ADVERTISEMENT

ಆಯೋಗ ನೀಡುವ ನೋಟಿಸ್‌ಗೆ ಒಂದು ತಿಂಗಳೊಳಗೆ ಉತ್ತರಿಸಿ: ರೂಪಕ ಕುಮಾರ ದತ್ತ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2018, 7:52 IST
Last Updated 30 ಅಕ್ಟೋಬರ್ 2018, 7:52 IST
ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ರೂಪಕ ಕುಮಾರ್ ದತ್ತ
ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ರೂಪಕ ಕುಮಾರ್ ದತ್ತ   

ಕಾರವಾರ: 'ಮಾನವ ಹಕ್ಕುಗಳ ಉಲ್ಲಂಘನೆ ಬಗ್ಗೆ ನಮ್ಮ ಆಯೋಗ ನೀಡುವ ನೋಟಿಸ್ ಗೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಒಂದು ತಿಂಗಳ ಒಳಗೆ ಪ್ರತಿಕ್ರಿಯಿಸಬೇಕು. ಇದು ತಡವಾದರೆ ನೆನಪೋಲೆ (ರಿಮೈಂಡರ್) ಕಳುಹಿಸುವುದಿಲ್ಲ. ಬದಲಾಗಿ ಅಧಿಕಾರಿಗಳಿಗೆ ಸಮನ್ಸ್ ಜಾರಿ ಮಾಡಲಾಗುವುದು' ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ರೂಪಕ ಕುಮಾರ್ ದತ್ತ ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಮಾನವ ಹಕ್ಕುಗಳ ಆಯೋಗದ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

'ಎಂಟು ತಿಂಗಳ ಹಿಂದೆ ನಾವು ಅಧಿಕಾರ ವಹಿಸಿಕೊಂಡಾಗ ಆಯೋಗದಲ್ಲಿ 5000ಕ್ಕೂ ಅಧಿಕ ಪ್ರಕರಣಗಳು ವಿಲೇವಾರಿಗೆ ಬಾಕಿಯಿದ್ದವು. ಅವುಗಳನ್ನು ಶೀಘ್ರವಾಗಿ ವಿಚಾರಣೆ ಮಾಡಲಾಗುತ್ತಿದೆ. ಈ ಮೊದಲು ನೋಟಿಸ್‌ಗಳಿಗೆ ಉತ್ತರಿಸಲು ಒಂದೂವರೆ ತಿಂಗಳ ಕಾಲಾವಕಾಶ ನೀಡಲಾಗಿತ್ತು. ಇದನ್ನು ಕಡಿಮೆ ಮಾಡಲಾಗಿದೆ. ದೂರು ದಾಖಲಾದ ಬಳಿಕ ಮೂರು ತಿಂಗಳೊಳಗೆಬಗೆಹರಿಸುವುದು ನಮ್ಮ ಗುರಿಯಾಗಿದೆ' ಎಂದು ತಿಳಿಸಿದರು.

ADVERTISEMENT

ಗಂಭೀರವಾಗಿ ಪರಿಗಣಿಸಿ: 'ಮಾನವ ಹಕ್ಕುಗಳ ಆಯೋಗದಿಂದ ಬರುವ ನೋಟಿಸ್ ಗಳನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು. ತಮ್ಮ ಕಿರಿಯ ಅಧಿಕಾರಿಗಳಿಗೆ ಫಾರ್ವರ್ಡ್ ಮಾಡಿ ನಮಗೊಂದು ಪ್ರತಿ (ಸಿ.ಸಿ) ಕಳುಹಿಸುವುದನ್ನು ನಾವು ಒಪ್ಪುವುದಿಲ್ಲ. ನೋಟಿಸ್‌ನಲ್ಲಿ ಉಲ್ಲೇಖಿತರೇ ಉತ್ತರಿಸಬೇಕು' ಎಂದು ತಾಕೀತು ಮಾಡಿದರು.

'ನೊಂದವರು ಸ್ಥಳೀಯಮಟ್ಟದಲ್ಲಿ ತಮ್ಮ ಸಮಸ್ಯೆ ಬಗೆಹರಿಯದಿದ್ದಾಗ ಜಿಲ್ಲಾಮಟ್ಟದ ಅಧಿಕಾರಿಗಳ ಮೊರೆ ಹೋಗುತ್ತಾರೆ. ಅಲ್ಲೂ ಸಮಸ್ಯೆಗೆ ಪರಿಹಾರ ಸಿಗದ್ದಿದ್ದರೆ ಆಯೋಗಕ್ಕೆ ಬರುತ್ತಾರೆ. ಇಲ್ಲೂ ಆಗದಿದ್ದರೆ ಅವರು ಎಲ್ಲಿಗೆ ಹೋಗಬೇಕು? ಆದ್ದರಿಂದ ನೋಟಿಸ್ ಅನ್ನು ಗಂಭೀರವಾಗಿ ಪರಿಗಣಿಸಿ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.