ADVERTISEMENT

ಪ್ರತಿ ವಾರ ಕಾಮಗಾರಿಗಳ ಪ್ರಗತಿ ಪರಿಶೀಲಿಸಿ

ಶಾಸಕರ ನಿಧಿ: ಉಪ ವಿಭಾಗಾಧಿಕಾರಿಗಳಿಗೆ ಕಾಗೇರಿ ಸೂಚನೆ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2021, 14:27 IST
Last Updated 27 ಆಗಸ್ಟ್ 2021, 14:27 IST
ಮಂಗಳೂರಿನಲ್ಲಿ ಶುಕ್ರವಾರ ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಮಂಗಳೂರಿನಲ್ಲಿ ಶುಕ್ರವಾರ ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.   

ಮಂಗಳೂರು: ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ಜಿಲ್ಲೆಯಲ್ಲಿ ಅನುಷ್ಠಾನ ಆಗುತ್ತಿರುವ ಕಾಮಗಾರಿಗಳನ್ನು ಉಪ ವಿಭಾಗಾಧಿಕಾರಿಗಳು ಪ್ರತಿ ವಾರ ಪ್ರಗತಿ ಪರಿಶೀಲನೆ ನಡೆಸಿ, ಕಾಮಗಾರಿಗಳಿಗೆ ಚುರುಕು ಮುಟ್ಟಿಸಬೇಕು ಎಂದು ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ನಿರ್ದೇಶನ ನೀಡಿದರು.

ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ನಡೆದ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆಯಡಿ ಕೈಗೊಳ್ಳಲಾದ ಕಾಮಗಾರಿಗಳ ಮಂಜೂರಾತಿ ಹಾಗೂ ಅವುಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರತಿ ಶಾಸಕರಿಗೆ ಅವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಭಿವೃದ್ಧಿಗಾಗಿ ಅಗತ್ಯವಿರುವ ಕಾಮಗಾರಿಗಳನ್ನು ಕೈಗೊಳ್ಳಲು ₹2 ಕೋಟಿ ಅನುದಾನ ನೀಡಲಾಗುತ್ತಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಅತಿಯಾದ ಕಾರ್ಯಬಾಹುಳ್ಯದ ಕಾರಣ ಈ ಕಾಮಗಾರಿಗಳ ಮೇಲ್ವಿಚಾರಣೆಯನ್ನು ಕಳೆದ ವರ್ಷದಿಂದ ಉಪ ವಿಭಾಗಾಧಿಕಾರಿಗೆ ವಹಿಸಲಾಯಿತು. ಅದಾಗ್ಯೂ ನಿರೀಕ್ಷಿತ ಪ್ರಗತಿಯಾಗುತ್ತಿಲ್ಲ. ಹಾಗಾಗಿ ತಳಮಟ್ಟದಿಂದ ಸಮಸ್ಯೆಗಳನ್ನು ಅರಿತು ಅದರ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ADVERTISEMENT

ತಾಂತ್ರಿಕ ಹಾಗೂ ಆಡಳಿತಾತ್ಮಕ ಕಾರಣಗಳಿಂದ ಕಾಮಗಾರಿಗಳು ವಿಳಂಬವಾಗಬಾರದು. ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯ ಕಾಮಗಾರಿಗಳ ಅನುಷ್ಠಾನ ಗಂಭೀರ ವಿಷಯವಾಗಿದ್ದು, ಪರಿಣಾಮಕಾರಿ ಅನುಷ್ಠಾನಕ್ಕೆ ಅಧಿಕಾರಿಗಳು ಶ್ರಮವಹಿಸಬೇಕು ಎಂದರು.

ಒಂದೇ ಏಜೆನ್ಸಿಯ ಬದಲು ಹಲವು ಏಜೆನ್ಸಿಗಳ ಮೂಲಕ ನಿರ್ವಹಿಸುವುದು ಉತ್ತಮ. ಕಾಮಗಾರಿ ಪೂರ್ಣಗೊಂಡ ನಂತರ ಮೂರನೇ ವ್ಯಕ್ತಿ ತಪಾಸಣೆ ಶೀಘ್ರವಾಗಿ ಆಗಬೇಕು. ನಿರ್ವಹಿಸಲಾದ ಕಾಮಗಾರಿಗಳು, ಅದಕ್ಕೆ ಬಿಡುಗಡೆಯಾದ ವೆಚ್ಚ, ಭರಿಸಲಾದ ಮೊತ್ತದ ವಿವರವನ್ನು ಕಾಲಕಾಲಕ್ಕೆ ಸಾಫ್ಟ್‌ವೇರ್‌ನಲ್ಲಿ ಅಪ್‌ಡೇಟ್ ಮಾಡಬೇಕು. ನಿರ್ವಹಿಸುವ ಏಜೆನ್ಸಿಗಳು ತ್ವರಿತಗತಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ತಿಳಿಸಿದರು.

ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಮೂಲಕ ನಿರ್ವಹಿಸಲಾಗುತ್ತಿರುವ ಕಾಮಗಾರಿಗಳಲ್ಲಿ ಅಲ್ಲಿನ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳು ವಹಿಸುತ್ತಿರುವ ಕ್ರಮಗಳನ್ನು ಉಪ ವಿಭಾಗಾಧಿಕಾರಿ ನೇರವಾಗಿಯೇ ಮೇಲ್ವಿಚಾರಣೆ ಮಾಡಬಹುದಾಗಿದೆ ಎಂದರು.
ಕಾಮಗಾರಿಗಳನ್ನು ದಾಖಲು ಮಾಡುವ ಸಾಫ್ಟ್‌ವೇರ್‌ನಲ್ಲಿ ಸಮಸ್ಯೆ ಎದುರಾದಲ್ಲಿ ಕೂಡಲೇ ಗಮನಕ್ಕೆ ತರಬೇಕು. ಉಪ ವಿಭಾಗಾಧಿಕಾರಿಗಳು ಉತ್ಸಾಹದಿಂದ ಕಾಮಗಾರಿ ಪೂರ್ಣಗೊಳಿಸಲು ಮುಂದಾಗಬೇಕು ಎಂದು ತಿಳಿಸಿದರು.

ಶಾಸಕರ ಪ್ರದೇಶಾಭಿವೃದ್ದಿ ಯೋಜನೆಯಡಿ ಅಗತ್ಯ ಕಾಮಗಾರಿಗಳನ್ನು ನಿರ್ವಹಿಸಲು ಎಲ್ಲ ಶಾಸಕರು ಹಾಗೂ ಅಧಿಕಾರಿಗಳು ಸಂಪೂರ್ಣವಾಗಿ ಜವಾಬ್ದಾರರು. ರಾಜ್ಯದಲ್ಲಿ ಅಂದಾಜು ₹ 1 ಸಾವಿರ ಕೋಟಿ ಅನುದಾನ ಈ ರೀತಿಯ ಕಾಮಗಾರಿಗಳಿಂದಾಗಿ ಬಾಕಿ ಉಳಿದಿದ್ದು, ಜಿಲ್ಲಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿಗೆ ಸೇರಿದ ವಿವಿಧ ಪಿಡಿ ಖಾತೆಗಳಲ್ಲಿ ಉಳಿದಿದೆ ಎಂದು ಹೇಳಿದರು.

ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ರಾಜೇಶ್ ಬಂಟ್ವಾಳ, ಡಾ. ವೈ.ಭರತ್ ಶೆಟ್ಟಿ, ಹರೀಶ್ ಪೂಂಜ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಪ್ರಜ್ಞಾ ಅಮ್ಮೆಂಬಳ, ಉಪ ವಿಭಾಗಾಧಿಕಾರಿ ಮದನ್ ಮೋಹನ್, ಅಧಿಕಾರಿಗಳು ಪಾಲ್ಗೊಂಡಿದ್ದರು.

ದ.ಕ.: ₹32 ಕೋಟಿ ಬಾಕಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ₹32 ಕೋಟಿ ಶಾಸಕರ ನಿಧಿ ಬಳಕೆಯಾಗದೆ ಜಿಲ್ಲಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿ ಖಾತೆಗಳಲ್ಲಿವೆ. ಇದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಜಿಲ್ಲಾಧಿಕಾರಿ ಮಟ್ಟದಲ್ಲಿ ಈ ಬಗ್ಗೆ ಒಂದು ವಾರದಲ್ಲಿ ಸಭೆ ನಡೆಸಿ ಸಮಗ್ರ ವರದಿ ಸಲ್ಲಿಸಲು ಸೂಚಿಸಲಾಗಿದೆ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

ಶಾಸಕರ ನಿಧಿ ಬಿಡುಗಡೆಯಲ್ಲಿ ವಿಳಂಬ ಒಂದೆಡೆಯಾದರೆ, ಬಿಡುಗಡೆ ಆದ ನಿಧಿಯನ್ನು ಸಮಪರ್ಕವಾಗಿ ಬಳಕೆ ಮಾಡುವಲ್ಲಿಯೂ ತಾಂತ್ರಿಕ ಕಾರಣ ಸೇರಿದಂತೆ ಹಲವಾರು ಸಮಸ್ಯೆಗಳು ಇರುವುದು ಗಮನಕ್ಕೆ ಬಂದಿದೆ. ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸಿ, ಶಾಸಕರ ಮಟ್ಟದಲ್ಲಿ 15 ದಿನಗಳಿಗೊಮ್ಮೆ ಸಭೆ ನಡೆಸಿ ವರದಿ ನೀಡುವ ಮೂಲಕ ವ್ಯವಸ್ಥಿತವಾಗಿ ಬಳಕೆ ಮಾಡಲು ಸೂಚಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.