂತ್ರವಾಗಿ ಕ್ಯಾಲಿಕಟ್‌ನ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯನ್ನು ನೇಮಿಸಿತ್ತು. ಅದರಂತೆ, ಸಾಗರಶಾಸ್ತ್ರ ಮತ್ತು ಬ್ರೇಕ್‌ವಾಟರ್‌ಗಳ ನಿರ್ಮಾಣದಲ್ಲಿ ಪರಿಣತಿಯನ್ನು ಹೊಂದಿರುವ ಎನ್‌ಐಟಿಸಿ ಸ್ಥಳ ಪರಿಶೀಲಿಸಿತ್ತು. ಫೆ.24ರಂದು ವಿಜಿಲೆನ್ಸ್ ಇಲಾಖೆ ಮತ್ತು ಸಿವಿಲ್ ಎಂಜಿನಿಯರಿಂಗ್ ಇಲಾಖೆಯು ಎನ್‌ಎಂಪಿಎ ಸಮ್ಮುಖದಲ್ಲಿ ಕ್ಷೇತ್ರ ಸಮೀಕ್ಷೆಯನ್ನು ನಡೆಸಿತ್ತು.

ಸ್ಥಳೀಯ ಮೀನುಗಾರರು, ಮೀನುಗಾರಿಕೆ ಇಲಾಖೆ, ಸರ್ಕಾರ ಮತ್ತು ಮೆ.ಎಸ್‌ಜಿಸಿಸಿ ಮಂಗಳೂರು ಎತ್ತಿರುವ ಆತಂಕಗಳು ಅಸಮರ್ಪಕವಾದುದು ಎಂದು ಎನ್‌ಐಟಿಸಿ ವರದಿಯಲ್ಲಿ ತಿಳಿಸಿದೆ. ಬ್ರೇಕ್‌ವಾಟರ್ ವಿನ್ಯಾಸ, ಜೋಡಣೆ ಮತ್ತು ನಿರ್ಮಾಣಕ್ಕೆ ಸಂಬಂಧಿಸಿದಂತೆ ತ್ರಿಸದಸ್ಯ ತಜ್ಞರ ಸಮಿತಿ ಮತ್ತು ಎನ್‌ಐಟಿಕೆ ಸುರತ್ಕಲ್ ಎರಡರ ಅಭಿಪ್ರಾಯಗಳನ್ನು ಎನ್‌ಐಟಿಸಿ ಸಮರ್ಥಿಸಿದೆ. ಬ್ರೇಕ್‌ವಾಟರ್‌ನ ನಿರ್ಮಿತ ಭಾಗವು ಎನ್‌ಎಂಪಿಎ ಸಲ್ಲಿಸಿದ ಮೂಲ ವಿನ್ಯಾಸಕ್ಕೆ ಹೊಂದಿಕೆಯಾಗುತ್ತದೆ ಎಂದೂ ಒಪ್ಪಿಕೊಂಡಿದೆ.

ಪುಣೆಯ ಸಿಡಬ್ಲ್ಯೂಪಿಆರ್‌ಎಸ್‌ ತ್ರಿಸದಸ್ಯ ಸಮಿತಿಯ ವರದಿಗಳು ಮತ್ತು ಕ್ಯಾಲಿಕಟ್‌ನ ಎನ್ಐಟಿಯಿಂದ ಬಂದ ವರದಿ ಆಧರಿಸಿ ಮೀನುಗಾರ ಸಮುದಾಯದ ಹಿತದೃಷ್ಟಿಯಿಂದ ಕುಳಾಯಿ ಮೀನುಗಾರಿಕಾ ಬಂದರಿನಲ್ಲಿ ಕೆಲಸವನ್ನು ತಕ್ಷಣ ಪುನರಾರಂಭಿಸಲು ಅನುಮತಿ ನೀಡಬೇಕು ಎಂದು ಪತ್ರಗಳ ಮೂಲಕ ಕರ್ನಾಟಕ ಸರ್ಕಾರದ ಮೀನುಗಾರಿಕೆ ನಿರ್ದೇಶಕರನ್ನು ಎನ್‌ಎಂಪಿಎ ಕೋರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.